ಚಿತ್ರದುರ್ಗ(ಏ.17): ಜನಮಾನಸದಲ್ಲಿ ಸಿದ್ದೇಶ್ವರ ಸ್ವಾಮಿ ಎಂದು ಪ್ರಸಿದ್ಧಿ ಪಡೆದಿರುವ ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲೂಕಿನ ವದ್ದೀಕೆರೆ ಗ್ರಾಮದ ಶ್ರೀ ಕಾಳಭೈರವೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಏ.18 ರಂದು ಸಂಜೆ 4:30 ಜರುಗಲಿದೆ.
ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಏ.15 ರಿಂದ ಪ್ರಾರಂಭವಾಗಿದ್ದು, ಕಂಕಣಧಾರಣೆ, ಏ.16 ರಂದು ಅಗ್ನಿಕುಂಡ ಹಾಯುವ ವಿಧಿ ವಿಧಾನಗಳು ಪೂರ್ಣಗೊಂಡಿವೆ. ಏ.17 ರಂದು ರಾತ್ರಿ 8:00 ಗಂಟೆಗೆ ಚಿಕ್ಕರಥೋತ್ಸವ ಕಾರ್ಯಕ್ರಮ ನಡೆಯಲಿದೆ. ಏ.18 ರಂದು ಮಧ್ಯಾಹ್ನ 3:30 ರಿಂದ ಹೂವಿನಿಂದ ಅಲಾಂಕೃತಗೊಂಡ ಅಡ್ಡ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳು ಭಾಗವಹಿಸುವವು. ಸಂಜೆ 4:30ಕ್ಕೆ ಬ್ರಹ್ಮರಥೋತ್ಸವ ಜರುಗಲಿದೆ. ಏ.19 ರಂದು ಉಂಡೆ, ಮುಂಡೆ, ಸಿದ್ಧಭುಕ್ತಿ ಕಾರ್ಯಕ್ರಮ, ಏ.20 ರಂದು ಕಿರುಬಾನೆ, ವಸಂತೋತ್ಸವ ಹಾಗೂ ಕಂಕಣ ವಿಸರ್ಜನೆಯೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನವಾಗುವುದು. ಭಕ್ತಾಧಿಗಳು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀ ಕಾಳಭೈರವೇಶ್ವರ ಸ್ವಾಮಿ ಕೃಪೆಗೆ ಪಾತ್ರರಾಗಬೇಕು ಎಂದು ಚಿತ್ರದುರ್ಗ ಉಪವಿಭಾಗಧಿಕಾರಿ ಹಾಗೂ ಶ್ರೀ ಕಾಳಭೈರವೇಶ್ವರ ಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಆರ್.ಚಂದ್ರಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.