ಡಾ.ಚಂದ್ರಕಾಂತ್ ಎಸ್ ನಾಗಸಮುದ್ರ

ಚಿತ್ರದುರ್ಗ. ಮೇ. 01 : ರಾಜ್ಯದಲ್ಲಿ ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದು, ಸಾರ್ವಜನಿಕರು ಬಿಸಿಲಿನ ಬೇಗೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ವಿಶೇಷವಾಗಿ ಹಿರಿಯ ನಾಗರೀಕರು, ಮಕ್ಕಳು ತೀವ್ರ ಬಿಸಿಲಿನ ತಾಪಕ್ಕೆ ಬರಬಾರದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ್ ಎಸ್. ನಾಗಸಮುದ್ರ ಮನವಿ ಮಾಡಿದ್ದಾರೆ.
ತೀವ್ರ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ಚರ್ಮ ಕಪ್ಪಾಗುವುದು, ಅಲರ್ಜಿ, ತುಟಿ ಒಣಗುವುದು, ಮೂಗಿನಲ್ಲಿ ರಕ್ತಸ್ರಾವ, ದೇಹದ ಉಷ್ಣಾಂಶ ಏರಿಕೆ, ಸುಸ್ತು, ತಲೆಸುತ್ತು ಹಾಗೂ ಎಲೆಕ್ಟ್ರೋಲೈಟ್‍ಗಳ ಏರುಪೇರಿನಂತಹ ಲಕ್ಷಣಗಳು ಕಂಡುಬರುತ್ತವೆ. ಅಲ್ಲದೆ, ಬೇಸಿಗೆಯಲ್ಲಿ ನೀರಿನ ಮೂಲಕ ಹರಡುವ ಸಾಂಕ್ರಾಮಿಕ ರೋಗಗಳ ಭೀತಿಯೂ ಇರುತ್ತದೆ ಎಂದು ಎಚ್ಚರಿಸಿದ್ದಾರೆ.
ತೀವ್ರ ಬಿಸಿಲಿರುವಾಗ ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಬರಬಾರದು. ಅನಿವಾರ್ಯವಿದ್ದಲ್ಲಿ ಛತ್ರಿ, ತಂಪು ಕನ್ನಡಕ ಹಾಗೂ ಸ್ಕಾರ್ಫ್‍ಗಳನ್ನು ಬಳಸಿ ಮತ್ತು ಹತ್ತಿ ಬಟ್ಟೆಗಳನ್ನು ಧರಿಸಬೇಕು. ಬಿಸಿಲು ಏರುವ ಮೊದಲೇ ಅಗತ್ಯ ಕೆಲಸಗಳನ್ನು ಪೂರ್ಣಗೊಳಿಸಿ, ಮನೆಯ ಶುದ್ಧ ಕುಡಿಯುವ ನೀರನ್ನು ಸದಾ ಜೊತೆಯಲ್ಲಿಟ್ಟುಕೊಳ್ಳಬೇಕು. ಐಸ್‍ಕ್ರೀಂ ಅಥವಾ ಕೃತಕ ತಂಪು ಪಾನೀಯಗಳ ಬದಲಿಗೆ ನೈಸರ್ಗಿಕ ಹಣ್ಣಿನ ರಸ, ಕಬ್ಬಿನ ಹಾಲು ಹಾಗೂ ಶರಬತ್ತುಗಳನ್ನು ಸೇವಿಸಬೇಕು. ಕೃತಕ ಪಾನೀಯಗಳಲ್ಲಿ ಸಕ್ಕರೆ ಮತ್ತು ರಾಸಾಯನಿಕ ಅಂಶಗಳು ಹೆಚ್ಚಾಗಿರುವುದರಿಂದ ಅವು ಆರೋಗ್ಯಕ್ಕೆ ಹಾನಿಕರವಾಗಬಹುದು.
ಆಹಾರದಲ್ಲಿ ಹಸಿರು ಸೊಪ್ಪು, ತರಕಾರಿ ಹಾಗೂ ನೀರಿನ ಅಂಶ ಹೆಚ್ಚಿರುವ ಸೌತೆಕಾಯಿ, ಕ್ಯಾರೆಟ್ ಬಳಸಿ ಮತ್ತು ಹೆಚ್ಚು ಮಸಾಲೆ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕು. ವರ್ಷದಿಂದ ವರ್ಷಕ್ಕೆ ಉಷ್ಣಾಂಶ ಹೆಚ್ಚುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ಉಷ್ಣತೆಯನ್ನು ತಗ್ಗಿಸಲು ಸಾರ್ವಜನಿಕರು ಸಾಧ್ಯವಾದಷ್ಟು ಗಿಡಮರಗಳನ್ನು ಬೆಳೆಸಲು ಮುಂದಾಗಬೇಕು. ಹೆಚ್ಚಿನ ಮಾಹಿತಿ ಹಾಗೂ ಆರೋಗ್ಯ ಸಲಹೆಗಳಿಗಾಗಿ ಸಾರ್ವಜನಿಕರು ಹತ್ತಿರದ ಆಯುಷ್ ಚಿಕಿತ್ಸಾಲಯಗಳಿಗೆ ಭೇಟಿ ನೀಡಬಹುದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ್ ಎಸ್. ನಾಗಸಮುದ್ರ ಕೋರಿದ್ದಾರೆ.






















