ಬೆಂಗಳೂರು: ಕಾಡಿನ ಮಧ್ಯೆ ಅಡಗಿ ರಕ್ಯಚರಿತ್ರೆ ಬರೆಯುತ್ತಿದ್ದ ನಕ್ಸಲರನ್ನು ಮುಖ್ಯ ವಾಹಿನಿಗೆ ಕರೆತರುವಲ್ಲಿ ಶಾಂತಿಗಾಗಿ ನಾಗರಿಕ ವೇದಿಕೆ ಮನವೊಲಿಸಿ, ಶರಣಾಗಲು ಹೇಳಿದ್ದರು. ಅದು ಸಕ್ಸಸ್ ಕೂಡ ಆಗಿದೆ. ಈಗಾಗಲೇ ಕಾಡಿನಿಂದ ಬಿಟ್ಟಿರುವ ಆರು ನಕ್ಸಲರು ಕಡೆ ಗಳಿಗೆಯಲ್ಲಿ ಟ್ವಿಸ್ಟ್ ಕೊಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲಾಡಳಿತ ಬಿಗಿ ಭದ್ರತೆಯೊಂದಿಗೆ ತಯಾರಿ ಮಾಡಿಕೊಂಡಿತ್ತು. ಆದರೆ ಈಗ ಬೇರೆಯೊಂದು ಬೇಡಿಕೆ ಇಟ್ಟಿದ್ದರು.
ಚಿಕ್ಕಮಗಳೂರು ಜಿಲ್ಲಾಡಳಿತದ ಬದಲಿಗೆ ಸಿಎಂ ಸಿದ್ದರಾಮಯ್ಯ ಅವರ ಎದುರೇ ನಾವೂ ಶರಣಾಗುತ್ತೀವಿ ಎಂದಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಕೂಡ ಒಪ್ಪಿಗೆ ಸೂಚಿಸಿದ್ದು, ಸಿಎಂ ಕಚೇರಿಯಲ್ಲಿಯೇ ಆರು ಜನ ನಕ್ಸಲರು ಸಿಎಂ ಗೃಹ ಕಚೇರಿಯಲ್ಲಿ ಶರಣಾಗಲಿದ್ದಾರೆ. ಚಿಕ್ಕಮಗಳೂರಿನಿಂದ ಈಗ ಬೆಂಗಳೂರಿನ ಕಡೆಗೆ ಹೊರಟಿದ್ದಾರೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಕ್ಸಲರು ಸಿಎಂ ಕಚೇರಿಯಲ್ಲಿ ಶರಣಾಗುತ್ತಿರುವುದು.
ಶೃಂಗೇರಿಯ ಮುಂಡಗಾರು ಲತಾ, ದಕ್ಷಿಣ ಕನ್ನಡ ಜಿಲ್ಲೆಯ ಕುತ್ಲೂರಿನ ಸುಂದರಿ, ಬಾಳೆಹೊಳೆಯ ವನಜಾಕ್ಷಿ, ಆಂಧ್ರಪ್ರದೇಶದ ಮಾರೆಪ್ಪ ಅರೋಲಿ ಅಲಿಯಾಸ್ ಜಯಣ್ಣ, ತಮಿಳುನಾಡಿನ ಕೆ.ವಸಂತ, ಕೇರಳದ ಟಿ.ಎನ್.ಜೀಶಾ ಇಂದು ಶರಣಾಗುತ್ತಿರುವ ನಕ್ಸಲರಾಗಿದ್ದಾರೆ. ಇನ್ನು ಶೃಂಗೇರಿ ತಾಲೂಕಿನ ಕಿಗ್ಗಾ ಮೂಲದ ರವಿ ಎಂಬಾತ ಮಾತ್ರ ಶರಣಾಗುವುದಕ್ಕೆ ಬಾಕಿ ಇದೆ. ಈಗಾಗಲೇ ಆತನನ್ನು ಶರಣಾಗಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಕಾರ್ಯರೂಪಕ್ಕೆ ಬರುವ ವಿಶ್ವಾಸವಿದೆ. ನಕ್ಸಲ್ ಮುಖಂಡ ವಿಕ್ರಂ ಗೌಡನನ್ನು ಎನ್ಕೌಂಟರ್ ಮಾಡಿದ ಬಳಿಕ ಉಳಿದ ನಕ್ಸಲರ ಶರಣಾಗತಿಗೆ ವೇಗ ಸಿಕ್ಕಿತ್ತು. ಸದ್ಯ ನಕ್ಸಲರ ಶರಣಾಗತಿಯ ಪ್ರಯತ್ನ ಯಶಸ್ವಿಯಾಗುತ್ತಿದೆ. ಆರು ಜನ ನಕ್ಸಲರು ಹಲವು ಬೇಡಿಕೆಗಳನ್ನಿಟ್ಟು ಸಿಎಂ ಸಿದ್ದರಾಮಯ್ಯ ಅವರ ಮುಂದೆಯೇ ಶರಣಾಗುವುದಕ್ಕೆ ಬೆಂಗಳೂರಿಗೆ ಬರುತ್ತಿದ್ದಾರೆ.