Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಾಂಸಾರಿಕ ಸಹಬಾಳ್ವೆಗೆ ಹಾಗೂ ಉತ್ತಮ ಬಾಂಧವ್ಯಕ್ಕೆ ರಂಗಭೂಮಿ ಸಹಕಾರಿ : ಬಸವಪ್ರಭು ಸ್ವಾಮೀಜಿ

---Advertisement---

 

 

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 20 : ಆರೋಗ್ಯಕರ ಬೆಳವಣಿಗೆಗೆ ರಂಗಭೂಮಿ ಅಗತ್ಯವಾಗಿದೆ. ಜಾಲತಾಣಗಳ ಅತಿರೇಕಗಳಿಗೆ ಬೇಸತ್ತ ಜನ ಮತ್ತೆ ರಂಗಭೂಮಿಯತ್ತ ವಾಲುತ್ತಿರುವುದು ಸಂತಸ ತಂದಿದೆ. ಸಾಂಸಾರಿಕ ಸಹಬಾಳ್ವೆಗೆ ಹಾಗೂ ಉತ್ತಮ ಬಾಂಧವ್ಯಕ್ಕೆ ರಂಗಭೂಮಿ ಸಹಕಾರಿಯಾಗಿದೆ ಎಂದು ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ, ಬಾಪೂಜಿ ಸಮೂಹ ಸಂಸ್ಥೆಗಳು, ರಂಗಸೌರಭ ಕಲಾ ಸಂಘ ಹಾಗೂ ಶ್ರೀ ಶಿವಕುಮಾರ ಕಲಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಪಿಳ್ಳೆಕೆರೇನಹಳ್ಳಿಯ ಬಾಪೂಜಿ ವಿದ್ಯಾಸಂಸ್ಥೆಯ ಆವರಣದಲ್ಲಿ ಮಂಗಳವಾರ ಸಂಜೆ 6 ಗಂಟೆಗೆ ಕನ್ನಡ ರಾಜ್ಯೋತ್ಸವ, ಮಕ್ಕಳ ಕಲರವ ಮತ್ತು ಶಿವಸಂಚಾರ ನಾಟಕೋತ್ಸವ 2024 ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಮಾತನಾಡಿದರು.
ಒಂದು ನಾಟಕ ವೀಕ್ಷಿಸಿದರೆ ಹಲವು ಪುಸ್ತಕಗಳನ್ನು ಓದಿದ ಅನುಭವವಾಗುತ್ತದೆ. ನಾಟಕ ನೋಡುವ ಮನಸ್ಸುಗಳು ಹೆಚ್ಚಾಗಬೇಕು. ಉತ್ತಮ ಜೀವನಕ್ರಮವನ್ನು ಕಲ್ಪಿಸುವ ರಂಗಭೂಮಿಯನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ನಾಟಕೋತ್ಸವಕ್ಕೆ ಪಾಶ್ಚಾತ್ಯ ಸಂಗೀತವಾದ್ಯ ಜಂಬೆ ನುಡಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಭವಿಷ್ಯದ ಪೀಳಿಗೆಗೆ ಸಾಹಿತ್ಯ, ಸಾಂಸ್ಕøತಿಕ ಮತ್ತು ನಾಟಕಗಳ ಅಭಿರುಚಿ ಬೆಳೆಸಬೇಕಿದೆ. ಪ್ರೇಕ್ಷಕರು ನಾಟಕಗಳಲ್ಲಿ ಬರುವ ಪಾತ್ರಗಳೊಂದಿಗೆ ಸಮ್ಮಿಳನಗೊಂಡು ಅದರಿಂದ ಜೀವನಮೌಲ್ಯಗಳನ್ನು ತಮ್ಮದಾಗಿಸಿಕೊಳ್ಳಬೇಕು. ಆಗ ಮಾತ್ರ ನಾಟಕಗಳಲ್ಲಿ ಬರುವ ವಿಷಯವಸ್ತುವನ್ನು ಗ್ರಹಿಸಲು ಸಾಧ್ಯವಾಗುತ್ತದೆ. ನಾಟಕಗಳು ಪ್ರತಿಯೊಬ್ಬರ ಆಂತರಿಕ ಮನೋಧರ್ಮಗಳನ್ನು ಗಟ್ಟಿಗೊಳಿಸುತ್ತವೆ ಎಂದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆಎಮ್ ವೀರೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ ಚಿತ್ರದುರ್ಗ ನಗರದಲ್ಲಿ ಶಿವಸಂಚಾರ, ನೀನಾಸಂ ಹಾಗೂ ಹವ್ಯಾಸಿ ರಂಗಕರ್ಮಿಗಳ ನಾಟಕಗಳು ನಿರಂತರವಾಗಿ ನಾಟಕಗಳನ್ನು ಪ್ರದರ್ಶಿಸುತ್ತಿವೆ. ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಂಗ ಕಲಾವಿದರಿಗೆ ಮತ್ತಷ್ಟು ಉತ್ತೇಜನ ಮತ್ತು ಪ್ರೋತ್ಸಾಹ ನೀಡಬೇಕು. ನಾಟಕ, ಕಲೆ, ಸಾಹಿತ್ಯ ಅಭಿರುಚಿಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ, ನಾಟಕಕಾರ ಮತ್ತು ಆರ್ಥಿಕತಜ್ಞ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಬಾಪೂಜಿ ಸಮೂಹ ಸಂಸ್ಥೆಯ ನಿರ್ದೇಶಕ ಕೆಎಮ್ ಚೇತನ್, ಶಸಾಪ ತಾಲ್ಲೂಕಧ್ಯಕ್ಷ ಷಡಾಕ್ಷರಯ್ಯ, ರಂಗನಿರ್ದೇಶಕ ಕೆಪಿಎಮ್ ಗಣೇಶಯ್ಯ, ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ಪ್ರೊ.ಎಂ.ಆರ್. ಜಯಲಕ್ಷ್ಮಿ, ಪ್ರ.ಕಾರ್ಯದರ್ಶಿ ಶೋಭಾ ಮಲ್ಲಿಕಾರ್ಜುನ್, ಸ.ಕಾರ್ಯದರ್ಶಿ ಶೈಲಜಾಬಾಬು, ಗ್ರಾ.ಪಂ ಸದಸ್ಯೆ ಜ್ಯೋತಿ ದೇವೇಂದ್ರಪ್ಪ ಉಪಸ್ಥಿತರಿದ್ದರು.
ದಾವಣಗೆರೆಯ ಸಂಗೀತ ವಿದ್ವಾನ್ ಆನಂದಕುಮಾರ್ ಪಾಟೀಲ್ ಹಿಂದೂಸ್ತಾನಿ ಸಂಗೀತಗಾಯನ ಪ್ರಸ್ತುತಪಡಿಸಿದರು. ನಾಟಕಕಾರ ಬಿ.ಆರ್.ಪೊಲೀಸ್ ಪಾಟೀಲ್ ವಿರಚಿತ ನಾಟಕ ತುಲಾಭಾರ ವಿಶ್ವೇಶ್ವರೀ ಹಿರೇಮಠ ನಿರ್ದೇಶನದಲ್ಲಿ ಸಾಣೇಹಳ್ಳಿ ಶಿವಸಂಚಾರದ ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು.
ಚಿತ್ರದುರ್ಗ ಜಿಲ್ಲೆಯ ನಾಗರಿಕರು, ರಂಗಾಸಕ್ತರು, ಜಿಲ್ಲಾಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು, ಉಪನ್ಯಾಸಕರು, ಕಲಾವಿದರು, ಸಾಹಿತಿಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಜನ ನಾಟಕವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment