ಸುದ್ದಿಒನ್, ಚಿತ್ರದುರ್ಗ, ಮಾ. 20 : ಯುಗಾದಿ ಹಬ್ಬದ ಅಂಗವಾಗಿ ಜಿಲ್ಲೆಯಾದ್ಯಂತ ಭಕ್ತಿಭಾವದಿಂದ ‘ಚಂದ್ರ ದರ್ಶನ’ ಆಚರಣೆ ನಡೆಯಿತು. ಅಮಾವಾಸ್ಯೆಯ ಮರುದಿನ ಕಾಣಿಸಿಕೊಳ್ಳುವ ಎಳೆ ಚಂದ್ರನನ್ನು ನೋಡುವುದು ಹಿಂದೂ ಸಂಪ್ರದಾಯದಲ್ಲಿ ವಿಶೇಷ ಮಹತ್ವ ಹೊಂದಿದ್ದು, ಹೊಸ ವರ್ಷದ ಶುಭಾರಂಭದ ಸಂಕೇತವಾಗಿ ಪರಿಗಣಿಸಲಾಗಿದೆ.ಹಿಂದೂ ನಂಬಿಕೆಗಳ ಪ್ರಕಾರ ಚಂದ್ರನು ಮನಸ್ಸಿನ ಅಧಿಪತಿ ಹಾಗೂ ಸೌಭಾಗ್ಯದ ಸಂಕೇತ.
ಯುಗಾದಿಯಂದು ಮುಗಿಲಂಚಲ್ಲಿ ಕಾಣಿಸಿಕೊಳ್ಳುವ ಈ ಎಳೆ ಚಂದ್ರನನ್ನು ದರ್ಶಿಸುವುದರಿಂದ ಸುಖ, ಸಮೃದ್ಧಿ ಮತ್ತು ಮನಶಾಂತಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆ, ಸಂಜೆ ಸಮಯದಲ್ಲಿ ಮನೆಮನೆಗಳಿಂದ ಹೊರಬಂದ ಜನರು ಕುಟುಂಬ ಸಮೇತರಾಗಿ ಚಂದ್ರನ ದರ್ಶನ ಮಾಡಿ, ಕಿರಿಯರು ಹಿರಿಯರಿಗೆ ನಮಸ್ಕರಿಸುವ ಸಂಪ್ರದಾಯವನ್ನು ಪಾಲಿಸಿದರು.ಕೆಲವು ಭಕ್ತರು ಚಂದ್ರ ದರ್ಶನದ ಬಳಿಕವೇ ಉಪವಾಸ ಮುರಿಯುವ ಆಚರಣೆಯನ್ನೂ ಕಟ್ಟುನಿಟ್ಟಾಗಿ ಅನುಸರಿಸಿದರು. ಯುಗಾದಿಯಂದು ಉಪವಾಸ ಪಾಲಿಸಿ ಚಂದ್ರನನ್ನು ದರ್ಶಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
ಶುಕ್ರವಾರ ಸಂಜೆ ಸೂರ್ಯಾಸ್ತದ ಸಮಯದಲ್ಲಿ ಚಂದ್ರನ ದರ್ಶನ ಮಾಡಿ ಪುನೀತ ಭಾವದಿಂದ ನಮನ ಸಲ್ಲಿಸಿ ಪರಸ್ಪರ ಒಬ್ಬರಿಗೊಬ್ಬರು ಶುಭಾಶಯಗಳನ್ನು ವಿನಿಮಯ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಚಂದ್ರ ದರ್ಶನವಾಗುತ್ತಲೇ ಮಹಿಳೆಯರು ಮನೆಯ ಅಂಗಳದಲ್ಲಿ ದೀಪ ಹಚ್ಚಿ ಪೂಜೆ ಸಲ್ಲಿಸಿ, ಬಂದವರಿಗೆ ಬೇವು-ಬೆಲ್ಲ ಹಂಚುವುದು ಸಾಮಾನ್ಯ ದೃಶ್ಯವಾಗಿತ್ತು. ಮನೆಯಲ್ಲಿ ಹಿರಿಯರಿಗೆ ಕಾಲಿಗೆ ನಮಸ್ಕರಿಸಿ ಅವರಿಂದ ಆಶೀರ್ವಾದ ಪಡೆದು ದೇವಸ್ಥಾನಗಳಿಗೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿದರು. ರಸ್ತೆಯಲ್ಲಿ ಎದುರಾದ ಗೆಳೆಯರಿಗೆ ಶುಭಾಶಯ ವಿನಿಮಯ ಮಾಡಿಕೊಳ್ಳುವುದು, ಹಿರಿಯರಿಗೆ ನಮಸ್ಕರಿಸುವುದು ಕಂಡುಬಂದಿತು. ಇಂದಿನ ವಿಶೇಷ ದಿನದಂದು ಎಲ್ಲಾ ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು. ದೇವಾಲಯಗಳಲ್ಲಿ ಹೂವುಗಳಿಂದ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಇನ್ನೊಂದೆಡೆ, ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡುವುದರಿಂದ ಅಪವಾದ ಎದುರಾಗುತ್ತದೆ ಎಂಬ ನಂಬಿಕೆಯೂ ಇರುವುದರಿಂದ, ವಿಭಿನ್ನ ಹಬ್ಬಗಳಿಗೆ ಸಂಬಂಧಿಸಿದಂತೆ ಚಂದ್ರ ದರ್ಶನಕ್ಕೆ ವಿಭಿನ್ನ ಮಹತ್ವವಿದೆ ಎಂದು ಹಿರಿಯರು ಅಭಿಪ್ರಾಯಪಟ್ಟರು. ಯುಗಾದಿ ಹಬ್ಬದ ಭಾಗವಾಗಿ ನಡೆದ ಚಂದ್ರ ದರ್ಶನವು ಚಳ್ಳಕೆರೆ ಜನರಲ್ಲಿ ಭಕ್ತಿ, ಸಂಪ್ರದಾಯ ಮತ್ತು ಕುಟುಂಬ ಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಿದಂತಾಭಕ್ತಿ ಇದಾಗಿದೆ.











