ಸುದ್ದಿಒನ್,ವಿಜಯಪುರ,ಮೇ.15: ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರದ ಆಲಮೇಲ ತಾಲ್ಲೂಕಿನ ಮೊರಟಗಿ ಗ್ರಾಮದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಭೀಕರ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ಸಚಿವ ಎಂ.ಬಿ.ಪಾಟೀಲ್ ಪರಿಹಾರ ಘೋಷಿಸಿದ್ದಾರೆ.
ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಮನೆಯ ಮೇಲ್ಛಾವಣಿ ಹಾಗೂ ಗೋಡೆ ಕುಸಿದು ಬಿದ್ದಿದ್ದೇ ಈ ಅವಘಡಕ್ಕೆ ಕಾರಣವಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ದುರಂತದಲ್ಲಿ ಕುಟುಂಬದ ನಾಲ್ವರನ್ನು ಕಳೆದುಕೊಂಡು ಮಗುವೊಂದು ಅನಾಥವಾಗಿದೆ. ಮಗುವಿನ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಚಿವರು ಮಗುವಿನ ಹೆಸರಿನಲ್ಲಿ ಸರ್ಕಾರದಿಂದ 20 ಲಕ್ಷ ರೂಪಾಯಿಗಳನ್ನು ಸ್ಥಿರ ಠೇವಣಿ (Fixed Deposit) ಇಡಲಾಗುವುದು ಎಂದು ಹೇಳಿದ್ದಾರೆ.
ಮಗುವಿನ ಶಿಕ್ಷಣ, ಆರೈಕೆ ಹಾಗೂ ಉತ್ತಮ ಜೀವನಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಸರ್ಕಾರವೇ ಒದಗಿಸಲಿದೆ. ಈ ಘಟನೆ ಅತ್ಯಂತ ಹೃದಯವಿದ್ರಾವಕವಾಗಿದೆ. ಕುಟುಂಬದಲ್ಲಿ ಉಳಿದಿರುವ ಏಕೈಕ ಮಗುವಿನ ಭವಿಷ್ಯ ಕತ್ತಲಾಗಲು ಬಿಡುವುದಿಲ್ಲ. ಆತನ ಹೆಸರಿನಲ್ಲಿ ಹಣ ಠೇವಣಿ ಇರಿಸುವ ಜೊತೆಗೆ ಅಗತ್ಯವಿರುವ ಎಲ್ಲಾ ನೆರವು ನೀಡಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಅಶೋಕ ಮನಗೂಳಿ, ಮಾಜಿ ಶಾಸಕ ರಮೇಶ್ ಭೂಸನೂರ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದ ಸಚಿವರು, ತಕ್ಷಣದ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೊರಟಗಿ ದುರಂತ: ಮಳೆಗೆ ಮನೆ ಕುಸಿದು ನಾಲ್ವರು ಬಲಿ – ಬದುಕುಳಿದಿರುವ ಏಕೈಕ ಮಗುವಿನ ಪೋಷಣೆಗೆ ₹20 ಲಕ್ಷ ಪರಿಹಾರ
ವಿಜಯಪುರ ಜಿಲ್ಲೆ ಸಿಂದಗಿ ವಿಧಾನಸಭಾ ಕ್ಷೇತ್ರದ ಆಲಮೇಲ ತಾಲ್ಲೂಕಿನ ಮೊರಟಗಿ ಗ್ರಾಮದಲ್ಲಿ ನಿನ್ನೆ ರಾತ್ರಿ ಸುರಿದ ಗಾಳಿ ಸಹಿತ ಭಾರಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು, ಒಂದೇ ಕುಟುಂಬದ ನಾಲ್ವರು ದುರ್ಮರಣಕ್ಕೀಡಾದ ದಾರುಣ… pic.twitter.com/WU4NNhAoxg
— M B Patil (@MBPatil) May 15, 2026
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













