ಬೆಂಗಳೂರು: ಕನ್ನಡದ ಉಳಿವಿಗಾಗಿ ದೊಡ್ಡ ಚಳವಳಿಯೇ ಆಗಬೇಕಿದೆ. ಕನ್ನಡದ ಬರವಣಿಗೆ, ಮಾತು, ಮೊಬೈಲ್ ಸಂದೇಶದ ಮೂಲಕ ನಾವೆಲ್ಲರೂ ಆ ಚಳವಳಿಯ ಭಾಗವಾಗಬೇಕು ಎಂದು ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಕುಮಾರ್ ಹೇಳಿದರು.
ಬಿಜೆಪಿ ಕಚೇರಿಯಲ್ಲಿ 66ನೇ ಕನ್ನಡ ರಾಜ್ಯೋತ್ಸವವನ್ನು ಆಚರಣೆಯ ನಂತರ ಮಾತನಾಡಿದ ಅವರು, ಕನ್ನಡದ ಶಬ್ದಗಳು ನಾಲಿಗೆ ಮೇಲೆ ಕುಣಿದಾಡಬೇಕು. ಇಂಜಿನಿಯರಿಂಗ್ ಕ್ಷೇತ್ರದಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿ ಕನ್ನಡ ಶಬ್ದಗಳಿಲ್ಲ. ಕೇವಲ ಶಾಸ್ತ್ರಕ್ಕಾಗಿ ಕನ್ನಡ ರಾಜ್ಯೋತ್ಸವ ಆಚರಿಸಬಾರದು. ಕನ್ನಡಾಂಬೆ, ಭಾರತಾಂಬೆ ಕೇವಲ ಒಂದು ಭಾವಚಿತ್ರಕ್ಕೆ ಸೀಮಿತವಲ್ಲ. ಅದು ಜೀವಂತ ಅಸ್ತಿತ್ವ ಆಗಬೇಕು ಎಂದರು.
ಹೆಚ್ಚಿನ ಕನ್ನಡ ಶಬ್ದಗಳ ಬಳಕೆ, ಕನ್ನಡದಲ್ಲಿ ಸಹಿ ಮಾಡುವುದು, ಮಕ್ಕಳಿಗೆ ಕನ್ನಡದ ಅಂಕಿ, ಅಕ್ಷರ, ಶಬ್ದಗಳನ್ನು ಕಲಿಸುವುದು, ಬಣ್ಣ, ಸಂಬಂಧಗಳನ್ನು ಎಳೆಯರಿಗೆ ತಿಳಿಸುವುದು ಅನಿವಾರ್ಯ. ಭಾಷೆ ಮರೆಯಾದರೆ ಅದನ್ನು ಮತ್ತೆ ತರುವುದು ಕಷ್ಟ. ಕಳಕೊಳ್ಳುವುದು ಸುಲಭ. ಇಂಗ್ಲಿಷ್ ನಮ್ಮನ್ನು ಮುಗಿಸುತ್ತಿದೆ ಎಂದರು.
ಕನ್ನಡವನ್ನು ಪ್ರೀತಿಸಿ ಬೆಳೆಸಬೇಕು. ಕನ್ನಡ ಪರಂಪರೆ, ಗ್ರಾಮೀಣ ರೀತಿನೀತಿಯನ್ನು ಉಳಿಸಬೇಕು. ನಮ್ಮ ಗಾಳಿ, ನೆಲ, ಸಾಹಿತ್ಯ, ಪರಂಪರೆಯನ್ನು ಬೆಳೆಸುವ ರೀತಿಯಲ್ಲಿ ನಾವು ಸಾಗಬೇಕು ಎಂದು ಆಶಿಸಿದರು. ಉತ್ತರ ಭಾರತ ಮತ್ತು ದಕ್ಷಿಣ ಭಾರತ ಎಂಬ ಬೇರೆ ಬೇರೆ ಡಿಎನ್ಎೆ ಇಲ್ಲ ಎಂದರು. ಸ್ವದೇಶಿ ವಸ್ತುಗಳ ಬಳಕೆ ನಮ್ಮದಾಗಲಿ. ಚೀನಾದ ವಸ್ತುಗಳನ್ನು ದೂರ ಇಡೋಣ ಎಂದು ಅವರು ತಿಳಿಸಿದರು.