ಚಿತ್ರದುರ್ಗ: ಬೆಟ್ಟಿಂಗ್ ಆ್ಯಪ್ ಗಳಿಗೆ ಹಣ ವರ್ಗಾವಣೆ ಆರೋಪ ಸಂಬಂಧ ಈಗಾಗಲೇ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದೀಗ ಕೋರ್ಟ್ ಆಗಸ್ಟ್ 28ರವರೆಗೆ ವೀರೇಂದ್ರ ಪಪ್ಪಿಯನ್ನ ಇಡಿ ವಶಕ್ಕೆ ನೀಡಿದೆ. ವಾದ ಪ್ರತಿವಾದ ಕೇಳಿದ ಕೋರ್ಟ್ ನಾಲ್ಕು ದಿನಗಳ ಕಾಲ ಇಡಿ ವಶಕ್ಕೆ ನೀಡಿದೆ. ಬೆಂಗಳೂರಿನ 35ನೇ ಸಿಸಿಹೆಚ್ ಕೋರ್ಟ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
ವೀರೇಂದ್ರ ಪಪ್ಪಿ ಅವರ ಪರ ವಕೀಲರು ಕಸ್ಟಡಿಗೆ ನೀಡದಂತೆ ಕೋರ್ಟ್ ಗೆ ಮನವಿ ಮಾಡಿದರು. ಆದರೆ ಇದೇ ವೇಳೆ ಇಡಿ ಪರ ವಕೀಲರು ಕೂಡ ತನ್ನ ವಾದ ಮಂಡಿಸಿದರು. ಈ ತನಿಖೆ ತುಂಬಾನೇ ಅಗತ್ಯವಿದೆ. ಯಾಕಂದ್ರೆ ಅವರ ಮನೆಗೆ ದಾಳಿ ಮಾಡಿದಾಗ ಕೋಟ್ಯಾಂತರ ರೂಪಾಯಿ ನಗದು, ಚಿನ್ನಾಭರಣ, ಬೆಳ್ಳಿ ಎಲ್ಲವೂ ಸಿಕ್ಕಿದೆ. ಅಷ್ಟೇ ಅಲ್ಲ ವಿದೇಶದಲ್ಲಿ ವ್ಯವಹಾರ ನಡೆಸಿದ್ದಾರೆ.
ಕ್ಯಾಸಿನೋಗಳು, ಆನ್ಲೈನ್ ಬೆಟ್ಟಿಂಗ್ ಸೈಟ್ ಗಳ ವ್ಯವಹಾರ ನಡೆದಿದೆ. ಕೋಟ್ಯಾಂತರ ರೂ. ಅಕ್ರಮ ವಹಿವಾಟು ನಡೆಸಿದ್ದಾರೆ. ಈ ಬಗ್ಗೆ ವಿಚಾರಣೆ ಅಗತ್ಯ ಇದೆ. ಹೀಗಾಗಿ 14 ದಿನ ವಿಚಾರಣೆ ನಡೆಸಲು ಅವಶ್ಯಕತೆ ಇದೆ ಎಂದು ಇಡಿ ಪರ ವಕೀಲರು ಮನವಿ ಮಾಡಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಧೀಶ ಸೈಯದ್ ಬಿ ರೆಹಮಾನ್ ಅವರು, ಆಗಸ್ಟ್ 28ರ ವರೆಗೆ ಇಡಿ ವಶಕ್ಕೆ ನೀಡಿ ಆದೇಶಿಸಿದ್ದಾರೆ. ಸದ್ಯ ಶಾಸಕ ವೀರೇಂದ್ರ ಪಪ್ಪಿ ಅವರು ಇಡಿ ವಶದಲ್ಲಿದ್ದು, ಸಿಕ್ಕ ವಸ್ತುಗಳಿಗೆಲ್ಲಾ ದಾಖಲೆ ಸಮೇತ ಉತ್ತರ ಪಡೆಯಲಿದ್ದಾರೆ. ನಾಲ್ಕು ದಿನದ ಬಳಿಕ ಕೋರ್ಟ್ ನಿರ್ಧಾತ ಏನಾಗಿರುತ್ತೆ ಎಂಬುದನ್ನ ನೋಡಬೇಕಿದೆ.















