ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಚಿತ್ರದುರ್ಗ, (ಡಿ.11): ಭಾರತದಲ್ಲಿ ಒಂದೊಂದು ಧರ್ಮಕ್ಕೆ ಒಂದೊಂದು ಕಾನೂನು ಏಕೆ ಬೇಕು? ಒಂದು ದೇಶ ಅಂದ ಮೇಲೆ ಎಲ್ಲರಿಗೂ ಒಂದೆ ಕಾನೂನು ಇರಬೇಕೆಂದು ಸರಸ್ವತಿ ಕಾನೂನು ಕಾಲೇಜಿನ ಪ್ರೊ.ಎನ್.ಡಿ.ಗೌಡ ಅಭಿಪ್ರಾಯಪಟ್ಟರು.

ರೋಟರಿ ಬಾಲಭವನದಲ್ಲಿ ನಡೆದ ಚಿನ್ಮುಲಾದ್ರಿ ರೋಟರಿ ಕ್ಲಬ್‍ನ ವಾರದ ಸಭೆಯಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕ್ರಿಮಿನಲ್ ಕಾನೂನು ಎಲ್ಲಾ ಜಾತಿ ಧರ್ಮಕ್ಕೂ ಸಮಾನವಾಗಿರುವಂತೆ ವೈಯಕ್ತಿಕ ಕಾನೂನು ಬಂದಾಗ ಹಿಂದು ಧರ್ಮಕ್ಕೆ ಬೇರೆ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮಕ್ಕೆ ಏಕೆ ಬೇರೆ ಇರಬೇಕು. ಒಂದು ದೇಶವೆಂದ ಮೇಲೆ ಒಂದೆ ಕಾನೂನು ಎಲ್ಲಾ ಜಾತಿ ಧರ್ಮಕ್ಕೂ ಅನ್ವಯಿಸಬೇಕು. ಹಿಂದು ಧರ್ಮದಲ್ಲಿ ಒಬ್ಬ ಪುರುಷ ಒಂದಕ್ಕಿಂತ ಹೆಚ್ಚು ಮದುವೆಯಾದರೆ ಅಪರಾಧವೆನ್ನುವುದಾದರೆ ಮುಸ್ಲಿಂ ಧರ್ಮದಲ್ಲಿ ಹೆಂಡತಿಗೆ ತಲಾಖ್ ಕೊಟ್ಟು ಇನ್ನೊಂದು ಮದುವೆಯಾಗಬಹುದು. ಇದಕ್ಕೆ ಕಾನೂನು ಅನ್ವಯಿಸುವುದಿಲ್ಲವೆ ಎಂದು ಪ್ರಶ್ನಿಸಿದರು.
ಕ್ರಿಮಿನಲ್ ಕೋಡ್ ಎಲ್ಲರಿಗೂ ಕಾಮನ್ ಇದ್ದಾಗ, ವೈಯಕ್ತಿಕ ಸಿವಿಲ್ ಸಂಹಿತೆ ಪ್ರಶ್ನೆ ಬಂದಾಗ ಬೇರೆ ಬೇರೆ ಕಾನೂನು ಏಕೆ? ಒಂದೆ ದೇಶದಲ್ಲಿ ಒಂದೊಂದು ಜಾತಿ ಧರ್ಮಕ್ಕೆ ಒಂದೊಂದು ಕಾನೂನು ಏಕೆ ಬೇಕು. ಏಕ ರೀತಿಯ ಕಾನೂನು ಒಳ್ಳೆಯದು ಎಂದು ಹೇಳಿದರು.
ಚಿನ್ಮುಲಾದ್ರಿ ರೋಟರಿ ಕ್ಲಬ್‍ನ ನಿಕಟಪೂರ್ವ ಅಧ್ಯಕ್ಷ ನಾಗರಾಜ್ ಸಂಗಂ ಅಧ್ಯಕ್ಷತೆ ವಹಿಸಿದ್ದರು.
ಜಂಟಿ ಕಾರ್ಯದರ್ಶಿ ಮಳಲಿ, ಎಂ.ರಂಗಪ್ಪ, ಲವಕುಮಾರ್, ಶಿಲ್ಪ, ದಿವಾಕರ್ ವೇದಿಕೆಯಲ್ಲಿದ್ದರು.
ಹೆಲಿಕ್ಯಾಪ್ಟರ್ ದುರಂತದಲ್ಲಿ ಮಡಿದ ಹದಿಮೂರು ಮಂದಿ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಿ ಆತ್ಮಕ್ಕೆ ಶಾಂತಿ ಕೋರಲಾಯಿತು.

