ಲಂಡನ್: ಮಕ್ಕಳ ಆನ್ಲೈನ್ ಸುರಕ್ಷತೆಯ ದೃಷ್ಟಿಯಿಂದ ಯುನೈಟೆಡ್ ಕಿಂಗ್ಡಮ್ (UK) ಸರ್ಕಾರ ಅತ್ಯಂತ ಮಹತ್ವದ ನಿರ್ಧಾರ ಕೈಗೊಂಡಿದೆ. 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು (Social Media) ಬಳಸುವುದನ್ನು ನಿಷೇಧಿಸಿ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಸೋಮವಾರ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ, ಇಂಡೋನೇಷ್ಯಾ ಮತ್ತು ಮಲೇಷ್ಯಾ ದೇಶಗಳ ನಂತರ ಈ ರೀತಿಯ ಕಠಿಣ ನಿಯಮ ಜಾರಿಗೆ ತಂದ ವಿಶ್ವದ ನಾಲ್ಕನೇ ದೇಶವಾಗಿ ಬ್ರಿಟನ್ ಹೊರಹೊಮ್ಮಿದೆ.
ತಂತ್ರಜ್ಞಾನ ಸಂಸ್ಥೆಗಳು ಮತ್ತು ವಿಮರ್ಶಕರಿಂದ ಎದುರಾಗಬಹುದಾದ ಯಾವುದೇ ಸವಾಲುಗಳಿಗೆ ಸರ್ಕಾರ ಮಣಿಯುವುದಿಲ್ಲ ಎಂದು ಪ್ರಧಾನಿ ಸ್ಟಾರ್ಮರ್ ಸ್ಪಷ್ಟಪಡಿಸಿದ್ದಾರೆ.
ನನ್ನ ಈ ಸಂದೇಶ ಎಲ್ಲರಿಗೂ ಸ್ಪಷ್ಟವಾಗಿ ತಲುಪಲಿ ಎಂದು ಬಯಸುತ್ತೇನೆ. ನಮ್ಮ ಮಕ್ಕಳ ಸುರಕ್ಷತೆ ಮತ್ತು ಸಂತೋಷದ ವಿಷಯದಲ್ಲಿ ನಾನು ಯಾವುದೇ ರಾಜಿ ಮಾಡಿಕೊಳ್ಳಲು ಸಿದ್ಧನಿಲ್ಲ. ಇದೇ ಕಾರಣಕ್ಕೆ ಈ ನಿಷೇಧ ಜಾರಿಯಾಗುತ್ತಿದೆ ಮತ್ತು ಇದು ಖಂಡಿತವಾಗಿಯೂ ಜಾರಿಗೆ ಬರಲಿದೆ ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧವನ್ನು ಜಾರಿಗೊಳಿಸುವುದು ಸುಲಭದ ಮಾತಲ್ಲ ಎಂಬುದನ್ನು ಬ್ರಿಟನ್ ಪ್ರಧಾನಿ ಒಪ್ಪಿಕೊಂಡಿದ್ದಾರೆ. ಆದರೆ, ಈ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ ಎಂದು ಸರ್ಕಾರಗಳು ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಸಾಮಾಜಿಕ ಜಾಲತಾಣಗಳು ಮಕ್ಕಳ ದೈನಂದಿನ ಜೀವನ ಮತ್ತು ಆರೋಗ್ಯಕರ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಿವೆ ಎಂದು ಸ್ಟಾರ್ಮರ್ ಆತಂಕ ವ್ಯಕ್ತಪಡಿಸಿದ್ದಾರೆ. ಅತಿಯಾದ ಸೋಶಿಯಲ್ ಮೀಡಿಯಾ ಬಳಕೆಯಿಂದಾಗಿ ಮಕ್ಕಳು ಓದುವುದು, ಆಟವಾಡುವುದು, ಸ್ನೇಹಿತರೊಂದಿಗೆ ಸಮಯ ಕಳೆಯುವುದು ಮತ್ತು ಉತ್ತಮ ನಿದ್ರೆ ಮಾಡುವುದರಿಂದ ದೂರ ಉಳಿಯುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳು ಮಕ್ಕಳ ನೆಮ್ಮದಿಯನ್ನೇ ಕದಡುತ್ತಿವೆ” ಎಂದು ಹೇಳಿದ ಅವರು, ಈ ಆ್ಯಪ್ಗಳನ್ನು ಮಕ್ಕಳನ್ನು ಗಂಟೆಗಟ್ಟಲೆ ಹಿಡಿದಿಟ್ಟುಕೊಳ್ಳುವಂತೆ (Addictive) ವಿನ್ಯಾಸಗೊಳಿಸಲಾಗಿದೆ ಎಂದು ಆರೋಪಿಸಿದರು. ಇದಲ್ಲದೆ, ಆನ್ಲೈನ್ ಬುಲ್ಲಿಂಗ್ (ಚೇಷ್ಟೆ/ಪೀಡನೆ) ಮತ್ತು ನಿಂದನೆಗಳು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಒಬ್ಬ ತಂದೆಯಾಗಿ ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡ ಅವರು, ಮಕ್ಕಳ ಸುರಕ್ಷತೆಗಾಗಿ ಈ ನಿರ್ಧಾರ ಅನಿವಾರ್ಯವಾಗಿತ್ತು ಎಂದಿದ್ದಾರೆ.
ಬ್ರಿಟನ್ ಸರ್ಕಾರದ ಈ ಹೊಸ ನೀತಿ ಕೇವಲ ಸಾಮಾಜಿಕ ಜಾಲತಾಣಗಳಿಗೆ ಮಾತ್ರ ಸೀಮಿತವಾಗಿಲ್ಲ. ಮಕ್ಕಳೊಂದಿಗೆ ಅಪರಿಚಿತರು ಸುಲಭವಾಗಿ ಸಂಪರ್ಕ ಸಾಧಿಸಲು ಅವಕಾಶ ನೀಡುವ ಗೇಮಿಂಗ್ ಸೇವೆಗಳು, ಲೈವ್-ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳು ಮತ್ತು ಇತರ ಡಿಜಿಟಲ್ ತಾಣಗಳ ಮೇಲೆಯೂ ಸರ್ಕಾರ ಕಣ್ಣಿಡಲು ಸಿದ್ಧತೆ ನಡೆಸುತ್ತಿದೆ. ತಂತ್ರಜ್ಞಾನದ ನಾವೀನ್ಯತೆಗೆ ಧಕ್ಕೆ ಬಾರದಂತೆ ಮಕ್ಕಳನ್ನು ರಕ್ಷಿಸುವುದು ಸರ್ಕಾರದ ಉದ್ದೇಶವಾಗಿದೆ.
ಮುಂಬರುವ ಕ್ರಿಸ್ಮಸ್ ಹಬ್ಬದ ಒಳಗಾಗಿ ಈ ಹೊಸ ನಿಯಮಾವಳಿಗಳಿಗೆ ಅಗತ್ಯವಿರುವ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸರ್ಕಾರ ಗುರಿ ಹೊಂದಿದ್ದು, ಮುಂದಿನ ವರ್ಷದ ಆರಂಭದಿಂದಲೇ ಈ ನಿಷೇಧ ಅಧಿಕೃತವಾಗಿ ಜಾರಿಗೆ ಬರಲಿದೆ.

ಒಂದು ವೇಳೆ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳು ಈ ನಿಯಮವನ್ನು ವಿರೋಧಿಸಿದರೆ ಅಥವಾ ಯುಕೆ ಮಾರುಕಟ್ಟೆಯಿಂದ ಹೊರನಡೆಯಲು ಯತ್ನಿಸಿದರೆ, ಅದನ್ನು ಎದುರಿಸಲು ಮತ್ತು ಹೊಸ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಸ್ಟಾರ್ಮರ್ ತಿಳಿಸಿದ್ದಾರೆ. ಈ ನೀತಿಯನ್ನು ರೂಪಿಸುವ ಮುನ್ನ ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ ಇತರ ದೇಶಗಳ ಉದಾಹರಣೆಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.








