ಬೆಂಗಳೂರು: ಈ ಬಾರಿಯ ನಾಡಹಬ್ಬ ದಸರಾ ಉದ್ಘಾಟನೆಯನ್ನು ಸಂಗೀತ ನಿರ್ದೇಶಕ ಹಂಸಲೇಖ ಅವರು ಮಾಡಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಮೈಸೂರಿನಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ಈ ಸಂಬಂಧ ಹಂಸಲೇಖ ಅವರು ಅತೀವ ಸಂತಸ ವ್ಯಕ್ತಪಡಿಸಿದ್ದು, ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಹಂಸಲೇಖ ಅವರು, ಈ ಸುದ್ದಿ ಕೇಳಿ ತುಂಬಾ ಖುಷಿ ಆಯ್ತು. ದಸರಾ ಅನ್ನೋದು ನಾಲ್ವಡಿಕೃಷ್ಣರಾಜ ಒಡೆಯರ್ ಅವರ ಕನಸು. ಉದ್ಘಾಟನೆ ಮಾಡುವುದಕ್ಕೆ ನನ್ನನ್ನು ಆಯ್ಕೆ ಮಾಡಿದ ರಾಜ್ಯ ಸರ್ಕಾರಕ್ಕೆ ಎಲ್ಲಾ ಕಲಾವಿದರ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ.
ನಾನು ಕಲಾಪ್ರತಿನಿಧಿಯಾಗಿದ್ದು, ಅವರ ಪರವಾಗಿ ದಸರಾ ದೀಪವನ್ನು ಹಚ್ಚುತ್ತೇನೆ. ಈಗ ದಸರ ಬಗ್ಗೆ ಒಂದು ಹಾಡು ಮಾಡೋಕೆ ಬಹಳ ಉತ್ಸುಕನಾಗಿದ್ದೇನೆ. ಸದ್ಯಕ್ಕೆ ಒಂದು ಸಾಲು ದಸರ ಬಗ್ಗೆ ಹಾಡುತ್ತೇನೆ. ‘ಬದುಕಿದ್ದು ಕನ್ನಡ ಭಿಕ್ಷೆ ಸಮರಸವೇ ನಮ್ಮ ರಕ್ಷೆ’ ಎಂದು ದಸರ ಹಬ್ಬದ ಸಂಭ್ರದಲ್ಲಿರುವ ಹಂಸಲೇಖಾ ಅವರು ಈ ಸಾಲನ್ನು ಹಾಡಿದ್ದಾರೆ.
ನಾನು ದಸರಾ ನೋಡೋದಕ್ಕೆ ಹೋಗ್ತಾ ಇದ್ದೆ. ಆಗ ನಮ್ಮಪ್ಪನ ಹೆಗಲ ಮೇಲೆ ಕೂರುತ್ತಿದ್ದೆ. ಅವೆಲ್ಲ ನನ್ನ ಅದ್ಭುತವಾದ ನೆನಪುಗಳು. ಜಯ ಹೇ ನಾಲ್ವಡಿ ಎಂಬ ಕಾರ್ಯಕ್ರಮ ಮಾಡಬೇಕೆಂಬ ಆಸೆ ಇದೆ. ಅದರಲ್ಲಿ ನನ್ನ ಸಾಹಿತ್ಯ ಸಂಗೀತವಿರುತ್ತದೆ. ಅದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಅನುಮತಿ ಕೊಡಬೇಕು ಅಷ್ಟೇ. ನಾನು ಅನಾರೋಗ್ಯದಲ್ಲಿದ್ದಾಗಲೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ನನ್ನ ಆರೋಗ್ಯ ವಿಚಾರಿಸಿದ್ರು. ಈ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.