ಚಿತ್ರದುರ್ಗ : ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಜಿಲ್ಲೆಯಾದ್ಯಂತ ಮೆಕ್ಕೆಜೋಳ, ಸೂರ್ಯಕಾಂತಿ ಹಾಗೂ ಶೇಂಗಾ ಬೆಳೆಗಳು ಬಾಡುತ್ತಿವೆ. ಆದರೆ ಇದೇ ಮಳೆ ಕೊರತೆ ಟೊಮೆಟೊ ಬೆಳೆಗಾರರಿಗೆ ಆರಂಭದಲ್ಲಿ ವರವಾಗಿ ಪರಿಣಮಿಸಿದ್ದರೂ, ಇದೀಗ ಅದೇ ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಉತ್ತಮ ಇಳುವರಿ ಬಂದಿದ್ದರೂ ಮಾರುಕಟ್ಟೆಯಲ್ಲಿ ಬೆಲೆ ಭಾರಿ ಕುಸಿದಿರುವುದರಿಂದ ರೈತರು ತೀವ್ರ ನಷ್ಟಕ್ಕೆ ಸಿಲುಕಿದ್ದಾರೆ. ಹಾಕಿದ ಬಂಡವಾಳವೂ ವಾಪಸ್ ಬಾರದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಲ ರೈತರು ಟೊಮೆಟೊವನ್ನು ರಸ್ತೆ ಬದಿಗೆ ಸುರಿದು ಹೋಗುತ್ತಿದ್ದಾರೆ.
ಕಳೆದ ವರ್ಷ ಜಿಲ್ಲೆಯಲ್ಲಿ ಸುಮಾರು 3,500 ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗಿತ್ತು. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಟೊಮೆಟೊಗೆ ಉತ್ತಮ ಬೆಲೆ ದೊರೆತ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯ ರೈತರು ಟೊಮೆಟೊ ನಾಟಿ ಮಾಡಿದರು. ಪರಿಣಾಮ ಈ ಬಾರಿ ಟೊಮೆಟೊ ಬೆಳೆಯುವ ಪ್ರದೇಶ 7,960 ಹೆಕ್ಟೇರ್ಗೆ ಏರಿಕೆಯಾಗಿದೆ. ಒಟ್ಟಾರೆ ಸುಮಾರು 3.50 ಲಕ್ಷ ಟನ್ ಇಳುವರಿ ಬಂದಿರುವುದು ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಜಿಲ್ಲೆಯಲ್ಲೇ ಚಳ್ಳಕೆರೆ ತಾಲ್ಲೂಕಿನಲ್ಲಿ 7,500 ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗಿದ್ದು, ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಸುಮಾರು 150 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಇದೆ. ಚಳ್ಳಕೆರೆ ತಾಲ್ಲೂಕಿನ ಕಸಬಾ, ತಳಕು ಹಾಗೂ ಪರಶುರಾಂಪುರ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬೆಳೆಯಲಾಗಿದೆ.

ಚಳ್ಳಕೆರೆ ತಾಲ್ಲೂಕಿನ ಚಿಕ್ಕಮ್ಮನಹಳ್ಳಿ ಗೇಟ್ ಬಳಿ ಇರುವ ಟೊಮೆಟೊ ಮಾರುಕಟ್ಟೆಗೆ ಪ್ರತಿದಿನ ಅಪಾರ ಪ್ರಮಾಣದಲ್ಲಿ ಟೊಮೆಟೊ ಹರಿದುಬರುತ್ತಿದೆ. 15 ಕೆ.ಜಿ. ತೂಕದ ಒಂದು ಕ್ರೇಟ್ ಟೊಮೆಟೊ ಕೇವಲ ₹60ರಿಂದ ₹70ಕ್ಕೆ ಮಾರಾಟವಾಗುತ್ತಿದೆ. ಇಷ್ಟು ಕಡಿಮೆ ಬೆಲೆಯಿಂದ ರೈತರಿಗೆ ಬೆಳೆ ಬೆಳೆಯಲು ಮಾಡಿದ ಖರ್ಚು ಕೂಡ ವಾಪಸ್ ಬರುತ್ತಿಲ್ಲ.ಬೆಲೆ ಕುಸಿತದಿಂದ ಬೇಸತ್ತಿರುವ ರೈತರು ಮಾರುಕಟ್ಟೆ ಹಾಗೂ ರಸ್ತೆ ಬದಿಗಳಲ್ಲಿ ಟೊಮೆಟೊವನ್ನು ಸುರಿದು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ತಳಕು ಗ್ರಾಮದ ರೈತ ಸಿ. ಕುಮಾರ್ ಅವರು, “ಮೂರು ಎಕರೆ ಜಮೀನಿನಲ್ಲಿ ಟೊಮೆಟೊ ಉತ್ತಮವಾಗಿ ಬೆಳೆದಿದೆ. ಇಲ್ಲಿಯವರೆಗೆ ಸುಮಾರು ₹3 ಲಕ್ಷ ಖರ್ಚು ಮಾಡಿದ್ದೇನೆ. ಆದರೆ ಈಗಿನ ಬೆಲೆಯಲ್ಲಿ ಬಂಡವಾಳವೂ ವಾಪಸ್ ಬರುವುದಿಲ್ಲ. ಹೀಗಾಗಿ 150 ಕ್ರೇಟ್ ಟೊಮೆಟೊವನ್ನು ರಸ್ತೆಗೆ ಸುರಿಯಬೇಕಾಯಿತು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಕುಸಿದಾಗ ಚಳ್ಳಕೆರೆ ಭಾಗದ ರೈತರು ಟೊಮೆಟೊವನ್ನು ಕೋಲಾರ ಮಾರುಕಟ್ಟೆಗೆ ಸಾಗಿಸುತ್ತಿದ್ದರು. ಆದರೆ ಈ ಬಾರಿ ರಾಜ್ಯದಾದ್ಯಂತ ಬೆಲೆ ಕುಸಿತವಾಗಿರುವುದರಿಂದ ಕೋಲಾರಕ್ಕೂ ಸಾಗಿಸಿ ಪ್ರಯೋಜನವಿಲ್ಲದಂತಾಗಿದೆ.ಚಳ್ಳಕೆರೆಯಿಂದ ಕೋಲಾರಕ್ಕೆ ಒಂದು ಕ್ರೇಟ್ ಟೊಮೆಟೊ ಸಾಗಿಸಲು ಸುಮಾರು ₹50 ಬಾಡಿಗೆ ನೀಡಬೇಕಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಕ್ರೇಟ್ ಬೆಲೆಯೇ ₹60-70ರಷ್ಟಿರುವುದರಿಂದ ಸಾಗಣೆ ವೆಚ್ಚವನ್ನೂ ಭರಿಸಲು ಸಾಧ್ಯವಾಗದೆ ರೈತರು ಫಸಲನ್ನು ಹೊಲದಲ್ಲೇ ಬಿಡುವ ಅಥವಾ ರಸ್ತೆಗೆ ಸುರಿಯುವ ಪರಿಸ್ಥಿತಿ ಎದುರಾಗಿದೆ.
ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಿಂದಲೂ ಉತ್ತಮ ಗುಣಮಟ್ಟದ ಟೊಮೆಟೊ ಮಾರುಕಟ್ಟೆಗೆ ಬರುತ್ತಿದೆ. ಇದರ ಜೊತೆಗೆ ಸ್ಥಳೀಯ ರೈತರು ಉತ್ತಮ ಗುಣಮಟ್ಟದ ಹೈಬ್ರಿಡ್ ಸಸಿಗಳನ್ನು ಬಳಸಿರುವುದರಿಂದ ಇಳುವರಿ ಗಣನೀಯವಾಗಿ ಹೆಚ್ಚಾಗಿದೆ. ಕೇವಲ 60-65 ದಿನಗಳಲ್ಲೇ ಕಟಾವಿಗೆ ಬಂದಿರುವುದೂ ಮಾರುಕಟ್ಟೆಯಲ್ಲಿ ಏಕಾಏಕಿ ಪೂರೈಕೆ ಹೆಚ್ಚಲು ಕಾರಣವಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಟೊಮೆಟೊ ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಬೆಳೆ ಹೆಚ್ಚಾಗಿ ಬಂದಾಗ ಬೆಂಬಲ ಬೆಲೆ ಯೋಜನೆಯಡಿ ಟೊಮೆಟೊ ಖರೀದಿಸಲು ಸರ್ಕಾರ ಸೂಕ್ತ ನಿಯಮ ರೂಪಿಸಬೇಕು. ಪ್ರಸ್ತುತ ತೀವ್ರ ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣ ನೆರವು ನೀಡಬೇಕು ಎಂದು ಬೆಳೆಗಾರರು ಆಗ್ರಹಿಸಿದ್ದಾರೆ.
ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಸವಿತಾ ಅವರ ಪ್ರಕಾರ, “ಪ್ರತಿ ಬಾರಿಗಿಂತ ಈ ಬಾರಿ ಜಿಲ್ಲೆಯಲ್ಲಿ ಅತ್ಯಧಿಕ ಟೊಮೆಟೊ ಇಳುವರಿ ಬಂದಿದೆ. ಬೆಂಬಲ ಬೆಲೆ ಯೋಜನೆಯಡಿ ಟೊಮೆಟೊ ಖರೀದಿಸುವ ಕುರಿತು ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕಿದೆ” ಎಂದು ತಿಳಿಸಿದ್ದಾರೆ.ಒಟ್ಟಿನಲ್ಲಿ, ಮಳೆ ಕೊರತೆಯ ನಡುವೆಯೂ ಭರ್ಜರಿ ಫಸಲು ಪಡೆದಿದ್ದ ಚಳ್ಳಕೆರೆ ಭಾಗದ ಟೊಮೆಟೊ ಬೆಳೆಗಾರರಿಗೆ ಇದೀಗ ಬೆಲೆ ಕುಸಿತ ದೊಡ್ಡ ಹೊಡೆತ ನೀಡಿದೆ. ಉತ್ತಮ ಇಳುವರಿಯೇ ರೈತರ ಪಾಲಿಗೆ ಸಂಕಷ್ಟವಾಗಿ ಪರಿಣಮಿಸಿದ್ದು, ಸರ್ಕಾರದ ನೆರವಿನತ್ತ ಬೆಳೆಗಾರರು ಎದುರು ನೋಡುತ್ತಿದ್ದಾರೆ.











