ಒರಟ ಶ್ರೀ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಶಬರಿ’ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತ್ತು. ಇದರ ಬೆನ್ನಲ್ಲೇ ಚಿತ್ರತಂಡ ತನ್ನ ಬಹುನಿರೀಕ್ಷಿತ “ತಂದಾನಿ ತಾನೋ” ವೀಡಿಯೋ ಹಾಡನ್ನು ಅನಾವರಣಗೊಳಿಸಿದೆ. ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್, ರಘು ರಾಮ್, ಬಾಲಾಜಿ ವೀರಾಸ್ವಾಮಿ ಹಾಗೂ ಉದ್ಯಮಿ ವಿ. ಬಾಬು ಅವರು ಈ ವಿಶೇಷ ಹಾಡನ್ನು ಬಿಡುಗಡೆ ಮಾಡಿ, ಯುವ ತಂಡದ ಪ್ರಯತ್ನಕ್ಕೆ ಶುಭ ಹಾರೈಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಓಂಪ್ರಕಾಶ್ ರಾವ್ ಮತ್ತು ಬಾಲಾಜಿ ವೀರಾಸ್ವಾಮಿ, ಈ ವೀಡಿಯೋ ಹಾಡು ಅತ್ಯಂತ ಅದ್ಭುತವಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬಿ. ಆರ್. ಹೇಮಂತ್ ಕುಮಾರ್ ಅವರ ಸಂಗೀತ ಸಂಯೋಜನೆ ಮನಸ್ಸಿಗೆ ಮುಟ್ಟುವಂತಿದ್ದು, ‘ಸರೆಗಮಪ’ ಖ್ಯಾತಿಯ ಅಶ್ವಿನ್ ಶರ್ಮಾ ಧ್ವನಿಯಲ್ಲಿ ಹಾಡು ಚಂದವಾಗಿ ಮೂಡಿಬಂದಿದೆ. ಹಾಡಿನಲ್ಲಿ ಕಾಣಿಸಿಕೊಂಡಿರುವ ಸಮರ್ಥ್ ಹಾಗೂ ಧನ್ವಿ ಎಲ್ಲೂ ಹೊಸಬರಂತೆ ಕಾಣಿಸದೆ, ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ ಎಂದು ಪ್ರಶಂಸಿದರು. ರಘುರಾಮ್ ಸಹ ಹೊಸಬರ ಈ ಹೊಸ ಪ್ರಯತ್ನಕ್ಕೆ ಮನಸೋತು ಸಾಥ್ ನೀಡಿದ್ದಾರೆ.
ಚಿತ್ರದ ನಿರ್ದೇಶಕ ಒರಟ ಶ್ರೀ ಅವರೇ ಸ್ವತಃ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಶೂಟಿಂಗ್ ಸ್ಪಾಟ್ನಲ್ಲೇ ಹಾಡಿನ ಸಾಲುಗಳು ಹುಟ್ಟಿಕೊಂಡ ಬಗೆಯನ್ನು ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ಸಮರ್ಥ್ ಮತ್ತು ಧನ್ವಿ ಜೊತೆಗೆ ಅವರು ಬಳಸಿದ ಜೀಪ್ ಕೂಡ ಪ್ರಮುಖ ಪಾತ್ರ ವಹಿಸಲಿದ್ದು, ಕಥೆಯಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಸೇರಿದಂತೆ ಹಲವು ಕುತೂಹಲಕಾರಿ ಅಂಶಗಳಿವೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ವರವಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಿವಿಲ್ ಇಂಜಿನಿಯರ್ ರಮೇಶ್, ಸುಧಾಕರ್ ರೆಡ್ಡಿ ಯಾಕಸಿರಿ ಹಾಗೂ ವಿಷ್ಣುಕಾಂತ್ ಎ ಜೊತೆಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಒರಟ ಶ್ರೀ ಅವರ ನಿರ್ದೇಶನದ ಈ ಸಿನಿಮಾದಲ್ಲಿ ಸಮರ್ಥ್ ಹಾಗೂ ಕೃತಿಕಾ ಗೌಡ ನಾಯಕ-ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಧನ್ವಿ, ಎಂ.ಕೆ. ಮಠ, ನೀನಾಸಂ ಅಶ್ವತ್, ಸೀತಾ ಹರ್ಷವರ್ಧನ್, ಯೋಗೇಶ್ ವೀರ್ ಮತ್ತು ಮಂಡ್ಯ ಸಿದ್ದು ತಾರಾಗಣದಲ್ಲಿದ್ದಾರೆ. ಬಿ.ಆರ್. ಹೇಮಂತ್ ಕುಮಾರ್ ಸಂಗೀತ, ಸಾಮ್ರಾಟ್ ನಾಗರಾಜ್ ಛಾಯಾಗ್ರಹಣ, ಕೆ. ಗಿರೀಶ್ ಕುಮಾರ್ ಸಂಕಲನ ಹಾಗೂ ಕೋರ ಚಿನ್ನಯ್ಯ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.















