ಬೆಂಗಳೂರು: 1 ರಿಂದ 5 ನೇ ತರಗತಿ ಪ್ರಾರಂಭಿಸುವ ವಿಚಾರವಾಗಿ, ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ನಡೆಸುತ್ತೇನೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 21 ರಿಂದ ಬಿಸಿಯೂಟ ಪ್ರಾರಂಭ ಮಾಡ್ತೀವಿ. ಹೀಗಾಗಿ ಶಾಲೆ ಪ್ರಾರಂಭಿಸಲು ನಮಗೆ ಧೈರ್ಯ ಬಂದಿದೆ. ಮುಖ್ಯಮಂತ್ರಿ ಜೊತೆ ತಾಂತ್ರಿಕ ಸಲಹಾ ಸಮಿತಿ ಸಭೆ ಇದೆ. ಸಭೆಯಲ್ಲಿ ಶಾಲೆ ಪ್ರಾರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.
ನಾವು ಶಾಲೆ ಪ್ರಾರಂಭಿಸಲು ತಯಾರಿ ಪೂರ್ಣಗೊಳಿಸಿದ್ದೇವೆ. ಸಿಎಂ ನಿರ್ಧಾರಕ್ಕೆ ಕಾಯುತ್ತಿದ್ದೇವೆ ಎಂದರು. ಇನ್ನೂ ಶಾಲಾ ಶುಲ್ಕದ ವಿಚಾರವಾಗಿ, ಶುಲ್ಕ ನಿಯಂತ್ರಣ ಸಮಿತಿ ಮಾಡುವಂತೆ ಪೋಷಕರು ಮನವಿ ಮಾಡಿದ್ದಾರೆ. ತೆಲಂಗಾಣ ಹಾಗೂ ಬೇರೆ ರಾಜ್ಯಗಳಲ್ಲಿ ಶುಲ್ಕ ನಿಯಂತ್ರಣ ಸಮಿತಿ ಇದೆ. ಅದನ್ನ ನಮ್ಮ ರಾಜ್ಯದಲ್ಲೂ ತರುವಂತೆ ಪೋಷಕರು ಒತ್ತಡ ಹಾಕುತ್ತಿದ್ದಾರೆ.
ಈ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಅಲ್ಲದೆ ಬೇರೆ ರಾಜ್ಯಗಳಲ್ಲಿ ಯಾವ ಮಾದರಿಯಲ್ಲಿ ಶುಲ್ಕ ಇದೆ ಅನ್ನೋ ಮಾಹಿತಿ ತೆಗೆದುಕೊಳ್ಳಲು ಹೇಳಿದ್ದೇನೆ. ವರದಿ ನೋಡಿ ನಮ್ಮ ರಾಜ್ಯದಲ್ಲೂ ಶುಲ್ಕ ನಿಯಂತ್ರಣ ಸಮಿತಿ ರಚನೆ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ನಾಗೇಶ್ ಹೇಳಿದರು.