ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ,ಸೆಪ್ಟೆಂಬರ್. 18 : ಸುಸಂಸ್ಕøತ ಸಮಾಜ ನಿರ್ಮಾಣ ಮಾಡುವಲ್ಲಿ ಜಂಗಮರ ಪಾತ್ರ ಮಹತ್ವದ್ದು ಎಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.
ಜಿಲ್ಲಾ ಜಂಗಮ ಸಮಾಜ ಸಂಸ್ಥೆಯಿಂದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ 2025-26 ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ಶಿಷ್ಯ ವೇತನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೇವರ ಸ್ಥಾನದಲ್ಲಿ ಜಂಗಮರನ್ನು ನೋಡುವ ಪರಿಪಾಠವಿದೆ. ಉತ್ತರ ಕರ್ನಾಟಕದ ಕಡೆ ಜಂಗಮರ ಬಗ್ಗೆ ಪೂಜ್ಯ ಭಾವನೆಯಿದೆ. ಮದುವೆ ಇನ್ನಿತರೆ ಶುಭ ಸಮಾರಂಭಗಳಲ್ಲಿ ಜಂಗಮರು ಇರಲೇಬೇಕು. ಯುವ ಜನಾಂಗವನ್ನು ಶಿಕ್ಷಣವಂತರನ್ನಾಗಿಸಿ ಸಮಾಜವನ್ನು ಗಟ್ಟಿಗೊಳಿಸುವ ಕೆಲಸವಾಗಬೇಕಿದೆ. ಕೇವಲ ಜಂಗಮ ಸಮಾಜದ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸುವುದರ ಜೊತೆಗೆ ಬೇರೆ ಜಾತಿಯ ಬಡ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಿ ಎಂದು ಸಲಹೆ ನೀಡಿದರು.
ಜಂಗಮರಿಗೆ ಶ್ರೇಷ್ಟ ಸ್ಥಾನಮಾನವಿದೆ. ಸಾವು ಸಂಭವಿಸಿದಾಗ ಅಂತ್ಯಕ್ರಿಯೆ ಸಮಯದಲ್ಲಿ ಜಂಗಮರು ತಲೆ ಮೇಲೆ ಪಾದವಿಡದಿದ್ದರೆ ಮೋಕ್ಷ ಸಿಗುವುದಿಲ್ಲ ಎನ್ನುವ ನಂಬಿಕೆಯಿದೆ. ಯುವಕ/ಯುವತಿಯರಲ್ಲಿ ಸಂಸ್ಕಾರ ಮೂಡಿಸಿ ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ಜಂಗಮ ಸಮಾಜ ಶಿಕ್ಷಣ, ಸಂಸ್ಕಾರ, ನೇತೃತ್ವ, ಗುರುಸ್ಥಾನ ನೀಡಿದೆ. ಜಾತಿ ವ್ಯವಸ್ಥೆ ತಾಂಡವವಾಡುತ್ತಿದ್ದ ಕಾಲದಲ್ಲಿ ಶಿವ, ವಿಷ್ಣು ಆರಾಧಕರ ಮೇಲೆ ವಿವಿಧ ಬಣಗಳು ಸೃಷ್ಠಿಯಾಗಿ ಹೊಡೆದಾಟಗಳಾಗುತ್ತಿದ್ದವು. ಸಂಸ್ಕಾರ, ಶಿಕ್ಷಣ, ಪರಸ್ಪರ ಪ್ರೀತಿ ಸಹೋದರತ್ವದಿಂದ ಬಾಳುವುದನ್ನು ಕಲಿಸುತ್ತಿರುವ ಜಂಗಮ ಸಮಾಜದ ಇವೆಲ್ಲವೂ ಸರಿಹೋಗಿದೆ ಎಂದರು.

ಶುಭ ಕಾರ್ಯದಿಂದ ಹಿಡಿದು ಅಶುಭದವರೆಗೂ ಜಂಗಮರು ಪ್ರಮುಖ ಪಾತ್ರ ವಹಿಸುತ್ತಾರೆ. ಘನತೆ, ಗೌರವ, ಪಾಂಡಿತ್ಯವುಳ್ಳವರನ್ನು ಗುರುಗಳೆಂದು ಗೌರವಿಸಲಾಗುವುದು ಸಮಾಜಕ್ಕೆ ಮಾರ್ಗದರ್ಶನ, ಸಂಸ್ಕಾರದ ಅವಶ್ಯಕತೆಯಿದೆ. ಹಾಗಾಗಿ ಗುರುವಿನ ಸ್ಥಾನ ಖಾಲಿ ಬಿಡಬೇಡಿ. ಪ್ರತಿ ಜಂಗಮರ ಮನೆಯಲ್ಲಿಯೂ ಮುಂದುವರೆಸಿಕೊಂಡು ಹೋಗಬೇಕಿದೆ. ಇಲ್ಲದಿದ್ದರೆ ಘೋರ ಘಟನೆಗಳು ಸಂಭವಿಸುತ್ತವೆ. ನಿಮಗೆ ಏನಾದರೂ ಸಮಸ್ಯೆಗಳು ಎದುರಾದಾಗ ನನ್ನ ಗಮನಕ್ಕೆ ತನ್ನಿ ಸದಾ ನಿಮ್ಮ ಜೊತೆಯಲ್ಲಿರುತ್ತೇನೆಂದು ಭರವಸೆ ನೀಡಿದರು.
ನಿವೃತ್ತ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಹಳ್ಳಿಗಳಲ್ಲಿ ಈಗಲು ಜಂಗಮರ ಬಗ್ಗೆ ಅಪಾರ ಗೌರವವಿದೆ. ಜಂಗಮರನ್ನು ಮನೆಗೆ ಕರೆಸಿ ಪಾದ ಪೂಜೆ ಮಾಡಿ ಉಟ ಮಾಡಿಸುವ ಪದ್ದತಿ ನಿಂತಿಲ್ಲ. ಜಂಗಮರು ದುಶ್ಚಟಗಳಿಂದ ದೂರವಿದ್ದು, ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿ. ಸಮಾಜ ವೇಗವಾಗಿ ಓಡುತ್ತಿದೆ. ಎಲ್ಲಾ ರಂಗದಲ್ಲಿಯೂ ಪೈಪೋಟಿ ಇರುವುದರಿಂದ ಹೆಚ್ಚಿನ ಅಂಕಗಳನ್ನು ಗಳಿಸುವುದು ಅನಿವಾರ್ಯವಾಗಿದೆ ಎಂದರು.
ಧರ್ಮ ನಿಮ್ಮ ನಿಮ್ಮ ಮನೆಯಲ್ಲಿರಬೇಕು. ಸಮಾಜದ ಜೊತೆಯಲ್ಲಿ ಓಡಬೇಕಿದೆ. ಶಿಕ್ಷಣದ ಜೊತೆ ಮಕ್ಕಳಿಗೆ ಲಿಂಗಧಾರಣೆ ಮಾಡಿಸಿ. ರಾಜ್ಯದಲ್ಲಿ 20 ಸಾವಿರ ಬೇಡ ಜಂಗಮರು ಜಾತಿ ಸರ್ಟಿಫಿಕೇಟ್‍ಗಳನ್ನು ತೆಗೆದುಕೊಂಡಿದ್ದಾರೆ. ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ. ಗುರುಲಿಂಗ ಜಂಗಮರ ಬಗ್ಗೆ ಅಸಡ್ಡೆ ಬೇಡ. ಸಮಾಜವನ್ನು ಗಟ್ಟಿಗೊಳಿಸಿ ತೊಂದರೆಯಲ್ಲಿರುವವರನ್ನು ಕೈಹಿಡಿಯಿರಿ. ಶಾಸಕರು, ಸಂಸದರ ನಿಧಿಯನ್ನು ಬಳಸಿಕೊಂಡು ವಿದ್ಯಾರ್ಥಿನಿಲಯ ಕಟ್ಟಿಸಿ ಜಂಗಮ ಸಮಾಜದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಿ ಎಂದು ಮನವಿ ಮಾಡಿದರು.
ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ ಜಂಗಮ ಸಮಾಜ ಉನ್ನತ, ಉತ್ಕøಷ್ಟವಾಗಿದೆ. ಯುವಕರು ಜಂಗಮ ಸಮಾಜದ ಕರ್ತವ್ಯಗಳೇನು ಎನ್ನುವುದನ್ನು ತಿಳಿದುಕೊಳ್ಳಿ. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ. ಆಗ ಮಾತ್ರ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಲು ಸಾಧ್ಯ. ಅಲ್ಪಸಂಖ್ಯಾತರಾಗಿರುವ ಜಂಗಮರಲ್ಲಿಯೂ ಬಡವರಿದ್ದಾರೆ. ಬೇರೆ ಸಮಾಜದ ಜೊತೆ ನೆಮ್ಮದಿಯಿಂದ ಬದುಕಬೇಕು. ಬಡವರು, ಸಂಕಷ್ಟದಲ್ಲಿರುವವರ ನೋವಿಗೆ ಸ್ಪಂದಿಸಿ ಎಂದು ನುಡಿದರು.
ಬಾಳೆ ಹೊನ್ನೂರು ಖಾಸಾ ಶಾಖಾ ಮಠದ ಶ್ರೀಕ್ಷೇತ್ರ ಸಿದ್ದರಬೆಟ್ಟ ಕೊರಟಗೆರೆ ತಾಲ್ಲೂಕಿನ ಷ.ಬ್ರ. ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ಜಿಲ್ಲಾ ಜಂಗಮ ಸಮಾಜ ಸಂಸ್ಥೆಯ ಅಧ್ಯಕ್ಷ ಎಂ.ಟಿ.ಮಲ್ಲಿಕಾರ್ಜುನಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಕೆ.ಎಂ.ವೀರೇಶ್, ಜಿಲ್ಲಾ ಜಂಗಮ ಸಮಾಜದ ಖಜಾಂಚಿ ಕೆ.ಎಸ್.ಶಿವನಗೌಡ್ರು, ಕಾರ್ಯದರ್ಶಿ ಬಿ.ವಿಜಯಕುಮಾರ್
ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಕೆ.ಪ್ರಭುದೇವ್, ಮರುಳಾರಾಧ್ಯ ಇವರುಗಳು ವೇದಿಕೆಯಲ್ಲಿದ್ದರು.
ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ ಕಂಬಾಳಿಮಠ, ಹಿರಿಯೂರಿನ ಉಪ ನೊಂದಣಾಧಿಕಾರಿ ಪ್ರಭಾಕರ ಮಠದ ಹಾಗೂ ಜಿಲ್ಲೆಯ ಆರು ತಾಲ್ಲೂಕಿನ ಅಧ್ಯಕ್ಷರು ಮತ್ತು ಭದ್ರಾ ಮೇಲ್ದಂಡೆಗಾಗಿ ನಿರಂತರವಾಗಿ ಹೋರಾಟ ನಡೆಸಿದ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮಖ ಇವರುಗಳನ್ನು ಸನ್ಮಾನಿಸಲಾಯಿತು.












