ಮೈಸೂರು: ಸಂಸತ್ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ನಿವಾಸಿ ಮನೋರಂಜನ್ ಆರೋಪಿಯಾಗಿದ್ದಾರೆ. ಘಟನೆ ನಡೆದ ದಿನವೇ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಮೈಸೂರಿನ ಮನೋರಂಜನ್ ಕುಟುಂಬಸ್ಥರಿಗೆ ಗುಪ್ತಚರ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಸಂಸತ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ಮೈಸೂರಿನ ವಿಜಯನಗರದಲ್ಲಿರುವ ಆರೋಪಿ ಮನೋರಂಜನ್ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಹಲವು ವಿಚಾರಗಳನ್ನು ಕಲೆ ಹಾಕಿದ್ದಾರೆ. ಮನೋರಂಜನ್ ತಂದೆ ಕೂಡ ಮಗ ಮಾಡಿದ ಕೆಲಸಕ್ಕೆ ವಿಷಾಧ ವ್ಯಕ್ತಪಡಿಸಿದ್ದಾರೆ. ತನಿಖೆಯ ವೇಳೆ ಅಧಿಕಾರಿಗಳು ಎಚ್ಚರಿಕೆಯೊಂದನ್ನು ನೀಡಿದ್ದು, ಮೈಸೂರು ಬಿಟ್ಟು ಹೊರಗೆ ಹೋಗದಂತೆ ಸೂಚನೆ ನೀಡಿದ್ದಾರೆ.
ನಮ್ಮ ಸೂಚನೆ ಬರುವ ತನಕ ನೀವೂ ಮೈಸೂರು ಬಿಟ್ಟು ಎಲ್ಲಿಯೂ ತೆರಳಬೇಡಿ. ತುರ್ತು ಪರಿಸ್ಥಿತಿ ಇದ್ದರೆ, ನಮ್ಮ ಗಮನಕ್ಕೆ ತನ್ನಿ. ಅನುಮತಿ ಸಿಕ್ಕ ಮೇಲೆಯೇ ತೆರಳಬೇಕು. ನಿಮ್ಮ ಮನೆಗೆ ಸದ್ಯಕ್ಕೆ ಯಾವುದೇ ರೀತಿಯ ಸಂಬಂಧಿಕರು ಬರದಂತೆ ನೋಡಿಕೊಳ್ಳಿ. ಜೊತೆಗೆ ಪ್ರತಿನಿತ್ಯ ಬರುವ ಕರೆಗಳ ಬಗ್ಗೆ ನಮಗೆ ಮಾಹಿತಿ ನೀಡಿ ಎಂದು ಸೂಚನೆ ನೀಡಿದ್ದಾರಂತೆ. ಈ ಮೂಲಕ ತನಿಖೆ ತೀವ್ರಗೊಂಡಿದ್ದು, ಆರೋಪಿಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಅಷ್ಟೇ ಅಲ್ಲ ಅವರ ಕುಟುಂಭಸ್ಥರ ಮೇಲೂ ಗಮನಹರಿಸಿದ್ದಾರೆ. ಜೊತೆಗೆ ಮುಂದಿನ ಸೂಚನೆಯ ತನಕ ಪೇಪರ್ ಆಗಲಿ, ಪುಸ್ತಕಗಳನ್ನಾಗಲಿ ಮಾರಬಾರದು ಎಂಬ ಸೂಚನೆ ನೀಡಿದ್ದಾರೆ. ಸಾಗರ್ ಹಾಗೂ ಮನೋರಂಜನ್ ಸಂಸತ್ ಅಧಿವೇಶನ ನಡೆಯುವಾಗ ವೀಕ್ಷಕರ ಗ್ಯಾಲರಿಯಿಂದ ಎಂಟ್ರಿಕೊಟ್ಟು, ದಾಂಧಲೆ ಸೃಷ್ಟಿ ಮಾಡಿದ್ದರು.