ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 12 : ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸುಪ್ರೀಂಕೋರ್ಟ್ ಟಿಇಟಿ. ಪರೀಕ್ಷೆ ಕಡ್ಡಾಯಗೊಳಿಸಿರುವುದನ್ನು ಸಂಸತ್‍ನಲ್ಲಿ ತಿದ್ದುಪಡಿಗೊಳಿಸಿ ಟಿಇಟಿ ಪರೀಕ್ಷೆಯನ್ನು ರದ್ದುಪಡಿಸಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನ್ಯಾಯ ದೊರಕಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಶಾಖೆಯಿಂದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸಂಸದ ಗೋವಿಂದ ಎಂ.ಕಾರಜೋಳರವರಿಗೆ ಮನವಿ ಸಲ್ಲಿಸಲಾಯಿತು.
ಉನ್ನತ ಶಿಕ್ಷಣ ಪಡೆದು ಇಷ್ಟು ವರ್ಷಗಳಿಂದಲೂ ಮಕ್ಕಳಿಗೆ ಪಾಠ ಮಾಡಿಕೊಂಡು ಬರುತ್ತಿದ್ದೇವೆ. ಈಗ ಏಕಾಏಕಿ ಎಲ್ಲಾ ಶಿಕ್ಷಕರು ಕಾಲಮಿತಿಯೊಳಗೆ ಟಿಇಟಿ. ಪರೀಕ್ಷೆ ಕಡ್ಡಾಯವಾಗಿ ಪಾಸ್ ಮಾಡಿಕೊಳ್ಳಬೇಕೆಂದು ಸುಪ್ರೀಂಕೋರ್ಟ್ ಹೇಳಿರುವುದು ನುರಿತ ಅನುಭವಿ ಶಿಕ್ಷಕರಿಗೆ ಆಘಾತವನ್ನುಂಟು ಮಾಡಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ನೀಡಿದ ಮನವಿ ಸ್ವೀಕರಿಸಿದ ಸಂಸದ ಗೋವಿಂದ ಎಂ.ಕಾರಜೋಳರವರು ಸಂಸತ್‍ನಲ್ಲಿ ನಿಮ್ಮ ಸಮಸ್ಯೆ ಬಗ್ಗೆ ಧ್ವನಿ ಎತ್ತಿ ನ್ಯಾಯ ದೊರಕಿಸುವ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಮಾರುತೇಶ್ ಆರ್, ಜಿಲ್ಲಾಧ್ಯಕ್ಷ ಜಿ.ಬಿ.ಮಹಾಂತೇಶ್, ಪ್ರಧಾನ ಕಾರ್ಯದರ್ಶಿ ಜಿ.ಟಿ.ಹನುಮಂತಪ್ಪ ಜಿಲ್ಲೆಯ ಆರು ತಾಲ್ಲೂಕಿನ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಶಿಕ್ಷಕರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.




