ಬೆಂಗಳೂರು: ಸಿದ್ಧಾಪುರ ಮೂಲದ ಕಮಲಾಕರ್ ಭಟ್ ಜ್ಯೋತಿಷ್ಯ ಹೇಳುವ ಮೂಲಕ ಖ್ಯಾತಿ ಪಡೆದಿದ್ದರು. ಆದ್ರೆ ನಿನ್ನೆ ಅವರ ವಿಚಾರದಲ್ಲಿ ಸುದ್ದಿ ಆಗಿದ್ದೆ ಬೇರೆ. ಮದುವೆಯಾದ ಮಹಿಳೆ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡ ವಿಚಾರ ಹೊರಗೆ ಬಂದು, ಗಲಾಟೆಯಲ್ಲಿ ಒಂದು ಜೀವವೇ ಹೋಗಿದೆ. ಕಮಲಾಕರ್ ಭಟ್ ಸೇರಿದಂತೆ ಈ ಕೇಸಲ್ಲಿ ಏಳು ಜನ ಅರೆಸ್ಟ್ ಕೂಡ ಆಗಿದ್ದಾರೆ. ಆದರೆ ಇಂದು ಕಮಲಾಕರ್ ಭಟ್ ವಿಚಾರ ರಾಜಕೀಯ ಕೆಸರೆರಚಾಟಕ್ಕೆ ತಿರುಗಿದೆ. ಬಿ.ಕೆ.ಹರಿಪ್ರಸಾದ್ ಹಾಗೂ ಎಸ್.ಸುರೇಶ್ ಕುಮಾರ್ ನಡುವೆ ಪೋಸ್ಟ್ ವಾರ್ ಶುರುವಾಗಿದೆ.
ಇದೇ ಕಮಲಾಕರ್ ಭಟ್ 2019ರಲ್ಲಿ ಸುರೇಶ್ ಕುಮಾರ್ ಅವರನ್ನ ಭೇಟಿಯಾಗಿದ್ದರು. ಅಂದಿನ ಭೇಟಿಯ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಕಮಲಾಕರ ಭಟ್ ಎಂಬ ಜೋತಿಷಿ ಭಾಗಿಯಾದ ಕೊಲೆ ಕೇಸ್ ನಲ್ಲಿ ರಾಜಾಜಿನಗರ ಶಾಸಕ @nimmasuresh ಅವರಂತವರ ಪಾತ್ರವಿಲ್ಲವೇ? ಕೊಲೆ ಆರೋಪಿ ಜೋತಿಷಿ “ಗುರೂಜಿ” ಕಮಲಾಕರ ಭಟ್ಟನನ್ನು ಒರ್ವ ಶಾಸಕನಾಗಿ ಪ್ರೋತ್ಸಾಹಿಸಿ ಬೆಳೆಸಿದ್ದು ಸಂವಿಧಾನಕ್ಕೆ ಮಾಡುವ ಅಪಚಾರವಲ್ಲವೇ ? ಒರ್ವ ಮಾಜಿ ಕಾನೂನು ಸಚಿವನಿಗೆ ಇಷ್ಟೂ ಅರಿವಿಲ್ಲದಿರುವುದು ಈ ರಾಜ್ಯದ ದುರಂತವಾಗಿದೆ. ಕೊಲೆಗಡುಕ, ಮಹಿಳಾ ಪೀಡಕ ಕಮಲಾಕರ ಭಟ್ ತನ್ನಲ್ಲಿಗೆ ಜೋತಿಷ್ಯ ಕೇಳಲು ಬರುವ ಗ್ರಾಹಕರನ್ನು ಲೈಂಗಿಕವಾಗಿ ಶೋಷಿಸುತ್ತಿದ್ದ. ಅದರ ಭಾಗವಾಗಿಯೇ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿ ಅದು ಕೊಲೆಯವರೆಗೂ ಹೋಗಿದೆ. ಈ ರೀತಿ ಜನರ ಮೂಢನಂಬಿಕೆಯನ್ನೇ ಬಳಸಿಕೊಂಡು ಹಲವು ‘ಅಕ್ರಮ’ಗಳನ್ನು ಸಂಪಾದಿಸಿಕೊಂಡು ಇಂತಹ “ಜೀ-ಗುರೂಜಿ”ಗಳು ಸಮಾಜ ಸೇವೆಯ ಹೆಸರಿನಲ್ಲಿ ಸಮಾಜವನ್ನೇ ಯಾಮಾರಿಸುತ್ತಾರೆ. ಇಂತಹ ಮೂಢನಂಬಿಕೆಯ ‘ಅಕ್ರಮ ದಂಧೆ’ಗಳನ್ನು ಬಿಜೆಪಿಯ ಸ್ವಯಂ ಘೋಷಿತ ಸಜ್ಜನ ಶಾಸಕ ಬಿರುದಾಂಕಿತ ಬಿಜೆಪಿಯ ಸುರೇಶ್ ಕುಮಾರ್ ಬೆನ್ನುತ್ತಟ್ಟಿ ಪ್ರೋತ್ಸಾಹಿಸಿ ಬೆಳೆಸಿದ್ದಾರೆ. ಹಾಗಾಗಿ ಈ ಕೊಲೆಯಲ್ಲಿ ಸುರೇಶ್ ಕುಮಾರ್ ಅಂತವರ ಪಾತ್ರ ಬಹಳ ಮುಖ್ಯವಾಗುತ್ತದೆ ಎಂದು ಬಿಕೆ ಹರಿಪ್ರಸಾದ್ ಅವರು ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸುರೇಶ್ ಕುಮಾರ್ ಅವರು, ಈ ಫೋಟೋ ಬಗ್ಗೆ ತಮ್ಮ ಅಭಿಪ್ರಾಯ.? ಈ ಕೊಲೆ ಪ್ರಕರಣದಲ್ಲಿ ರಾಜ್ಯದ ಮುಖ್ಯಮಂತ್ರಿಯೂ ಭಾಗಿಯೇ? ಕೊಳೆತ ಮನಸ್ಸಿಗೆ ಕೊಳೆತ ವಿಚಾರಗಳೇ ಬರುವುದು ಅಲ್ಲವೇ ಹರಿಪ್ರಸಾದ್ ಎಂದು ಪ್ರಶ್ನೆ ಮಾಡಿದ್ದಾರೆ.










