Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಕೀಲರ ಮೇಲಿನ ಹಲ್ಲೆ ಖಂಡಿಸಿ ಚಿತ್ರದುರ್ಗದಲ್ಲಿ ರಸ್ತೆಗಿಳಿದ ನ್ಯಾಯವಾದಿಗಳು : ಡಿಸಿಗೆ ಮನವಿ ಸಲ್ಲಿಕೆ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ನ. 03 : ವಕೀಲರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆಗಳು ಮತ್ತು ದೌರ್ಜನ್ಯಗಳನ್ನು ಖಂಡಿಸಿ ಹಾಗೂ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಮತ್ತಷ್ಟು ಕಠಿಣಗೊಳಿಸಿ ಜಾರಿಗೆ ತರುವಂತೆ ಒತ್ತಾಯಿಸಿ ವಕೀಲರು ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ ಚಿತ್ರದುರ್ಗ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ನ್ಯಾಯಾಲಯದ ಆವರಣದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯೂ ಒನಕೆ ಓಬವ್ವ ವೃತ್ತ, ಅಂಬೇಡ್ಕರ್ ವೃತ್ತ, ಮಹಾವೀರ ವೃತ್ತ, ಎಸ್.ಬಿ.ಎಂ,.ವೃತ್ತ, ಬಿ,ಡಿ.ರಸ್ತೆ, ಸಂತೇಪೇಟೆಯ ಮೂಲಕ ಪ್ರವಾಸಿ ಮಂದಿರ ರಸ್ತೆ, ವಾಸವಿ ವೃತ್ತವನ್ನು ಹಾದು ಜಿಲ್ಲಾಧಿಕಾರಿಗಳ ಕಚೇರಿಯನ್ನು ತಲುಪಿತು. ದಾರಿಯುದ್ದಕ್ಕೂ ನ್ಯಾಯಾವಾದಿಗಳು ಘೋಷಣೆಗಳನ್ನು ಕೂಗುತ್ತಾ ಸಾಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷರಾದ ಮಹೇಶ್ವರಪ್ಪ ವಕೀಲರಿಗೆ ಪ್ರತಿನಿತ್ಯ ನ್ಯಾಯಾಲಯಗಳಲ್ಲಿ, ಕಚೇರಿಗಳಲ್ಲಿ ಹಾಗೂ ಮನೆಗಳಲ್ಲೂ ಸಹ ಅನೇಕ ರೀತಿಯ ತೊಂದರೆಗಳನ್ನು ನೀಡಲಾಗುತ್ತಿದ್ದು, ಅವರಿಗೆ ಸೂಕ್ತವಾದ ರಕ್ಷಣೆ ಸಿಗುತ್ತಿಲ್ಲ, ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದಿದ್ದರೂ ಸಹ ಅದು ಯಾವುದೇ ರೀತಿಯಲ್ಲಿ ಪರಿಪೂರ್ಣವಾಗಿ ಜಾರಿಗೆ ಬಂದಿಲ್ಲ, ಕಠಿಣ ಕಾನೂನಿನ ಕೊರತೆಯಿಂದ ವಕೀಲರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ತೊಂದರೆ ನೀಡುವವರಿಗೆ ಕಠಿಣ ಶಿಕ್ಷೆಯಾಗಿ ಬೇಲ್ ಸಿಗದಂತಾಗಬೇಕು ಎಂದು ಅವರು ಆಗ್ರಹಿಸಿದರು.

ಬೆಂಗಳೂರಿನಲ್ಲಿ ಹಾಗೂ ಗೌರೀಬಿದನೂರಿನಲ್ಲಿ ಹಿರಿಯ ವಕೀಲರಾದ ಮೇಲೆ ಕಚೇರಿಯಲ್ಲಿ ಕೆಲಸ ಮಾಡುತ್ತಿ ರುವಾಗ ಕುರ್ಚಿಯಿಂದ ತಳ್ಳಿ ಹಲ್ಲೆ ನಡೆಸಿರುವ ಘಟನೆಗಳು ವಕೀಲರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳ ನ್ನು ಹುಟ್ಟುಹಾಕಿವೆ ವಕೀಲರ ರಕ್ಷಣಾ ಕಾಯ್ದೆಯನ್ನು ಹೆಚ್ಚು ಕಠಿಣಗೊಳಿಸಿ, ವಕೀಲರಿಗೆ ಉತ್ತಮ ರೀತಿಯ ರಕ್ಷಣೆ ನೀಡಬೇಕು, ವಕೀಲರಿಗೆ ಭದ್ರತೆ ಒದಗಿಸದಿದ್ದರೆ ಮುಂದಿನ ದಿನಗಳಲ್ಲಿ ಕಾಯ್ದೆಯನ್ನು ಉಗ್ರವಾಗಿ ಜಾರಿಗೆ ತರದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ವಕೀಲರ ಸಂಘವು ಎಚ್ಚರಿಕೆ ನೀಡಿ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರ ಮುಖಾಂತರ ತಾಲೂಕು, ರಾಜ್ಯ ಮಟ್ಟದಲ್ಲಿ ಹಾಗೂ ಸಿಎಂಗೆ ಮನವಿ ಸಲ್ಲಿಸಲಾಯಿತು.

ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಓ.ಜಗದೀಶ್ ಮಾತನಾಡಿ, ರಾಜ್ಯದಲ್ಲಿ ವಕೀಲರ ಮೇಲಿನ ಹಲ್ಲೆ ಮತ್ತು ಕೊಲೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ವಕೀಲರ ಸಂಘಗಳ ಮುಖಾಂತರ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ. ವಕೀಲರಿಗೆ ಸಂಪೂರ್ಣ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರವು ಕಾವಲು ಕಾಯ್ದೆಗೆ ತಿದ್ದುಪಡಿ ತರಬೇಕು, ವಕೀಲರ ಸಂರಕ್ಷಣಾ ಕಾಯ್ದೆಯಲ್ಲಿ ಸೂಕ್ತ ತಿದ್ದುಪಡಿ ಮಾಡಿ, ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ವಕೀಲರಿಗೆ ಭದ್ರತೆ ಒದಗಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಮನವಿ ಸಲ್ಲಿಸಲಾಯಿತು.

ವಕೀಲರ ರಕ್ಷಣೆಗಾಗಿ ಇರುವ ಕಾಯ್ದೆಗಳನ್ನು ಬಲಪಡಿಸಬೇಕು ಮತ್ತು ಹಲ್ಲೆ ಹಾಗೂ ಕೊಲೆ ಪ್ರಕರಣಗಳನ್ನು ತಡೆಯಲು ಸರ್ಕಾರ ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಂಡು ಜಿಲ್ಲಾಧಿಕಾರಿಗಳ ಮೂಲಕ ಮನವಿ ಸ್ವೀಕರಿಸಿ ರಕ್ಷಣೆ ಒದಗಿಸಬೇಕು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ನ್ಯಾಯಾವಾದಿಗಳಾದ ರಹಮತ್ತುಲ್ಲಾ, ವಕೀಲರ ಸಂಘದ ಉಪಾಧ್ಯಕ್ಷರಾದ ಸಾವಿತ್ರಮ್ಮ, ಖಂಜಾಚಿ ಸೋಮಶೇಖರ ರೆಡ್ಡಿ, ಜಂಟಿ ಕಾರ್ಯದರ್ಶಿ ಕಾಂತರಾಜ್, ಕಾರ್ಯಕಾರಿ ಸಮಿತಿ ಸದಸ್ಯರಾದ ಅಶೋಕ್, ಬೆಳಗಟ್ಟ ಶಿವಕುಮಾರ್, ಮಲ್ಲಿಕಾರ್ಜ ನಯ್ಯ, ವಹಿದ್ ಬಾನು, ರಜನಿ ಜುಲ್ಪಕರ್, ರಾಮಚಂದ್ರಪ್ಪ, ಬಸವರಾಜು, ಮುಸ್ತಾಫ್, ಗಂಗಾಧರ್, ಮೆರೋಜ್ ಬೇಗಂ, ಸೌಮ್ಯ, ದಿಲ್‍ಷಾದ್ ಉನ್ನೀಸಾ, ತಿಪ್ಪೇಸ್ವಾಮಿ, ಶ್ರೀದೇವಿ, ಚೌಡಪ್ಪ, ತಕ್ಪಶೀಲ ಸೇರಿದಂತೆ ನ್ಯಾಯಾವಾದಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now