Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

“ಅಂಬಾರಿ ಹೊತ್ತ ಗಜರಾಜನಿಗೆ ಪೇಟದ ಗೌರವ: ನಿಶಾನೆಯಾಗಿ ಮರಳಿದ ಅಭಿಮನ್ಯು”

---Advertisement---

 

ಸುದ್ದಿಒನ್, ಅಕ್ಟೋಬರ್. 09 :
ಮೈಸೂರು ದಸರಾ ಎಂದರೆ ಕೇವಲ ಒಂದು ಉತ್ಸವವಲ್ಲ; ಅದು ಮೈಸೂರು ಅರಸರ ಪರಂಪರೆ, ನಾಡಿನ ಸಂಸ್ಕೃತಿ, ಭಕ್ತಿ, ವೈಭವ ಮತ್ತು ಜನಮನಗಳ ಭಾವನೆಗಳ ಸಂಗಮ. ಆ ವೈಭವಕ್ಕೆ ಹಲವು ದಶಕಗಳಿಂದ ಗಜಗಾಂಭೀರ್ಯ ತುಂಬುತ್ತಿರುವ ಆನೆಗಳ ಪೈಕಿ ಕ್ಯಾಪ್ಟನ್ ಅಭಿಮನ್ಯುವಿನ ಸ್ಥಾನ ಮಾತ್ರ ವಿಶಿಷ್ಟ.

ಚಿನ್ನದ ಅಂಬಾರಿಯನ್ನು ಹೊತ್ತು ಲಕ್ಷಾಂತರ ಜನರ ಕಣ್ಮಣಿಯಾಗಿದ್ದ ಅಭಿಮನ್ಯು, ಈಗ ಅಂಬಾರಿಯಿಂದ ಹಿಂದೆ ಸರಿದು ‘ನಿಶಾನೆ ಆನೆ’ಯಾಗಿ ಜಂಬೂಸವಾರಿಯ ಮುನ್ನಡೆಯ ಜವಾಬ್ದಾರಿ ವಹಿಸುತ್ತಿದ್ದಾನೆ. ಇದು ಕೇವಲ ಪಾತ್ರ ಬದಲಾವಣೆಯಲ್ಲ; ಒಂದು ಯುಗದ ಗೌರವಯುತ ಅಂತ್ಯದ ಸಂಕೇತ.

ಕಾಡಿನ ಕಂದಕದಿಂದ ದಸರೆಯ ಅಂಬಾರಿವರೆಗೆ
ಅಭಿಮನ್ಯುವಿನ ಪಯಣವೇ ರೋಚಕ.1977ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಕಾಡಾನೆಯಾಗಿದ್ದ ಅಭಿಮನ್ಯುವನ್ನು ಅರಣ್ಯ ಇಲಾಖೆ ‘ಕಪ್ಪು’ಎಂದು ಕರೆಯಲಾಗುವ ಕಂದಕ ತೋಡಿ ಆನೆಯನ್ನು ಸೆರೆಹಿಡಿಯುವ ವಿಧಾನದಲ್ಲಿ ಸೆರೆಹಿಡಿಯಲಾಯಿತು. ಒಂದು ಕಾಲದಲ್ಲಿ ಕಾಡಿನಲ್ಲಿ ಅಲೆದಾಡುತ್ತಿದ್ದ ಈ ಪುಂಡಾನೆ ಮುಂದೆ ಕರ್ನಾಟಕದ ಅರಣ್ಯ ಇಲಾಖೆಯ ಅತ್ಯಂತ ನಂಬಿಕಸ್ಥ ಕುಮ್ಕಿ ಆನೆಗಳಲ್ಲಿ ಒಂದಾಗಿ ಬೆಳೆದದ್ದು ಇತಿಹಾಸ.
ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆಗಳಿಂದ ಹಿಡಿದು ಅವುಗಳನ್ನು ನಿಯಂತ್ರಿಸುವ ಕಾರ್ಯದವರೆಗೆ ಅಭಿಮನ್ಯು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ. ವರದಿಗಳ ಪ್ರಕಾರ, ಆತ ನೂರಾರು ಕಾಡಾನೆಗಳ ಸೆರೆ ಕಾರ್ಯಾಚರಣೆಗಳಲ್ಲಿಯೂ, ಹುಲಿ ಸೆರೆ ಕಾರ್ಯಾಚರಣೆಗಳಲ್ಲಿಯೂ ಪಾಲ್ಗೊಂಡಿದ್ದಾನೆ.

 

ಕಾಡಿನಲ್ಲಿ ಕಾರ್ಯಾಚರಣೆಯ ವೀರ…
ದಸರೆಯ ಅಂಗಳದಲ್ಲಿ ಶಾಂತ ಸ್ವಭಾವದ ರಾಜಗಾಂಭೀರ್ಯ…
ಇದೇ ಅಭಿಮನ್ಯುವಿನ ವಿಶೇಷತೆ ,ದಸರೆಯೊಂದಿಗೆ ಬೆಸೆದ ಕಾಲು ಶತಮಾನದ ನಂಟು ಅಭಿಮನ್ಯುವಿನ ಮೈಸೂರು ದಸರೆಯ ನಂಟು ಒಂದೆರಡು ವರ್ಷಗಳದ್ದಲ್ಲ.ಸುಮಾರು 25 ವರ್ಷಗಳಿಗೂ ಅಧಿಕ ಕಾಲ ಆತ ದಸರೆಯ ಗಜಪಡೆಯ ಭಾಗವಾಗಿದ್ದಾನೆ. ಆರಂಭದಲ್ಲಿ ದಸರೆಯಲ್ಲಿ ಆನೆಗಾಡಿ ಎಳೆಯುವ ಜವಾಬ್ದಾರಿ ನಿರ್ವಹಿಸಿದ್ದ ಅಭಿಮನ್ಯು, ನಂತರ ನೌಪತ್ ಆನೆಯಾಗಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ.ಮುಂದೆ ಬಂದದ್ದು ಅವನ ಬದುಕಿನ ಅತ್ಯಂತ ಮಹತ್ವದ ಅಧ್ಯಾಯ.
2020ರಿಂದ 2025ರವರೆಗೆ — ಚಿನ್ನದ ಅಂಬಾರಿಯ ಸಾರಥಿ
2020ರಿಂದ 2025ರವರೆಗೆ ಸತತ ಆರು ವರ್ಷಗಳ ಕಾಲ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಜಂಬೂಸವಾರಿಯ ಮುಂಚೂಣಿಯಲ್ಲಿ ಅಭಿಮನ್ಯು ಹೆಜ್ಜೆ ಹಾಕಿದ.ಅಂಬಾರಿಯ ಮೇಲೆ ನಾಡದೇವತೆ ಚಾಮುಂಡೇಶ್ವರಿಯ ವಿಗ್ರಹ, ಕೆಳಗೆ ಸಾವಿರಾರು ಜನರ ಜಯಘೋಷ, ಸುತ್ತಲೂ ಪೊಲೀಸ್ ಮತ್ತು ಅರಣ್ಯ ಸಿಬ್ಬಂದಿಯ ಭದ್ರತೆ.ಆದರೆ ಅಭಿಮನ್ಯುವಿನ ಹೆಜ್ಜೆಯಲ್ಲಿ ಮಾತ್ರ ಅದೇ ಶಾಂತ ಗಾಂಭೀರ್ಯ.
ಪ್ರತಿ ಹೆಜ್ಜೆಯೂ ಒಂದು ಇತಿಹಾಸ.
ಪ್ರತಿ ನಡಿಗೆಯೂ ಒಂದು ನೆನಪು.
ಪ್ರತಿ ಜಂಬೂಸವಾರಿಯೂ ಅವನ ಸೇವೆಗೆ ಒಂದು ಗೌರವಪತ್ರ.

 

60ರ ಹರೆಯದಲ್ಲಿ ಅಂಬಾರಿಗೆ ವಿದಾಯ
2026ರಲ್ಲಿ ಅಭಿಮನ್ಯುವಿಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯಿಂದ ಅವನನ್ನು ನಿವೃತ್ತಿಗೊಳಿಸಲು ನಿರ್ಧರಿಸಿತು. ಆರಂಭದಲ್ಲಿ ಈ ವರ್ಷದ ದಸರೆಯಲ್ಲಿ ಅಭಿಮನ್ಯು ಇರುವುದಿಲ್ಲ ಎಂಬ ಸುದ್ದಿ ಅಭಿಮಾನಿಗಳಿಗೆ ತೀವ್ರ ಬೇಸರ ತಂದಿತ್ತು.ಆದರೆ ಮೈಸೂರಿಗರ ಮನಸ್ಸು ಅದನ್ನು ಒಪ್ಪಲಿಲ್ಲ.“ಅಭಿಮನ್ಯುವಿಗೆ ಗೌರವಯುತ ಬೀಳ್ಕೊಡುಗೆ ಸಿಗಬೇಕು. ಅವನ ಕೊನೆಯ ದಸರೆಯನ್ನು ಅವನದೇ ದಸರೆಯಾಗಿ ನೋಡಬೇಕು.”ಎಂಬುದು ಅಭಿಮಾನಿಗಳ ಒಕ್ಕೊರಲಿನ ಭಾವನೆಯಾಯಿತು.ಜನರ ಪ್ರೀತಿ, ಅಭಿಮಾನಿಗಳ ಒತ್ತಾಯ ಮತ್ತು ಅಭಿಮನ್ಯುವಿನ ದೀರ್ಘಕಾಲದ ಸೇವೆಯನ್ನು ಪರಿಗಣಿಸಿ, 2026ರ ದಸರೆಯಲ್ಲಿ ಅವನಿಗೆ ವಿಶೇಷ ಸ್ಥಾನ ನೀಡಲಾಯಿತು.
ಅಂಬಾರಿಯಿಂದ ನಿಶಾನೆಯತ್ತ…

ಅಭಿಮನ್ಯುವನ್ನು ಈ ಬಾರಿ ‘ನಿಶಾನೆ ಆನೆ’ಯಾಗಿ ಆಯ್ಕೆ ಮಾಡಲಾಯಿತು.ನಿಶಾನೆ ಆನೆ ಎಂದರೆ ಜಂಬೂಸವಾರಿಯ ಮುನ್ನಡೆಗೆ ದಾರಿ ತೋರಿಸುವ, ಮೆರವಣಿಗೆಯ ಆರಂಭದ ಸಂಕೇತವಾಗುವ ಪ್ರಮುಖ ಆನೆ. ಅಂದರೆ, ಈ ಬಾರಿ ಅಭಿಮನ್ಯುವಿನ ಹೆಗಲ ಮೇಲೆ ಚಿನ್ನದ ಅಂಬಾರಿ ಇಲ್ಲದಿದ್ದರೂ, ಮೆರವಣಿಗೆಯ ಮುನ್ನಡೆಯ ಗೌರವ ಅವನದೇ.ಅಂಬಾರಿಯ ಜವಾಬ್ದಾರಿ ಬೇರೆ ಆನೆಗೆ ಹೋದರೂ…ಜಂಬೂಸವಾರಿಯ ಆರಂಭಕ್ಕೆ ಗೌರವದ ಸ್ಪರ್ಶ ನೀಡುವ ಹಿರಿಯಣ್ಣನ ಸ್ಥಾನ ಮಾತ್ರ ಅಭಿಮನ್ಯುವಿನದೇ.ಇದು ಅವನಿಗೆ ನೀಡಿದ ಸಾಮಾನ್ಯ ಕರ್ತವ್ಯವಲ್ಲ; ಅವನ ದೀರ್ಘ ಸೇವೆಗೆ ಸಲ್ಲಿಸಿದ ಗೌರವಪೂರ್ವಕ ಬೀಳ್ಕೊಡುಗೆ.

ಮೈಸೂರು ಅರಮನೆಗೆ ರಾಜಮರ್ಯಾದೆಯ ಸ್ವಾಗತ…

ಮೈಸೂರು ಪೇಟ ಮಾದರಿಯ ಪೇಟ ತೊಡಿಸಿ ಗಜರಾಜ ಅಭಿಮನ್ಯುವಿಗೆ ರಾಜಗೌರವ

ಅಕ್ಟೋಬರ್ 5ರಂದು ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ವಿಶೇಷ ಪೂಜೆ ಸಲ್ಲಿಸಿ ಅರಮನೆ ಮಂಡಳಿ ಸಾಂಪ್ರದಾಯಿಕವಾಗಿ ಪೂರ್ಣ ಕುಂಭದೊಂದಿಗೆ ಸ್ವಾಗತಿಸಿತು. ಈ ಸಂದರ್ಭದಲ್ಲಿ ಗಂಧದಗುಡಿ ಫೌಂಡೇಶನ್ ಮತ್ತು ಅಭಿಮನ್ಯು ಅಭಿಮಾನಿಗಳ ವತಿಯಿಂದ ಬೃಹತ್ ಮೋಸಂಬಿ ಹಾರ ಅದರ ಜೊತೆಗೆ ಸುಮಾರು 8 ಕೆ.ಜಿ. ತೂಕದ ಭವ್ಯ ಪೇಟವನ್ನು ಸಮರ್ಪಿಸಿ ಗೌರವಿಸಲಾಯಿತು. ಈ ಪೇಟ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪೇಟದ ಮಾದರಿಯಲ್ಲಿ ಸಿದ್ಧಪಡಿಸಲಾಗಿದೆ. ಅಭಿಮನ್ಯುವಿಗೆ ರಾಜಮರ್ಯಾದೆಯ ಗೌರವ.ಅರಮನೆ ಮಂಡಳಿಯೂ ಫಲತಾಂಬೂಲ ನೀಡಿ ಗಜರಾಜನನ್ನು ಆತ್ಮೀಯವಾಗಿ ಸ್ವಾಗತಿಸಿತು.
ಪೇಟ ತೊಟ್ಟು, ಮಂಗಳವಾದ್ಯಗಳ ನಡುವೆ, ಗಜಗಾಂಭೀರ್ಯದಿಂದ ಅಭಿಮನ್ಯು ಅರಮನೆಯತ್ತ ಹೆಜ್ಜೆ ಹಾಕಿದ ಕ್ಷಣ…ಅದು ಕೇವಲ ಒಂದು ಆನೆಯ ಪ್ರವೇಶವಾಗಿರಲಿಲ್ಲ; ದಸರೆಯ ಒಂದು ಯುಗವೇ ಅರಮನೆಗೆ ಮರಳಿದಂತಿತ್ತು.ಗಂಧದಗುಡಿ ಫೌಂಡೇಶನ್ — ಅಭಿಮನ್ಯುವಿನ ಗೌರವಕ್ಕೆ ಕೈಜೋಡಿಸಿದ ಸಂಸ್ಥೆ.ಅಭಿಮನ್ಯುವಿನ ಮೇಲಿನ ಜನರ ಪ್ರೀತಿಯನ್ನು ಗೌರವದ ರೂಪಕ್ಕೆ ತರುವಲ್ಲಿ ಗಂಧದಗುಡಿ ಫೌಂಡೇಶನ್ ಆರ್ಯನ್ ಕೂಡ ಪ್ರಮುಖ ಪಾತ್ರವಹಿಸಿದ್ದಾರೆ .ಅಭಿಮನ್ಯುವಿನ ಅರಮನೆ ಪ್ರವೇಶದ ಸಂದರ್ಭದಲ್ಲಿ ಗಂಧದಗುಡಿ ಫೌಂಡೇಶನ್ ಹಾಗೂ ಅಭಿಮನ್ಯುವಿನ ಅಭಿಮಾನಿಗಳು ಸೇರಿ ಬೃಹತ್ ಹಾರ ಮತ್ತು ಬೆಂಗಳೂರಿನ ಚೇತನ್ ಅವರ ಸಹಯೋಗದೊಂದಿಗೆ ವಿಶೇಷ ಪೇಟವನ್ನು ಸಮರ್ಪಿಸಿರುವುದು, ಆನೆಯ ಮೇಲಿನ ಅಭಿಮಾನ ಕೇವಲ ಪ್ರೇಕ್ಷಕರ ಭಾವನೆಯಲ್ಲ; ಅದನ್ನು ಗೌರವದ ಆಚರಣೆಯಾಗಿ ರೂಪಿಸುವ ಪ್ರಯತ್ನವೂ ಹೌದು.

ಅಭಿಮನ್ಯು ಮತ್ತು ಮಾವುತ ವಸಂತಣ್ಣ— ಮಾತುಗಳಾಚೆಯ ಬಂಧ
ಒಬ್ಬ ಗಜರಾಜನ ಯಶಸ್ಸಿನ ಹಿಂದೆ ಅವನನ್ನು ಅರ್ಥಮಾಡಿಕೊಳ್ಳುವ ಒಬ್ಬ ಮನುಷ್ಯನ ಕೈ ಇರುತ್ತದೆ.ಅಭಿಮನ್ಯುವಿನ ಜೀವನದಲ್ಲಿನ ಅಂತಹ ವ್ಯಕ್ತಿ ಮಾವುತ ವಸಂತಣ್ಣ.
ವಸಂತ ಮತ್ತು ಅಭಿಮನ್ಯುವಿನ ಸಂಬಂಧ ಕೇವಲ ಮಾವುತ–ಆನೆಯ ಸಂಬಂಧವಲ್ಲ. ಅದು ವರ್ಷಗಳ ಒಡನಾಟ, ನಂಬಿಕೆ, ಸಂಕೇತಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಪರಸ್ಪರ ಅವಲಂಬನೆಯ ಬಂಧ.
ವನ್ಯಜೀವಿ ವಿಭಾಗದ ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಕೂಡ ಅಭಿಮನ್ಯು ಮತ್ತು ವಸಂತನ ನಡುವಿನ ಅವಿನಾಭಾವ ಸಂಬಂಧವೇ ಅವರ ಕಾರ್ಯದ ಯಶಸ್ಸಿನ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವಸಂತ ಅವರನ್ನು ಸನ್ಮಾನಿಸಲಾಯಿತು.
ಒಬ್ಬನು ಮಾತಿನಲ್ಲಿ ಹೇಳುತ್ತಾನೆ; ಮತ್ತೊಬ್ಬನು ಮೌನದಲ್ಲಿ ಅರ್ಥಮಾಡಿಕೊಳ್ಳುತ್ತಾನೆ.ಇದೇ ಅಭಿಮನ್ಯು–ವಸಂತಣ್ಣ ಬಂಧದ ಸೌಂದರ್ಯ.

“ಅಂಬಾರಿ ವೀರನಗೆ ಅಕ್ಷರಗಳ ಗೌರವ”
ಅಭಿಮನ್ಯುವಿನ ಸೇವೆಯನ್ನು ಕೇವಲ ಚಿತ್ರಗಳಲ್ಲಿ ಅಥವಾ ನೆನಪುಗಳಲ್ಲಿ ಉಳಿಸದೆ, ಸಾಹಿತ್ಯದ ಮೂಲಕ ದಾಖಲಿಸುವ ಅಪರೂಪದ ಪ್ರಯತ್ನವೂ ನಡೆದಿದೆ.
ಹಿರಿಯ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರು ಅಭಿಮನ್ಯುವಿನ ಕುರಿತು ಎರಡು ವಿಭಿನ್ನ ಕೃತಿಗಳನ್ನು ರಚಿಸಿದ್ದಾರೆ. “ಮೌನದ ಮಹಾ ಪಯಣ” ಮತ್ತು “ಅಭಿಮನ್ಯುವಿಗೆ ಕಾವ್ಯಾರತಿ ”
ಅಭಿಮನ್ಯುವಿನ ಜೀವನಕ್ಕೆ ಅಕ್ಷರಗಳ ಮೂಲಕ ಗೌರವ ಸಲ್ಲಿಸಿರುವ ಈ ಎರಡು ಕೃತಿಗಳು, ಒಂದು ಆನೆಯ ಬದುಕು ಮನುಷ್ಯರ ಹೃದಯವನ್ನು ಎಷ್ಟು ಆಳವಾಗಿ ಸ್ಪರ್ಶಿಸಬಲ್ಲದು ಎಂಬುದಕ್ಕೆ ಸಾಕ್ಷಿ.

ಒಂದು ಆನೆ… ಹಲವು ಮುಖಗಳು
ಅಭಿಮನ್ಯುವನ್ನು ಕೇವಲ ‘ಅಂಬಾರಿ ಆನೆ’ ಎಂದು ಕರೆಯುವುದು ಅವನ ಬದುಕನ್ನು ಸಣ್ಣದಾಗಿಸುವುದು.
ಅವನು—
ಕಾಡಿನ ಕಂದಕದಿಂದ ಹೊರಬಂದ ಕುಮ್ಕಿ.
ಕಾಡಾನೆ ಕಾರ್ಯಾಚರಣೆಗಳ ನಂಬಿಕೆಯ ಸಂಗಾತಿ.
ದಸರೆಯ ಆನೆಗಾಡಿ ಎಳೆದ ಕಾರ್ಮಿಕ.
ನೌಪತ್ ಆನೆಯಾಗಿ ನಡೆದ ಗಜರಾಜ.
ಆರು ವರ್ಷ ಚಿನ್ನದ ಅಂಬಾರಿ ಹೊತ್ತ ಕ್ಯಾಪ್ಟನ್.
ವಸಂತನ ವಿಶ್ವಾಸದ ಸಂಗಾತಿ.
ಮತ್ತು ಈಗ… ನಿಶಾನೆಯ ಮುನ್ನಡೆಗಾರ.
ಈ ಎಲ್ಲ ಪಾತ್ರಗಳ ನಡುವೆ ಅವನ ವ್ಯಕ್ತಿತ್ವ ಒಂದೇ — ಕರ್ತವ್ಯನಿಷ್ಠೆ.
ಅಭಿಮನ್ಯು ಏಕೆ ಇಷ್ಟು ವಿಶೇಷ?
ಕಾಡಿನಲ್ಲಿ ಕಠಿಣ ಕಾರ್ಯಾಚರಣೆಗಳಿಗೆ ಸಿದ್ಧನಾಗುವ ಆನೆ, ದಸರೆಯ ಲಕ್ಷಾಂತರ ಜನರ ನಡುವೆ ಇಷ್ಟು ಶಾಂತವಾಗಿ ಸಾಗುವುದು ಸುಲಭದ ವಿಷಯವಲ್ಲ.ಅಭಿಮನ್ಯುವಿನ ಬೃಹತ್ ದೇಹದ ಹಿಂದೆ ಅಪಾರ ತರಬೇತಿ ಇದೆ. ಅದರ ಹಿಂದೆ ಅರಣ್ಯ ಇಲಾಖೆಯ ವರ್ಷಗಳ ಪರಿಶ್ರಮವಿದೆ. ಅದರ ಹಿಂದೆ ಮಾವುತ ವಸಂತನಂತಹವರ ನಿರಂತರ ಆರೈಕೆ ಇದೆ.
ಅದಕ್ಕಿಂತ ಮುಖ್ಯವಾಗಿ, ಜನರ ಪ್ರೀತಿ ಇದೆ.ಅದಕ್ಕಾಗಿಯೇ ಅವನು ಮೈಸೂರು ದಸರೆಯ ಆನೆಯಷ್ಟೇ ಅಲ್ಲ.ಅವನು ಮೈಸೂರಿನ ಭಾವನೆ.
ಕೊನೆಯ ಜಂಬೂಸವಾರಿ… ಆದರೆ ಕೊನೆಯ ನೆನಪಲ್ಲ
2026ರ ದಸರೆಯಲ್ಲಿ ಅಭಿಮನ್ಯು ಮತ್ತೊಮ್ಮೆ ಜಂಬೂಸವಾರಿಯ ಭಾಗವಾಗುತ್ತಿರುವುದು ಅಭಿಮಾನಿಗಳಿಗೆ ಸಂತಸದ ಜೊತೆಗೆ ಭಾವನಾತ್ಮಕ ಕ್ಷಣವೂ ಹೌದು.ಈ ಬಾರಿ ಅವನ ಹೆಗಲ ಮೇಲೆ 750 ಕೆ.ಜಿ. ಚಿನ್ನದ ಅಂಬಾರಿ ಇಲ್ಲ.ಆದರೆ ಅವನ ಮುಂದೆ ನಿಶಾನೆ ಇದೆ.ಅವನ ಹಿಂದೆ ದಸರೆಯ ಗಜಪಡೆ ಇದೆ.ಎರಡೂ ಬದಿಗಳಲ್ಲಿ ಮೈಸೂರಿಗರ ಪ್ರೀತಿ ಇದೆ ಮತ್ತು ಅವನ ಹೆಜ್ಜೆಗಳನ್ನು ಕಣ್ತುಂಬಿಕೊಳ್ಳಲು ಕಾಯುತ್ತಿರುವ ಲಕ್ಷಾಂತರ ಕಣ್ಣುಗಳಿವೆ.

ಕಾಡಿನ ಕಂದಕದಿಂದ ಆರಂಭವಾದ ಪಯಣ ಚಿನ್ನದ ಅಂಬಾರಿಯನ್ನು ದಾಟಿ ಈಗ ನಿಶಾನೆಯ ಗೌರವದತ್ತ ಬಂದಿದೆ.ಅಭಿಮನ್ಯುವಿನ ದೇಹಕ್ಕೆ ವಯಸ್ಸಾಗಿರಬಹುದು.
ಆದರೆ ಅವನ ಹೆಜ್ಜೆಗಳಲ್ಲಿ ಮೂಡಿದ ದಸರೆಯ ನೆನಪುಗಳಿಗೆ ವಯಸ್ಸಿಲ್ಲ.ಅಂಬಾರಿ ಬದಲಾಗಿದೆ…ಜವಾಬ್ದಾರಿ ಬದಲಾಗಿದೆ…ಆದರೆ ಅಭಿಮನ್ಯುವಿನ ಮೇಲಿನ ಅಭಿಮಾನಿಗಳ ಪ್ರೀತಿ ಮಾತ್ರ ಬದಲಾಗಿಲ್ಲ.
ಅದಕ್ಕಾಗಿಯೇ…

ಕ್ಯಾಪ್ಟನ್ ಅಭಿಮನ್ಯು ಕೇವಲ ಮೈಸೂರು ದಸರೆಯ ಗಜರಾಜನಲ್ಲ;
ಅವನು ನಾಡಹಬ್ಬ ಮೈಸೂರು ದಸರೆಯ ಒಂದು ಭಾವನೆ.”

ಲೇಖನ 📝
-ಎಸ್. ಜಿ. ಮಂಜು ಯಾದವ್
ಹವ್ಯಾಸಿ ಬರಹಗಾರ ಮತ್ತು ಅಂಕಣಕಾರ.
ಕನ್ನಡ ಮತ್ತು ಹಿಂದಿ ಭಾಷಾ ಸಂಪನ್ಮೂಲ ವ್ಯಕ್ತಿ ಮತ್ತು ಭಾಷಾ ಬೋಧಕರು. ಚಿತ್ರದುರ್ಗ.
ಮೊ : 9741738979

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now