ಬೆಂಗಳೂರು: ಕಾಂಗ್ರೆಸ್ ಪಾಳಯದಲ್ಲಿ ಸಿಎಂ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಡಿಕೆ ಶಿವಕುಮಾರ್ ಅವರು ಸಿಎಂ ಹುದ್ದೆಯನ್ನು ಅಲಂಕರಿಸುತ್ತಾರೆ ಎನ್ನುವಾಗಲೇ ದಲಿತ ಸಿಎಂ ಆಗಿ ಖರ್ಗೆ ಅವರನ್ನು ಕೂರಿಸುತ್ತಾರೆ ನೋಡಿ ಎಂಬ ಮಾತುಗಳೆಲ್ಲಾ ಓಡಾಡಿದವು. ಆದರೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಒಂದು ಸೀರಿಯಸ್ ಪ್ರಶ್ನೆಯನ್ನ ಕೇಳಿದ್ದಾರೆ. ಕಾಂಗ್ರೆಸ್ ನಲ್ಲಿ ಖರ್ಗೆ ಅವರನ್ನು ಸಿಎಂ ಆಗುದಂತೆ ತಪ್ಪಿಸಿದ್ದು ಯಾರು ಎಂಬ ಪ್ರಶ್ನೆಯನ್ನ ಕೇಳಿ ಕುತೂಹಲ ಹುಟ್ಟುಹಾಕಿದ್ದಾರೆ.
ಸಿದ್ದರಾಮಯ್ಯನವರೇ, ಸಾಮಾಜಿಕ ನ್ಯಾಯ, ಮೀಸಲಾತಿ, ಸಂವಿಧಾನದ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ನೀವು ಮತ್ತು ನಿಮ್ಮ ಕಾಂಗ್ರೆಸ್ಸಿನ ಅಸಲಿ ಮುಖವಾಡ ಏನೆಂಬುದು ರಾಜ್ಯದ ಹಾಗೂ ದೇಶದ ಜನತೆಗೆ ತಿಳಿಯಲಿ ಎಂಬ ಕಾರಣದಿಂದ ಅತ್ಯಂತ ಗೌರವದಿಂದ ನಿಮ್ಮ ಕಾಳಜಿ ನೈಜವೇ ಆಗಿದ್ದರೆ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಸ್ಥಾನದ ಅಭ್ಯರ್ಥಿ ಎಂದು ಘೋಷಿಸಿ ಎಂಬ ಸಲಹೆ ನೀಡಿದ್ದೆ, ಆ ಸಲಹೆಯನ್ನು ನೀವು ಸಕಾರಾತ್ಮಕವಾಗಿ ಸ್ವೀಕರಿಸುವ ಬದಲು ಹತಾಶೆಯಿಂದ ಸಮರ್ಥನೀಯವಲ್ಲದ ಉತ್ತರ ನೀಡಿದ್ದೀರಿ.
ಮಾನ್ಯ ಖರ್ಗೆ ಅವರಿಗೆ ಅವಕಾಶವಿದ್ದರೂ ಅವರ ಹಿರಿತನವನ್ನು ಬದಿಗೆ ಸರಿಸಿ ಮುಖ್ಯಮಂತ್ರಿ ಸ್ಥಾನ ನೀಡದೇ ವಂಚಿಸಿದ್ದು ಕಾಂಗ್ರೆಸ್ ಅಲ್ಲವೇ? ಕರ್ನಾಟಕದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಅರ್ಹ ನಾಯಕರು ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿಸಿದವರು ಯಾರು? ಎಂಬ ಪ್ರಶ್ನೆಗೆ ಇತಿಹಾಸದ ಪುಟಗಳಲ್ಲಿ ಉತ್ತರ ಶಾಶ್ವತವಾಗಿ ಅಚ್ಚೊತ್ತಿದೆ. ನಿಮ್ಮ “ಅಹಿಂದ ಕಾಳಜಿ” ಏನೆಂಬುದು ನಾಡಿನ ಎಲ್ಲಾ ಸಮುದಾಯಗಳಿಗೆ ಸ್ಪಷ್ಟವಾಗಿ ಗೊತ್ತಿದೆ, ಯಾವುದೇ ಕ್ಷಣದಲ್ಲಿ ಅದು ಸ್ಫೋಟಗೊಳ್ಳಲಿದೆ, ಅದಕ್ಕಾಗಿ ದಿನಗಣನೆ ಆರಂಭವಾಗಿದೆ.
ನಿಮ್ಮ ಕರ್ನಾಟಕ ಪಕ್ಷದಲ್ಲಿ ಅಸಡ್ಡೆಗೊಳಗಾಗಿದ್ದ ಛಲವಾದಿ ನಾರಾಯಣಸ್ವಾಮಿ ಅವರನ್ನು ಬಿಜೆಪಿಯ ಪ್ರವೇಶ ದ್ವಾರದಲ್ಲೇ ಸ್ವಾಗತದೊಂದಿಗೆ ಪಕ್ಷದ ಸಂಘಟನೆಯ ಮಹತ್ವದ ಹುದ್ದೆ ನೀಡಲಾಯಿತು. ವಿಧಾನ ಪರಿಷತ್ತಿಗೆ ಕಳುಹಿಸಿ ಸಾಂವಿಧಾನಿಕ ಹುದ್ದೆಯಾದ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಕುಳ್ಳಿರಿಸಿ ಅವರ ಅರ್ಹತೆ ಹಾಗೂ ಸಾಮರ್ಥ್ಯಕ್ಕೆ ತಕ್ಕಂತೆ ಗೌರವಿಸಿದ್ದೇವೆ.
ಗೋವಿಂದ ಕಾರಜೋಳ ಅವರು ನಮ್ಮ ಹಿರಿಯರಿದ್ದಾರೆ, ಉಪಮುಖ್ಯಮಂತ್ರಿ ಗಳಾಗಿದ್ದವರು, ಪ್ರಸ್ತುತ ಸಂಸದರಾಗಿದ್ದಾರೆ. ಭವಿಷ್ಯತ್ತಿನಲ್ಲಿ ಅವರು ಅತ್ಯುನ್ನತ ಸ್ಥಾನಕ್ಕೇರುವ ಎಲ್ಲಾ ಅವಕಾಶಗಳ ಬಾಗಿಲು ಅವರಿಗಾಗಿ ತೆರೆದೇ ಇದೆ. ಪರಿಶಿಷ್ಟರು ಹಾಗೂ ಹಿಂದುಳಿದ ವರ್ಗಗಳ ಸಮುದಾಯದವರಿಗೆ ಗೌರವ ಕೊಡುವುದನ್ನು ನಾವು ನಿಮ್ಮಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















