ಹತ್ತಾರು ಸಾವಿರ ಮತಗಳ ಅಂತರದಲ್ಲಿ ನಾವು ಗೆಲ್ಲುತ್ತೇವೆ:ವಿ ಸೋಮಣ್ಣ

suddionenews
2 Min Read

ಬೆಂಗಳೂರು: ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರು, ನನ್ನ ಸ್ನೇಹಿತರು, ಬುದ್ಧಿವಂತರು. ಅವರ ಬಳಿ ಇರುವ ಮಾಹಿತಿ ಕುರಿತು ನನಗೆ ತಿಳಿದಿಲ್ಲ. ಸಚಿವರು ಐಟಿ ದಾಳಿ ನಡೆಸದಂತೆ ಒತ್ತಾಯಿಸಿದ್ದರೆ ಅವರ ಹೆಸರನ್ನು ಹೇಳಬೇಕಿತ್ತು ಎಂದು ವಿ ಸೋಮಣ್ಣ ಹೇಳಿದರು. ಐಟಿಯವರು ತಮ್ಮ ಕೆಲಸ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಅವರೂ ಹೇಳಿದ್ದಾರೆ. ಆದಾಯ ತೆರಿಗೆ ಇಲಾಖೆ ಯಾರ ಹಂಗಿನಲ್ಲೂ ಇಲ್ಲದ ಒಂದು ಸ್ವಾಯತ್ತ ಸಂಸ್ಥೆ. ಸಮರ್ಪಕವಾಗಿ ಮಾಹಿತಿ ಕ್ರೋಡೀಕರಿಸಿ ಅದು ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದರು.

ಆ ಪ್ರಕ್ರಿಯೆಗೆ ಸುಣ್ಣ- ಬಣ್ಣ ಮಾಡಿ ಮತ್ತೊಂದು ಡ್ರೆಸ್ ಮಾಡುವ ಅಗತ್ಯವಿಲ್ಲ. ಯಾವುದೇ ಸರಕಾರ ಇದ್ದರೂ ಎಲ್ಲರನ್ನೂ ಒಂದೇ ರೀತಿಯಿಂದ ನೋಡುತ್ತದೆ ಎಂದರು.

ಭ್ರಷ್ಟಾಚಾರ ಎಂಬುದು ಒಂದು ದೊಡ್ಡ ಅಂಟುಜಾಡ್ಯ. ಈ ಜಾಡ್ಯಕ್ಕೆ ಯಾರ್ಯಾರು ಪಿತಾಮಹರು ಎಂದು ಕೂಡ ನಿಮಗೂ ತಿಳಿದಿದೆ. ಭ್ರಷ್ಟಾಚಾರ ತಡೆಯಲು ಐಟಿ, ಇಡಿ ಇಲಾಖೆಗಳಿವೆ. ಭ್ರಷ್ಟಾಚಾರ ತಡೆಯಲು ಕೇಂದ್ರದ ಬಿಜೆಪಿ ಸರಕಾರವು ಈ ಇಲಾಖೆಗಳನ್ನು ಚುರುಕುಗೊಳಿಸಿ ಯಾರೇ ಭ್ರಷ್ಟರಿದ್ದರೂ ಅದನ್ನು ಸಹಿಸಲು ಸಾಧ್ಯವಿಲ್ಲ ಎಂಬ ಸಂದೇಶ ನೀಡಿರುವುದು ಮೆಚ್ಚುಗೆಯ ವಿಚಾರ ಎಂದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿಂತ ನೀರಲ್ಲ. ಕೇಂದ್ರದ ಆದಾಯ ತೆರಿಗೆ ಇಲಾಖೆ ತನ್ನ ಕರ್ತವ್ಯ ಮಾಡುವಾಗ ಅವನು ಯಾವ ಪಕ್ಷ, ಯಾರ ಜೊತೆ ಇದ್ದ, ಯಾರ ಪಿಎ ಎಂದು ನೋಡುವುದಿಲ್ಲ. ಅವೆಲ್ಲವೂ ಇಲ್ಲಿ ಗೌಣ. ಸಿಂದಗಿಯಲ್ಲಿ ಉಪ ಚುನಾವಣೆ ಪ್ರಚಾರ ಮಾಡಿದ್ದೇನೆ. ಅಭಿವೃದ್ಧಿ ಪರವಾಗಿ ಮತ್ತು ಬಿಜೆಪಿ ಪರವಾಗಿ ಜನರು ಬೆಂಬಲ ನೀಡಲಿದ್ದಾರೆ. ಹತ್ತಾರು ಸಾವಿರ ಮತಗಳ ಅಂತರದಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಸವಿನೆನಪಿಗಾಗಿ ಹಿನ್ನೆಲೆಯಲ್ಲಿ ರೈತ ಮೋರ್ಚಾ ವತಿಯಿಂದ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಮತ್ತು ಪ್ಲಾಸ್ಟಿಕೇತರ ಬ್ಯಾಗ್ ಬಳಕೆ ಮಾಡುವ ಕಾರ್ಯಕ್ಕೆ ಚಾಲನೆ ಕೊಡಲಾಗಿದೆ ಎಂದರು.
ಇಲಾಖೆಯ ಯೋಜನೆಗಳು ಮತ್ತು ಕಾರ್ಯಗಳನ್ನು ಕಾರ್ಯಕರ್ತರಿಗೆ ಮತ್ತು ಸಾರ್ವಜನಿಕರಿಗೆ ಮುಟ್ಟಿಸುವ ನಿಟ್ಟಿನಲ್ಲಿ ರಾಜ್ಯ ಕಾರ್ಯಾಲಯಕ್ಕೆ ಭೇಟಿ ನೀಡುವುದು ಒಂದು ಮಹತ್ವದ ಕ್ರಮ. ಇಲ್ಲಿ ಬಂದಾಗ ಸಾಮಾನ್ಯ ಜನರ ಒಡನಾಟವೂ ಆಗಲಿದೆ ಎಂದು ಅವರು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *