ಸುದ್ದಿಒನ್, ಚಿತ್ರದುರ್ಗ, ಜನವರಿ.28 : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 20 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಹೊರವಲಯದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಶೋಷಿತರ ಸಮಾವೇಶಕ್ಕೆ ಆಗಮಿಸಿದ ಅವರು ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ನಾವು ಬಿಜೆಪಿ ನಾಯಕರ ರೀತಿ 28ಕ್ಕೆ 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ ಎಂದು ಸುಳ್ಳು ಹೇಳುವುದಿಲ್ಲ. ನಾವು 15 ರಿಂದ 20 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ಹೊಂದಿದ್ದೇವೆ ಎಂದು ಹೇಳಿದರು. ಇಂಡಿಯಾ ಮೈತ್ರಿ ಕೂಟದಲ್ಲಿ ನಿತೀಶ್ ಮತ್ತು ಮಮತಾ ಅವರು ನಿಮ್ಮ ಮೈತ್ರಿಯನ್ನು ತೊರೆಯುತ್ತಿದ್ದಾರೆ. ಒಂದು ಕಡೆ ನೀವು ಬಲಗೊಳಿಸುತ್ತಿದ್ದರೆ ಮತ್ತೊಂದು ಕಡೆ ಹೀಗೆ ನಾಯಕರು ಮೈತ್ರಿ ತೊರೆಯುತ್ತಿದ್ದಾರೆ ಎಂಬ ಪ್ರಶ್ನೆಗೆ ಅದೆಲ್ಲವನ್ನೂ ಕೇಂದ್ರದ ನಾಯಕರಾದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸೋನಿಯಾ ಗಾಂಧಿಯವರು ನೋಡಿಕೊಳ್ಳುತ್ತಾರೆ ಎಂದರು.
ವರದಿ ಜಾರಿ ಬಗ್ಗೆ ಮಾತನಾಡಿದ ಸಿಎಂ, ನಾನು ಮಂತ್ರಿಯಾಗಿದ್ದಾಗ ಕಾಂತರಾಜ್ ವರದಿ ತಯಾರಾಗಿರಲಿಲ್ಲ ಇದಾದ ಮೇಲೆ ಸಮ್ಮಿಶ್ರ ಸರ್ಕಾರ ಜಾರಿಗೆ ಬಂತು. ಆಗ ಕುಮಾರಸ್ವಾಮಿ ಸಿಎಂ ಆಗಿದ್ದರು ಇದಾದ ಬಳಿಕ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿತ್ತು ಈಗ ಕೊಟ್ಟರೆ ತೆಗೆದುಕೊಳ್ಳುತ್ತೇವೆ. ವರದಿಯಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ, ಕಾಂತರಾಜು ವರದಿ ಕೊಟ್ಟ ಮೇಲೆ ಚರ್ಚೆ ಮಾಡೋಣ ಎಂದು ತಿಳಿಸಿದರು.
ಮಂಡ್ಯ ಜಿಲ್ಲೆಯಲ್ಲಿ ಅಧಿಕಾರಿಗಳು ಹನುಮ ಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಭೇಟಿ ನೀಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಆ ಧ್ವಜ, ಈ ಧ್ವಜ ಹಾರಿಸುವುದರ ಬದಲಾಗಿ ನಮ್ಮ ದೇಶದ ಬಾವುಟವನ್ನು ಹಾರಿಸಬೇಕು ಎಂದರು.
ಒಪಿಎಸ್ ನಿರ್ಧಾರ ಬಗ್ಗೆ ಸರ್ಕಾರ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.