ದೆಹಲಿ.ಜುಲೈ.10: ಮೆಸೇಜಿಂಗ್ ಆ್ಯಪ್ ಗಳಲ್ಲಿ ಪರಿಚಯಿಸಲು ಉದ್ದೇಶಿಸಲಾಗಿರುವ ಹೊಸ ‘ಬಳಕೆದಾರರ ಹೆಸರು’ (Username) ವೈಶಿಷ್ಟ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀಡಿದ್ದ ನೋಟಿಸ್ ಗೆ ವಾಟ್ಸಾಪ್ ಮತ್ತು ಟೆಲಿಗ್ರಾಮ್ ಸಂಸ್ಥೆಗಳು ಕೊನೆಗೂ ತಮ್ಮ ಪ್ರತ್ಯುತ್ತರವನ್ನು ಸಲ್ಲಿಸಿವೆ.
ಕೇಂದ್ರ ಸರ್ಕಾರ ನೀಡಿದ್ದ ವಿಸ್ತೃತ ಗಡುವು ಗುರುವಾರಕ್ಕೆ ಕೊನೆಗೊಂಡಿದ್ದು, ಅದಕ್ಕೂ ಮುನ್ನವೇ ವಾಟ್ಸಾಪ್ ತನ್ನ ಜವಾಬ್ದಾರಿಯನ್ನು ಪೂರೈಸಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ವಾಟ್ಸಾಪ್ ನಿಂದ ಪ್ರತಿಕ್ರಿಯೆ ಬಂದಿರುವುದನ್ನು ಖಚಿತಪಡಿಸಿದೆ. ಆದರೆ ಕಂಪನಿಯು ತನ್ನ ಉತ್ತರದ ಪತ್ರದಲ್ಲಿ ಏನು ಉಲ್ಲೇಖಿಸಿದೆ ಎಂಬ ವಿವರಗಳನ್ನು ಸಚಿವಾಲಯ ಇನ್ನು ಬಹಿರಂಗಪಡಿಸಿಲ್ಲ. ಮತ್ತೊಂದೆಡೆ ಟೆಲಿಗ್ರಾಮ್ ಕೂಡ ಸರ್ಕಾರದ ನೋಟಿಸ್‌ಗೆ ಪ್ರತಿಕ್ರಿಯಿಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಮತ್ತೊಂದು ಜನಪ್ರಿಯ ಆ್ಯಪ್ ಆದ ‘ಸಿಗ್ನಲ್’ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಯಾಗಿದೆ.
ಯೂಸರ್ ನೇಮ್ ಆಧಾರಿತ ಮೆಸೇಜಿಂಗ್ ವ್ಯವಸ್ಥೆಯಲ್ಲಿ ಅಳವಡಿಸಲಾಗಿರುವ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ಕೋರಿ ಕೇಂದ್ರ ಸರ್ಕಾರವು ಜುಲೈ 1 ರಂದು ವಾಟ್ಸಾಪ್ ಗೆ ಮತ್ತು ಜುಲೈ 3 ರಂದು ಟೆಲಿಗ್ರಾಮ್ ಹಾಗೂ ಸಿಗ್ನಲ್ ಸಂಸ್ಥೆಗಳಿಗೆ ನೋಟಿಸ್ ಕಳುಹಿಸಿತ್ತು. ಫೋನ್ ನಂಬರ್ ಇಲ್ಲದೆಯೇ ಕೇವಲ ಯೂಸರ್ ನೇಮ್ ಬಳಸಿ ಸಂದೇಶ ಕಳುಹಿಸುವ ಈ ವೈಶಿಷ್ಟ್ಯದಿಂದಾಗಿ ವಂಚಕರು ಇತರರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸುವುದು ಸುಲಭವಾಗುತ್ತದೆ. ಇದರೊಂದಿಗೆ ಗುರುತು ಕಳುವು ಮತ್ತು ಫಿಶಿಂಗ್ ದಾಳಿಗಳು ಹೆಚ್ಚಾಗಬಹುದು ಹಾಗೂ ಇತ್ತೀಚೆಗೆ ದೇಶದಲ್ಲಿ ವ್ಯಾಪಕವಾಗಿ ಹೆಚ್ಚುತ್ತಿರುವ ಡಿಜಿಟಲ್ ಅರೆಸ್ಟ್ ನಂತಹ ಆನ್ ಲೈನ್ ವಂಚನೆಗಳಿಗೆ ಇದು ಇನ್ನಷ್ಟು ದಾರಿ ಮಾಡಿಕೊಡಬಹುದು ಎಂದು ಸರ್ಕಾರ ತೀವ್ರ ಆತಂಕ ವ್ಯಕ್ತಪಡಿಸಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಐಟಿ ನಿಯಮಗಳ ಅಡಿಯಲ್ಲಿ ವಾಟ್ಸಾಪ್ ಒಂದು ಪ್ರಮುಖ ಸಾಮಾಜಿಕ ಮಾಧ್ಯಮ ಮಧ್ಯವರ್ತಿ ಆಗಿರುವುದರಿಂದ, ಅದು ಸರ್ಕಾರದ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಒಂದು ವೇಳೆ ಈ ಹೊಸ ವೈಶಿಷ್ಟ್ಯದಿಂದ ಸೈಬರ್ ಅಪರಾಧಗಳ ಅಪಾಯ ಹೆಚ್ಚಾದರೆ, ಐಟಿ ನಿಯಮಗಳ ಅಡಿಯಲ್ಲಿ ಕಂಪನಿಯ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ಸಚಿವಾಲಯವು ಮೆಟಾ ಸಂಸ್ಥೆಯನ್ನು ಪ್ರಶ್ನಿಸಿದೆ. ಸರ್ಕಾರದೊಂದಿಗಿನ ಸಮಾಲೋಚನೆಗಳು ಪೂರ್ಣಗೊಳ್ಳುವವರೆಗೆ ಭಾರತದಲ್ಲಿ ಈ ಯೂಸರ್‌ನೇಮ್ ವೈಶಿಷ್ಟ್ಯವನ್ನು ಜಾರಿಗೆ ತರಬಾರದು ಎಂದು ಕೇಂದ್ರ ಸರ್ಕಾರ ವಾಟ್ಸಾಪ್ ಗೆ ಸೂಚಿಸಿದೆ. ಇದಕ್ಕೆ ಒಪ್ಪಿರುವ ವಾಟ್ಸಾಪ್, ಚರ್ಚೆಗಳು ಮುಗಿಯುವವರೆಗೆ ಇದನ್ನು ಬಿಡುಗಡೆ ಮಾಡುವುದಿಲ್ಲ ಎಂದು ಸರ್ಕಾರಕ್ಕೆ ಭರವಸೆ ನೀಡಿದೆ.
ಈ ವೈಶಿಷ್ಟ್ಯವು ಇನ್ನೂ ಅಭಿವೃದ್ಧಿ ಹಂತದಲ್ಲಿದ್ದು, ಈ ವರ್ಷದ ಕೊನೆಯಲ್ಲಿ ಹಂತ-ಹಂತವಾಗಿ ಪರಿಚಯಿಸಲಾಗುವುದು ಎಂದು ವಾಟ್ಸಾಪ್ ತಿಳಿಸಿದೆ. ಅಷ್ಟೇ ಅಲ್ಲದೆ ಸುರಕ್ಷತೆಗಾಗಿ ಹಲವು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ಕಂಪನಿ ಹೇಳಿದೆ. ಹೊಸ ಖಾತೆ ತೆರೆಯಲು ಫೋನ್ ನಂಬರ್ ಕಡ್ಡಾಯವಾಗಿರುತ್ತದೆ. ಸಾರ್ವಜನಿಕ ಗಣ್ಯರು, ಸರ್ಕಾರಿ ಸಂಸ್ಥೆಗಳು ಮತ್ತು ವೆರಿಫೈಡ್ ಮೆಟಾ ಖಾತೆಗಳ ಯೂಸರ್ ನೇಮ್ ಗಳನ್ನು ಇತರರು ಬಳಸದಂತೆ ಕಾಯ್ದಿರಿಸಲಾಗುತ್ತದೆ. ಅಪರಿಚಿತರಿಂದ ಬರುವ ಅನಗತ್ಯ ಸಂದೇಶಗಳನ್ನು ನಿಯಂತ್ರಿಸಲಾಗುತ್ತದೆ ಹಾಗೂ ಯೂಸರ್‌ನೇಮ್‌ಗಳನ್ನು ಪದೇ ಪದೇ ಊಹಿಸುವ ಪ್ರಯತ್ನಗಳನ್ನು ತಡೆಯಲಾಗುತ್ತದೆ. ಇದರೊಂದಿಗೆ ಶಂಕಾಸ್ಪದ ಚಟುವಟಿಕೆಗಳನ್ನು ಪತ್ತೆಹಚ್ಚಲು ಸ್ವಯಂಚಾಲಿತ ವ್ಯವಸ್ಥೆಯನ್ನು ಬಳಸಲಾಗುತ್ತದೆ ಎಂದು ಸಂಸ್ಥೆ ವಿವರಿಸಿದೆ. ಪ್ರಸ್ತುತ ವಾಟ್ಸಾಪ್ ನೀಡಿರುವ ವಿವರಣೆಯನ್ನು ಸರ್ಕಾರ ಪರಿಶೀಲಿಸುತ್ತಿದ್ದು, ಸಚಿವಾಲಯದ ಪರಿಶೀಲನೆಯ ನಂತರ ಮುಂದಿನ ನಿರ್ಧಾರ ಹೊರಬೀಳಲಿದೆ.









