ಸುದ್ದಿಒನ್, ಹೊಳಲ್ಕೆರೆ, ಏಪ್ರಿಲ್. 02 : ಏಪ್ರಿಲ್ 30 ರೊಳಗೆ ಕೆನಾಲ್‍ನಲ್ಲಿ ಟ್ರಯಲ್ ಆಗಿ ನೀರು ಹರಿಸಬೇಕಾಗಿರುವುದರಿಂದ ಕಾಮಗಾರಿ ಜರೂರಾಗಿ ಮುಗಿಸುವಂತೆ ಶಾಸಕ ಡಾ.ಎಂ.ಚಂದ್ರಪ್ಪ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.
ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲ್ಲೂಕಿನ ಅಬ್ಬಿನಹೊಳಲು ಮತ್ತು ಹೆಗಡೆಹಳ್ಳಿ, ಹೆಬ್ಬೂರು ಗ್ರಾಮಗಳಲ್ಲಿ ಭದ್ರಾ ಮೇಲ್ದಂಡೆ ಕಾಮಗಾರಿಗಳನ್ನು ರೈತ ಮುಖಂಡರುಗಳಾದ ಲವಕುಮಾರ್ ಮತ್ತು ಮಂಜಣ್ಣ ನೇತೃತ್ವದಲ್ಲಿ ಗುರುವಾರ ವೀಕ್ಷಿಸಿ ಮಾತನಾಡಿದ ಶಾಸಕರು ಐದಾರು ವರ್ಷಗಳಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ನ್ಯಾಯಾಲಯದಲ್ಲಿರುವುದರಿಂದ ಸಾವಿರಾರು ರೈತರೊಂದಿಗೆ ಆಗಸ್ಟ್‍ನಲ್ಲಿ ವೀಕ್ಷಿಸಿದಾಗ ಅಧಿಕಾರಿಗಳು ಅನೇಕ ಸಮಸ್ಯೆಗಳನ್ನು ಹೇಳಿಕೊಂಡಿದ್ದರು. ಆಗ ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ತಾಕೀತು ಮಾಡಿ ಮಾಹಿತಿ ಕೊಟ್ಟ ಮೇಲೆ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಧೀಶರು ಸಹಸ್ರಾರು ರೈತರಿಗೆ ಅನುಕೂಲವಾಗಲಿ ಎನ್ನುವ ಸದುದ್ದೇಶದಿಂದ ಯೋಜನೆ ಮುಂದುವರೆಸುವಂತೆ ಲೋಕ ಅದಾಲತ್‍ಗೆ ವಹಿಸಿದ ಬಳಿಕ ಆ ಭಾಗದ ರೈತರು ಅಧಿಕಾರಿಗಳನ್ನು ಕರೆಸಿ ಚರ್ಚಿಸಿ ಪರಿಹಾರ ಕೊಟ್ಟು ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದರು.

ಹೆಗಡೆಹಳ್ಳಿ ಹತ್ತಿರ ಕೆನಾಲ್‍ನಲ್ಲಿ ಬಂಡೆ ಇರುವುದರಿಂದ ಬ್ಲಾಸ್ಟ್ ಮಾಡಿ ಕ್ಲಿಯರ್ ಮಾಡಲು ಅಧಿಕಾರಿಗಳು ಹಗಲು-ರಾತ್ರಿ ಶ್ರಮಿಸುತ್ತಿದ್ದರು ಆಗಿಲ್ಲ. ದೊಡ್ಡ ಪ್ರಮಾಣದ ತಂತ್ರಗಳನ್ನು ಬಳಸಿ ಹತ್ತದಿನೈದು ದಿನಗಳಲ್ಲಿ ಮುಗಿಸುವಂತೆ ಸೂಚಿಸಿದ್ದೇನೆ. ಅಧಿಕಾರಿಗಳು ಭರವಸೆ ನೀಡಿದ್ದಾರೆ. ಎಂಬತ್ತು ಅಡಿ ಹಾಸು ಬಂಡೆಯಿರುವುದನ್ನು ತೆಗೆಯಲು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ಏಪ್ರಿಲ್-30 ರೊಳಗೆ ಇಲ್ಲಿಂದ ಗೋನೂರುವರೆಗೂ ನೀರು ಟ್ರಯಲ್ ಆಗಿ ಹರಿಯಬೇಕು. ಗುತ್ತಿಗೆದಾರರಿಗೆ ಪೂರ್ಣ ಪ್ರಮಾಣದಲ್ಲಿ ಪೇಮೆಂಟ್ ನೀಡಲಾಗಿದೆ. ಒಂದು ತಿಂಗಳೊಳಗೆ ನೀರು ಕೊಡಬೇಕಾಗಿರುವುದರಿಂದ ಮುತುವರ್ಜಿ ವಹಿಸಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಶಾಸಕ ಡಾ.ಎಂ.ಚಂದ್ರಪ್ಪ ಎಚ್ಚರಿಸಿದರು.
ಅಧಿಕಾರಿಗಳ ಮೇಲೆ ನನಗೆ ಸಂಪೂರ್ಣವಾಗಿ ವಿಶ್ವಾಸವಿದೆ. ತ್ವರಿತಗತಿಯಲ್ಲಿ ಕೆಲಸ ಆಗಬೇಕು. ಎಷ್ಟೆ ಸಮಸ್ಯೆಗಳಿದ್ದರೂ ಟ್ರಯಲ್ ಆಗಿ ನೀರು ಬಿಡುವ ಆಲೋಚನೆ ಮಾಡಿದ್ದೇವೆ. ನೂರಕ್ಕೆ ನೂರು ಯಶಸ್ವಿಯಾಗುತ್ತದೆಂದುಕೊಂಡಿದ್ದೇನೆ. ಅಧಿಕಾರಿಗಳು ಮಾಡುವ ಕೆಲಸ ನೋಡಿ ನನಗೂ ಖುಷಿಯಾಗಿದೆ. ಚೆನ್ನಾಗಿ ಕೆಲಸ ನಡೆದಿದೆ ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಪರಮೇಶಣ್ಣ, ಚಂದ್ರಪ್ಪ, ಜಗದೀಶ್, ಚಂದ್ರಶೇಖರ್, ನಂದಕುಮಾರ್, ನಾಗರಾಜ್, ವಸಂತಕುಮಾರ್, ರಾಜಣ್ಣ, ಪ್ರಭಾಕರ್, ರೈತ ಸಂಘದ ಮುಖಂಡರಾದ ನಾಗರಾಜ್, ಶಿವಕುಮಾರ್, ಮಲ್ಲಿಕಾರ್ಜುನ್, ಕುರುಬ ಸಮಾಜದ ಅಧ್ಯಕ್ಷ ಹಳ್ಳಪ್ಪ ಹಾಗೂ ನೂರಾರು ರೈತರು ಕಾಮಗಾರಿ ವೀಕ್ಷಣೆ ಸಂದರ್ಭದಲ್ಲಿ ಹಾಜರಿದ್ದರು.













