ರಾಹುಲ್‍ಗಾಂಧಿ ಭಾರತ್ ಜೋಡೋ ಐಕ್ಯತಾ ಯಾತ್ರೆಗೆ ಬೆಂಬಲ : ಕುಮಾರ್ ಸಮತಳ

1 Min Read

ವರದಿ ಮತ್ತು ಫೋಟೋ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ : ಉಳುವವನೆ ಭೂಮಿಯ ಒಡೆಯ ಎನ್ನುವ ಕಾನೂನು ಜಾರಿಗೆ ತಂದಿದ್ದು ಇಂದಿರಾಗಾಂಧಿ. ಅದಕ್ಕಾಗಿ ನೆಹರು ಕುಡಿ ರಾಹುಲ್‍ಗಾಂಧಿ ಆರಂಭಿಸಿರುವ ಭಾರತ್ ಜೋಡೋ ಐಕ್ಯತಾ ಯಾತ್ರೆಗೆ ಬೆಂಬಲಿಸುವುದಾಗಿ ಭೂಮಿ ವಸತಿ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಕುಮಾರ್ ಸಮತಳ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಭೂಮಿ ವಸತಿ ಹಕ್ಕನ್ನು ಕಾಂಗ್ರೆಸ್‍ನವರು ಆದ್ಯತೆಯಾಗಿ ಪರಿಗಣಿಸಬೇಕು. ಉಳುವವನೆ ಭೂಮಿಯ ಒಡೆಯ ಎನ್ನುವ ಕಾಯಿದೆ ಜಾರಿಗೆ ತಂದ ಇಂದಿರಾಗಾಂಧಿಯನ್ನು ಇಂದಿಗೂ ಬಡವರು ನೆನಪಿಸಿಕೊಳ್ಳುತ್ತಾರೆ. ಉದ್ಯಮಿ, ಕಂಪನಿ, ಬಂಡವಾಳಗಾರರಿಗೆ ಮಠ ಮನ್ಯಗಳಿಗೆ ಭೂಮಿ ಕೊಡುವ ಸರ್ಕಾರಗಳು ರಾಜ್ಯದಲ್ಲಿ ಸರ್ಕಾರಿ ಗೋಮಾಳ, ಹುಲ್ಲುಬನ್ನಿ, ಖರಾಬು, ಇನಾಂ, ಅರಣ್ಯ ಇಲಾಖೆಗೆ ಸೇರಿದ ಜಮೀನುಗಳಲ್ಲಿ ಹತ್ತಾರು ವರ್ಷಗಳಿಂದಲೂ ಉಳುಮೆ ಮಾಡಿಕೊಂಡು ಜೀವಿಸುತ್ತಿರುವ ಲಕ್ಷಾಂತರ ಕುಟುಂಬಗಳು ಕಣ್ಣಿಗೆ ಬೀಳುತ್ತಿಲ್ಲವೇ. ಭೂಮಿ ವಸತಿ ರಹಿತರ ಬದುಕನ್ನು ಜೋಡಿಸಲು ಭೂಮಿ ವಸತಿ ಇಲ್ಲದ ನೂರಾರು ಜನರೊಂದಿಗೆ ಅ.12 ಮತ್ತು 13 ರಂದು ರಾಹುಲ್‍ಗಾಂಧಿ ಜೊತೆ ಭಾರತ್ ಜೋಡೋ ಪಾದಯಾತ್ರೆಗೆ ಹೆಜ್ಜೆ ಹಾಕುವುದಾಗಿ ಕುಮಾರ್ ಸಮತಳ ಹೇಳಿದರು.

ಹಕ್ಕುಪತ್ರಗಳಿಗಾಗಿ ಅರ್ಜಿಗಳನ್ನು ಹಾಕುತ್ತಿದ್ದರೂ ಇಲ್ಲಿಯವರೆಗೂ ಆಳಿದ ಎಲ್ಲಾ ಸರ್ಕಾರಗಳು ಬಡವರನ್ನು ಕಡೆಗಣಿಸುತ್ತಲೆ ಬರುತ್ತಿವೆ. ಭೂಮಿ ಇಂದು ಸಿಕ್ಕೀತು, ನಾಳೆ ಸಿಕ್ಕೀತು ಎನ್ನುವ ಆಸೆಗಣ್ಣಿನಿಂದ ಸಾಗುವಳಿದಾರರು ಕಾಯುತ್ತಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದವರು, ಅಲೆಮಾರಿ, ಅರೆಅಲೆಮಾರಿ, ಅಲ್ಪಸಂಖ್ಯಾತರನ್ನೊಳಗೊಂಡಂತೆ ಇನ್ನು ಅನೇಕರು ಭೂಮಿ ಸಾಗುವಳಿಯನ್ನೇ ನಂಬಿಕೊಂಡು ಬದುಕುತ್ತಿದ್ದಾರೆ. ಬಡವರಿಗೆ ಭೂಮಿ, ವಸತಿ ದೊರಕಿಸುವಲ್ಲಿ ಆಳುವ ಸರ್ಕಾರಕ್ಕಿದ್ದಷ್ಟೆ ಜವಾಬ್ದಾರಿ ವಿರೋಧ ಪಕ್ಷಗಳ ಮೇಲಿದೆ ಎನ್ನುವ ಕಾರಣಕ್ಕಾಗಿ ಕಾಂಗ್ರೆಸ್‍ನ ಭಾರತ್ ಜೋಡೋ ಐಕ್ಯತಾ ಪಾದಯಾತ್ರೆಗೆ ನಮ್ಮ ಬೆಂಬಲವಿದೆ ಎಂದರು.

ಮರಿಯಪ್ಪ, ಬಿ.ಆರ್.ಶಿವಕುಮಾರ್, ಪಾಂಡುರಂಗಸ್ವಾಮಿ ಡಿ.ಆರ್. ಸತ್ಯಪ್ಪ ಮಲ್ಲಾಪುರ, ಟಿ.ಶಫಿವುಲ್ಲಾ, ಬಿ.ಎನ್.ಜೀವೇಶ್, ಕರಿಯಪ್ಪ ಈಚಘಟ್ಟ, ಮಂಜಣ್ಣ ಟಿ. ಹನುಮಂತಪ್ಪ, ಸಣ್ಣವೀರಪ್ಪ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *