ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. ಡಿ. 17 : ತಾಲ್ಲೂಕಿನ ಹಿರೇಗುಂಟನೂರು ಹೋಬಳಿಯ ಭೀಮಸಮುದ್ರ ಮಜುರೆ ಬಸವಾಪುರದ ಶ್ರೀ ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ಕಡೇ ಕಾರ್ತಿಕ ಮಹೋತ್ಸವ ಹಾಗೂ ಮಹೇಶ್ವರಸ್ವಾಮಿ ಜಾತ್ರೆಯನ್ನು ಡಿ.16ರ ಮಂಗಳವಾರ ನಡೆಸಲಾಯಿತು.
ಬೆಳಿಗ್ಗೆ ಮಹೇಶ್ವರಸ್ವಾಮಿ ಜಾತ್ರೆಯನ್ನು ಹಮ್ಮಿಕೊಂಡು ಮಂಗಳವಾರ ಮುಂಜಾನೆ ಈ ಅದ್ಧೂರಿ ಜಾತ್ರೆಯಲ್ಲಿ ಆಬಾಲವೃದ್ಧರಾದಿಯಾಗಿ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಮಾಗಿಯ ಚಳಿಯನ್ನೂ ಲೆಕ್ಕಿಸದೇ ಶೈಕ್ಷಣಿಕ ಪ್ರಗತಿ, ಮದುವೆ, ಆರೋಗ್ಯ ಸಮಸ್ಯೆ ನಿವಾರಣೆ ಮತ್ತಿತರೆ ಹರಕೆ ಹೊತ್ತು, ಓಂ ನಮಃ ಶಿವಾಯ ಎಂಬ ಉದ್ಧಾರದೊಂದಿಗೆ ಭಕ್ತಿ ಮೆರೆದರು. ಮಹೇಶ್ವರ ಜಾತ್ರೆಗೆ ಶತಮಾನಕ್ಕೂ ಹೆಚ್ಚು ಕಾಲದ ಇತಿಹಾಸವಿದೆ. ನಂತರ ಗಂಗಾಪೂಜೆ ನಡೆಸಿ ಪ್ರಸಾದ ವಿನಿಯೋಗ ಜರುಗಿತು. ಜಾತ್ರೆಯಲ್ಲಿ ತಯಾರಿಸುವ ಸಾತ್ವಿಕ ಆಹಾರವಾದ ಅನ್ನ, ಬೆಲ್ಲ, ಹಾಲು, ಬಾಳೆಹಣ್ಣಿನ ಪ್ರಸಾದವನ್ನು ಸಾವಿರಾರು ಭಕ್ತಾದಿಗಳು ಸ್ವೀಕರಿಸಿದರು.
ಸಂಜೆ ನಡೆದ ಶ್ರೀ ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ಕಡೇ ಕಾರ್ತಿಕ ಮಹೋತ್ಸವ ದೇವಾಲಯವನ್ನು ತಳಿರು ತೋರಣ, ವಿದ್ಯುತ್ ದೀಪಾಲಂಕಾರ, ಕೇಸರಿ ಬಣ್ಣದ ಭಂಟಿಂಗ್ಸ್, ಸ್ವಾಗತ ಕಮಾನುಗಳು, ದೇವಸ್ಥಾನದ ಹೊರಗೆ ಹೂವಿನಲಂಕಾರದ ಆಕರ್ಷಣೆಯಾಗಿತ್ತು. ಈ ಸಮಯದಲ್ಲಿ ದೇವಾಲಯದ ಸುತ್ತಾ ದೀಪಗಳನ್ನು ಹಚ್ಚುವುದರ ಮೂಲಕ ವಿಜೃಂಭಣೆಯಿಂದ ಸ್ವಾಮಿಯ ಕಡೇ ಕಾರ್ತಿಕವನ್ನು ಆಚರಣೆ ಮಾಡಲಾಯಿತು. ವಿವಿಧೆಡೆಗಳಿಂದ ಆಗಮಿಸಿದ್ದ ನೂರಾರು ಭಕ್ತರು ಸ್ವಾಮಿಯ ದರ್ಶನ ಪಡೆದರು.


