Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಿರಿಯೂರಿನ 16 ಕೆರೆಗಳಿಗೆ ನೀರು; ಬರದ ಹಣೆಪಟ್ಟಿ ಕಳಚಲು ಸಿಎಂ ಪಣ

---Advertisement---

* ಬರ ಮುಕ್ತ ಹಿರಿಯೂರು; ದಿವಂಗತ ಸುಧಾಕರ್ ಅವರ ಕನಸನ್ನು ನನಸು ಮಾಡೋಣ: ಸಿಎಂ ಡಿ ಕೆ ಶಿವಕುಮಾರ್

* ಕುಮಾರಸ್ವಾಮಿ ಅವರದ್ದು ಬರೀ ಖಾಲಿ ಮಾತು

*ಭದ್ರಾ ಮೇಲ್ದಂಡೆ ಅನುದಾನ 5,400 ಕೋಟಿ; ಬಿಜೆಪಿ ದನಿ ಎತ್ತುತ್ತಿಲ್ಲ

*ಐದು ಗ್ಯಾರಂಟಿಗಳ ಮೂಲಕ ಕುಟುಂಬಗಳಿಗೆ ಆರ್ಥಿಕ ಶಕ್ತಿ

*ಜಾತಿ, ಧರ್ಮ ಮೀರಿ ಎಲ್ಲರ ಅಭಿವೃದ್ಧಿ

ಹಿರಿಯೂರು, ನ.03: “ಮಾಜಿ ಸಚಿವ ದಿವಂಗತ ಸುಧಾಕರ್ ಅವರ ಕನಸುಗಳನ್ನು ನನಸು ಮಾಡುವ ಸಂಕಲ್ಪದೊಂದಿಗೆ ಹಿರಿಯೂರು ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಕ್ಷೇತ್ರದ ಕೆರೆಗಳನ್ನು ತುಂಬಿಸುವ ಮೂಲಕ ನೀರಾವರಿ, ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಲಾಗುವುದು. ರೈತರ ಬದುಕಿಗೆ ಕಾಂಗ್ರೆಸ್ ಸರ್ಕಾರ ನೆರವಾಗಲಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ದಿಂಡವಾರದಲ್ಲಿ ಜವನಗೊಂಡನಹಳ್ಳಿ ಹೋಬಳಿಯ 16 ಕೆರೆಗಳು ಹಾಗೂ ಗಾಯತ್ರಿ ಜಲಾಶಯಕ್ಕೆ ನೀರು ತುಂಬಿಸುವ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

“ಹಿರಿಯೂರಿಗೆ ಅಂಟಿಕೊಂಡಿರುವ ಬರದ ತಾಲೂಕು ಎಂಬ ಹಣೆಪಟ್ಟಿಯನ್ನು ದೂರಮಾಡುವುದು ತಮ್ಮ ಗುರಿಯಾಗಿದೆ. ದಿವಂಗತ ಸುಧಾಕರ್ ಅವರು ಕ್ಷೇತ್ರದ ಜನರಿಗೆ ನೀಡಿದ್ದ ಮಾತನ್ನು ಉಳಿಸಿಕೊಳ್ಳಲು ಮತ್ತು ಅವರ ಆತ್ಮಕ್ಕೆ ಶಾಂತಿ ದೊರಕಿಸಲು, ಅವರು ಕನಸು ಕಂಡ ಯೋಜನೆಗಳಿಗೆ ಅನುದಾನ ಮಂಜೂರು ಮಾಡಿದ್ದೇನೆ. ಅವರಿಲ್ಲದಿರುವುದು ನನಗೆ ನೋವು ತಂದಿದೆ. ಅವರ ಚಿಂತನೆಗಳು ಮತ್ತು ಜನಸೇವೆಯ ಆಶಯಗಳು ಜೀವಂತವಾಗಿರಬೇಕು” ಎಂದು ಹೇಳಿದರು.

ಕುಮಾರಸ್ವಾಮಿ ಅವರದ್ದು ಖಾಲಿ ಮಾತು ;

“ಕುಮಾರಸ್ವಾಮಿ ಅವರದ್ದು ಬರೀ ಖಾಲಿ ಮಾತು. ಇನ್ನೇನು ಉಪ ಚುನಾವಣೆ ಬಂದಾಗ ಕುಮಾರಸ್ವಾಮಿ ಬರುತ್ತಾರೆ. ಅವರು ಕೇವಲ ಮಾತಲ್ಲೇ ಆಕಾಶ ತೋರಿಸುತ್ತಾರೆ. ಬಾಯಿ ಬಿಟ್ಟರೆ ಸುಳ್ಳು ಹೇಳ್ತಾರೆ‌. ಸುಳ್ಳೇ ಅವರ ಮನೆ ದೇವರು” ಎಂದರು.

“ಜನರ ಅಭಿವೃದ್ಧಿಯೇ ನಮ್ಮ ಗುರಿ. ನಿಮ್ಮ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುತ್ತೇವೆ. ಸುಧಾಕರ್ ಅವರ ಕನಸುಗಳನ್ನು ನನಸು ಮಾಡುವ ಮೂಲಕ ಅವರ ಸೇವೆಗೆ ಋಣ ತೀರಿಸುತ್ತೇವೆ” ಎಂದು ಭರವಸೆ ನೀಡಿದರು.

16 ಕೆರೆಗಳಿಗೆ ನೀರು, ಅಂತರ್ಜಲ ವೃದ್ಧಿಗೆ ಕ್ರಮ :

ಸಣ್ಣ ನೀರಾವರಿ ಇಲಾಖೆಯ ಮೂಲಕ ಹಿರಿಯೂರು ಭಾಗದ 16 ಕೆರೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಯೋಜನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದ್ದು, ಕಾಮಗಾರಿಯ ಗುತ್ತಿಗೆ ಪ್ರಕ್ರಿಯೆಯೂ ಆರಂಭವಾಗಿದೆ. ಕೆರೆಗಳಿಗೆ ನೀರು ಹರಿಸುವುದರಿಂದ ಸುತ್ತಮುತ್ತಲಿನ ಕೃಷಿಭೂಮಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಲಿದೆ” ಎಂದು ತಿಳಿಸಿದರು.

“ರೈತ ಉಳಿದರೆ ಹಳ್ಳಿ, ಹಳ್ಳಿ ಉಳಿದರೆ ರಾಜ್ಯ, ರಾಜ್ಯ ಉಳಿದರೆ ದೇಶ. ರೈತನಿಗೆ ಸಂಬಳ, ಪಿಂಚಣಿ, ಪ್ರಮೋಷನ್ ಅಥವಾ ನಿವೃತ್ತಿ ಸೌಲಭ್ಯಗಳಿಲ್ಲ. ಆದ್ದರಿಂದ ಅನ್ನದಾತನಿಗೆ ಜೀವದಾನ ನೀಡುವುದು ನಮ್ಮ ಕರ್ತವ್ಯ. ರೈತನೇ ದೇಶದ ದೊಡ್ಡ ಆಸ್ತಿ” ಎಂದು ಹೇಳಿದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಂದ್ರ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ₹5,400 ಕೋಟಿ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಪ್ರಧಾನಮಂತ್ರಿ ಹಾಗೂ ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗಿ ಅನುದಾನ ಬಿಡುಗಡೆಗೆ ಹಲವು ಬಾರಿ ಒತ್ತಾಯಿಸಿದ್ದರೂ ಸ್ಪಂದನೆ ದೊರೆತಿಲ್ಲ. ಬಿಜೆಪಿ ನಾಯಕರು ರೈತರ ಪರವಾಗಿ ಧ್ವನಿ ಎತ್ತಿಲ್ಲ” ಎಂದು ಟೀಕಿಸಿದರು.

ಗ್ರಾಮೀಣ ಅಭಿವೃದ್ಧಿ ಮತ್ತು ಸಾಮಾಜಿಕ ಕಲ್ಯಾಣಕ್ಕೆ ಆದ್ಯತೆ :

“ಹಿರಿಯೂರು ಕ್ಷೇತ್ರದ ಪಂಚಾಯಿತಿಗಳ ಅಭಿವೃದ್ಧಿ, ಗ್ರಾಮೀಣ ರಸ್ತೆಗಳು, ಕುಡಿಯುವ ನೀರು ಹಾಗೂ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗಳಿಗೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗುವುದು. ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳ ಮೂಲಕ ನೂರಾರು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿ, ಸಾವಿರಾರು ಫಲಾನುಭವಿಗಳಿಗೆ ನೆರವು ನೀಡುವ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಸಚಿವರು ಮತ್ತು ಶಾಸಕರು ಸುಧಾಕರ್ ಅವರ ಅಭಿವೃದ್ಧಿ ಕನಸುಗಳಿಗೆ ಶಕ್ತಿ ತುಂಬಲು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ತಿಳಿಸಿದರು.

ಐದು ಗ್ಯಾರಂಟಿಗಳ ಮೂಲಕ ಕುಟುಂಬಗಳಿಗೆ ಆರ್ಥಿಕ ಶಕ್ತಿ :

“ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ ಐದು ಗ್ಯಾರಂಟಿಗಳನ್ನು ಈಡೇರಿಸಿದ್ದು, ಪ್ರತಿಯೊಂದು ಕುಟುಂಬದ ಬದುಕಿಗೆ ಆರ್ಥಿಕ ಶಕ್ತಿ ತುಂಬಿದೆ. ಗೃಹಲಕ್ಷ್ಮಿ ಯೋಜನೆಯಡಿ ಅಕ್ಟೋಬರ್ ತಿಂಗಳವರೆಗಿನ ಹಣವನ್ನು ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ತಿಳಿಸಿದರು.

ರೈತರ ಹಿತ ಕಾಪಾಡಲು ಸರ್ಕಾರ ಬದ್ಧ :

“ನಾವು ಕೇವಲ ಭರವಸೆ ನೀಡುವುದಿಲ್ಲ; ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ. ರೈತರ ಹೊಲಗಳಿಗೆ ನೀರು ಹರಿಸುವುದು, ಅವರ ಬದುಕನ್ನು ಸಮೃದ್ಧಗೊಳಿಸುವುದು ನಮ್ಮ ಆದ್ಯತೆ. ಹಿರಿಯೂರು ಕ್ಷೇತ್ರವನ್ನು ತಮ್ಮ ಕನಕಪುರ ಕ್ಷೇತ್ರದಷ್ಟೇ ಮುಖ್ಯವಾಗಿ ಪರಿಗಣಿಸುತ್ತೇನೆ” ಎಂದರು.

ಜಾತಿ, ಧರ್ಮ ಮೀರಿ ಎಲ್ಲರ ಅಭಿವೃದ್ಧಿ :

“ರೈತನಿಗೆ ಜಾತಿ ಇದೆಯೇ? ಸೂರ್ಯನಿಗೆ ಜಾತಿ ಇದೆಯೇ? ನೀರಿಗೆ, ವಿದ್ಯುತ್‌ಗೆ ಜಾತಿ ಇದೆಯೇ? ಎಲ್ಲರ ರಕ್ತದ ಬಣ್ಣ ಕೆಂಪು, ಕಣ್ಣೀರು ಮತ್ತು ಬೆವರು ಒಂದೇ. ಮಾನವೀಯತೆಯೇ ನಮ್ಮ ಜಾತಿ. ಕಾಂಗ್ರೆಸ್ ಪಕ್ಷ ಎಲ್ಲ ಜಾತಿ ಮತ್ತು ಧರ್ಮದ ಜನರ ಹಕ್ಕುಗಳನ್ನು ರಕ್ಷಿಸುವ ಪಕ್ಷವಾಗಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಎಲ್ಲ ಸಮುದಾಯಗಳಿಗೂ ಪ್ರಾತಿನಿಧ್ಯ ನೀಡಲಾಗಿದ್ದು, “ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು” ಎಂಬ ತತ್ವದಡಿ ಆಡಳಿತ ನಡೆಸಲಾಗುತ್ತಿದೆ” ಎಂದರು.

“ರಾಜ್ಯದಲ್ಲಿ ಐದು ಲಕ್ಷ ನಿವೇಶನಗಳನ್ನು ವಿತರಿಸುವ ಯೋಜನೆಯನ್ನು ಶೀಘ್ರದಲೇ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಹಿರಿಯೂರು ಕ್ಷೇತ್ರದ ಮುಂದಿನ ಅಭ್ಯರ್ಥಿಯ ಆಯ್ಕೆ ಕುರಿತು ಜನರು ಚಿಂತಿಸಬೇಕಾಗಿಲ್ಲ ಎಂದ ಅವರು, ಅಭ್ಯರ್ಥಿಯ ಆಯ್ಕೆಯನ್ನು ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಸಮಾಲೋಚಿಸಿ ನಿರ್ಧರಿಸಲಾಗುವುದು” ಎಂದು ಹೇಳಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now