ಸುದ್ದಿಒನ್, ಚಿತ್ರದುರ್ಗ, (ಅ.02) : ಹಿಂದೂ ಮಹಾಗಣಪತಿಯ ಪೆಂಡಾಲ್‍ನಲ್ಲಿ ಶನಿವಾರ ನಡೆದ ‘ಭಾಗವಾಧ್ವಜ’ ಹರಾಜು ಈ ಭಾರಿ ತೀವ್ರ ಕೂತುಹಲ ಕೆರಳಿಸಿತು.
ಸಂಪ್ರದಾಯದಂತೆ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ 21 ದಿನ ಪೂಜೆ ಸಲ್ಲಿಸಿ ವಿಸರ್ಜನೆ ನಡೆಸುವ ಮುನ್ನ ಭಾಗವಾಧ್ವಜ, ರಾಮಮಂದಿರದ ಪ್ರತಕೃತಿ ಹಾಗೂ ಹೂವಿನ ಹಾರಗಳನ್ನು ಹರಾಜು ಹಾಕಲಾಗುತ್ತದೆ.
ಈ ವರ್ಷ ‘ಭಾಗವಾಧ್ವಜ’ವನ್ನು ಹರಾಜು ಸ್ಥಳಕ್ಕೆ ಕೊನೆ ಕ್ಷಣದಲ್ಲಿ ಆಗಮಿಸಿದ ಉದ್ಯಮಿ, ಹಿರಿಯೂರು ಜೆಡಿಎಸ್ ಅಭ್ಯರ್ಥಿ ಕೆ.ಸಿ.ವೀರೇಂದ್ರ ಪಪ್ಪಿ 2 ಲಕ್ಷದ 1 ಸಾವಿರಕ್ಕೆ ಪಡೆದರು. 50 ಸಾವಿರದಿಂದ ಪ್ರಾರಂಭವಾದ ಹರಾಜು ಕೊನೆಗೆ 2 ಲಕ್ಷಕ್ಕೆ ಬಂದು ನಿಂತಿತು.
ಪ್ರಾರಂಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ವಿಪುಲ್ ಜೈನ್ 1 ಲಕ್ಷದವರೆಗೂ ಕೂಗಿದರು. ಆ ಕ್ಷಣಕ್ಕೆ ಆಗಮಿಸಿದ ವೀರೇಂದ್ರ ಪಪ್ಪಿ ಒಮ್ಮೇಲೆ 1.50 ಲಕ್ಷ ಕೂಗಿದರು. ಬಳಿಕ ವಿಪುಲ್ ಜೈನ್ ಹಾಗೂ ಪಪ್ಪಿ ನಡುವೆ ಸ್ಪರ್ಧೆ ಏರ್ಪಟ್ಟು ಮೂರನೇ ಕೂಗಿಗೆ 2 ಲಕ್ಷ ಹೇಳುವ ಮೂಲಕ ‘ಭಾಗವಾಧ್ವಜ’ವನ್ನು ತಮ್ಮದಾಗಿಸಿಕೊಂಡರು.