ದಕ್ಷಿಣ ಕನ್ನಡ: ಮುಂಗಾರು ಮಳೆಯ ಅಬ್ಬರ ಆರಂಭದಿಂದಲೇ ಹೆಚ್ಚಾಗಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಂತು ಬೆಂಬಿಡದೆ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳೆಲ್ಲಾ ಕೆರೆಯಂತಾಗಿದೆ. ಇದೀಗ ಮಳೆಯ ಪರಿಣಾಮದಿಂದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.
ಮಳೆ ಸುರಿಯುತ್ತಿರುವ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ವಗ್ಗ ಎಂಬಲ್ಲಿ ಮನೆಯೊಂದೆ ಗೋಡೆ ಕುಸಿದಿದೆ. ಇದರ ಪರಿಣಾಮ ಮನೆಯಲ್ಲಿದ್ದ 45 ವರ್ಷದ ಬಿಜು ಪಾಲಾಕ್ಕಡ್, 46 ವರ್ಷದ ಸಂತೋಷ್ ಆಲಪ್ಪುಳ, 46 ವರ್ಷದ ಬಾಬು ಕೊಟ್ಟಾಯಂ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ಕೇರಳ ಮೂಲದವರೆಂದು ಗುರುತಿಸಲಾಗಿದೆ.
ಮೃತರು ಕೇರಳದಿಂದ ಹೆನ್ರಿ ಎಂಬುವವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು. ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸಕ್ಕೆ ಬಂದಿದ್ದ ಆ ಮೂವರು ತೋಟದ ಪಕ್ಕದಲ್ಲಿಯೇ ವಾಸವಿದ್ದರು. ಆದರೆ ನಿನ್ನೆ ಸುರಿದ ಬಾರೀ ಮಳೆಗೆ ಗುಡ್ಡ ಕುಸಿದು ಈ ದುರ್ಘಟನೆ ನಡೆದಿದೆ.
ರಾಜ್ಯದಲ್ಲಿ ಬಾರೀ ಮಳೆಯಾಗುತ್ತಿರುವ ಕಾರಣ ಹವಮಾನ ಇಲಾಖೆ ಕೂಡ ಎಚ್ಚರಿಕೆ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಹಾಗೂ ಉಡುಪಿ ಭಾಗಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ. ಹೀಗಾಗಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ಕೊಡಗು ಜಿಲ್ಲೆಯಲ್ಲೂ ಸತತ ಐದನೇ ದಿನವೂ ಮಳೆ ಮುಂದುವರೆದಿದೆ.