ನವದೆಹಲಿ: ಸಿದ್ದರಾಮಯ್ಯ ಅವರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನ ಸುಪ್ರೀಂ ಕೋರ್ಟ್ ರಿಜೆಕ್ಟ್ ಮಾಡಿದೆ. ಅದರ ವಿಚಾರಣೆಯನ್ನು ನಡೆಸಲು ಅಲ್ಲಗಳೆದಿದೆ. ಸಿಎಂ ಸಿದ್ದರಾಮಯ್ಯ ಅವರ ಆದೇಶದ ಮೇರೆಗೆ ತನ್ನ ಆಸ್ತಿಯನ್ನು ವಶಪಡಿಸಿಕೊಳ್ಳಲು ಬೆದರಿಕೆಗಳು ಬರುತ್ತಿವೆ ಎಂದು ಆರೋಪಿಸಿ, ಸುಪ್ರೀಂ ಕೋರ್ಟ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡಲಾಗಿತ್ತು. ಆದರೆ ಈ ಅರ್ಜಿ ವಿಚಾರಣೆಯನ್ನು ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಇಂದು ನಡೆದ ವಿಚಾರಣೆಯಲ್ಲಿ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ಸಂದೀಪ್ ಮೆಹ್ತಾ ಅವರ ಪೀಠವು ಪ್ರಕರಣವನ್ನು ವಜಾಗೊಳಿಸಿದೆ. ಅದರ ಜೊತೆಗೆ ಈ ಪ್ರಕರಣವನ್ನು ಹೈಕೋರ್ಟ್ ಗೆ ತೆಗೆದುಕೊಂಡು ಹೋಗುವಂತೆ ಸಲಹೆ ನೀಡಿದೆ. ರಾಜ್ಯಕ್ಕೆ ಪ್ರವೇಶಿಸುವಾಗ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅರ್ಜಿದಾರರು ಆದೇಶ ನೀಡುವಂತೆ ಕೋರಿದ್ದು ಅದಕ್ಕೆ ಕೋರ್ಟ್ ಅರ್ಜಿಯನ್ನು ಇ-ಫೈಲಿಂಗ್ ಮಾಡುವ ಆಯ್ಕೆಯೂ ಲಭ್ಯವಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಮೈಸೂರು ಮೂಲದ ಸುಷ್ಮಾ ಎಸ್. ಆರಾಧ್ಯ ಎಂಬುವರು ತಮ್ಮ ಕರ್ನಾಟಕದ ಆಸ್ತಿಯ ಮೇಲೆ ಬೆದರಿಕೆಗಳು ಬರುತ್ತಿವೆ ಎಂದು ಆರೋಪಿಸಿದ್ದರು. ನನಗೆ ಬೆದರಿಕೆ ಬರುತ್ತಿದೆ. ಕರ್ನಾಟಕಕ್ಕೆ ಹೋಗೋಕೆ ಆಗುತ್ತಿಲ್ಲ. ನನ್ನ ಭದ್ರತೆಗೆ ಧಕ್ಕೆ ತಂದು, ದೆಹಲಿಯಲ್ಲಿ ಇರುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ನಾನು ನನ್ನ ಸ್ವಂತ ಮನೆಯಲ್ಲಿರಲು ಬಯಸುತ್ತೇನೆ. ಆದರೆ ಸಾಧ್ಯವಾಗುತ್ತಿಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಸದ್ಯ ಸುಪ್ರೀಂ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.







