ಬೆಂಗಳೂರು.ಆಗಸ್ಟ್.2 : ರಾಜಕೀಯಕ್ಕಿಂತ ರಾಜ್ಯದ ರೈತರ ಹಾಗೂ ಜನರ ಹಿತವೇ ಮುಖ್ಯ ಎಂದು ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕಾವೇರಿ ನೀರಿನ ವಿಚಾರವಾಗಿ ನಡೆದ ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಅವರು,ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ ವಿಚಾರದೊಂದಿಗೆ ನಾವೆಲ್ಲರೂ ಬೆಳೆದಿದ್ದೇವೆ. ರಾಜ್ಯದ ಹಿತಾಸಕ್ತಿ ವಿಚಾರ ಬಂದಾಗ ರಾಜಕೀಯವನ್ನು ಪಕ್ಕಕ್ಕಿಟ್ಟು, ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ರಾಜ್ಯದ ಪರ ನಿಂತಿರುವ ಹೆಮ್ಮೆಯ ಪರಂಪರೆ ನಮ್ಮ ರಾಜ್ಯಕ್ಕಿದೆ ಎಂದರು.

ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು ಎಂಬುದು ನಮ್ಮ ಸರ್ಕಾರದ ಸ್ಪಷ್ಟ ನಿಲುವಾಗಿದೆ. ಈ ವಿಚಾರದಲ್ಲಿ ತಾವೆಲ್ಲರೂ ಸಂಪೂರ್ಣ ಸಹಮತ ಹೊಂದಿದ್ದೀರಿ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ.

ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಹಾಗೂ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಸಭೆಗಳಿಗೂ ಮುನ್ನವೇ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ.ಆರ್. ಪಾಟೀಲ್, ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಹಾಗೂ ಶ್ರೀ ವಿ. ಸೋಮಣ್ಣ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಮತ್ತು ಶ್ರೀ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿ ರಾಜ್ಯದ ನಿಲುವನ್ನು ಮನವರಿಕೆ ಮಾಡಿಕೊಟ್ಟಿದ್ದೆ. ಪಕ್ಷಭೇದ ಮರೆತು ರಾಜ್ಯದ ಪರವಾಗಿ ಕೇಂದ್ರದ ಮಟ್ಟದಲ್ಲಿ ಧ್ವನಿಯೆತ್ತಿದ ಎಲ್ಲ ನಾಯಕರಿಗೂ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಕರ್ನಾಟಕದ ಸಂಸತ್ ಸದಸ್ಯರ ಸಭೆಯಲ್ಲಿ ಎಲ್ಲ ಪಕ್ಷಗಳ ಸಂಸದರು ರಾಜ್ಯದ ಹಿತಾಸಕ್ತಿಗಾಗಿ ಒಗ್ಗಟ್ಟಾಗಿ ನಿಲ್ಲುವ ಭರವಸೆ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.










