Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸುದ್ದಿಒನ್ `ನೀರು ಉಳಿಸಿ ನೆಲದ ಋಣ ತೀರಿಸಿ ಅಭಿಯಾನ’ : ವಾಣಿಜ್ಯೀಕರಣದ ಭರಾಟೆಯಲ್ಲಿ ಕರಗುತ್ತಿದೆ ಜಲಮೂಲ: ಡಾ. ಬಸವ ಕುಮಾರ ಸ್ವಾಮೀಜಿ

---Advertisement---

ಸುದ್ದಿಒನ್, ಚಿತ್ರದುರ್ಗ, ಮೇ. 26 : ಮುಂಚೆ ಇದ್ದ ಊರಿಗೊಂದು ಕೆರೆ, ಮನೆಗೊಂದು ಬಾವಿ ಪದ್ಧತಿ ಇಂದು ನಾಶವಾಗಿದೆ. ಜನರು ಬೋರ್ ಕೊರೆಸಿ ಮೋಟಾರ್ ಇಳಿಸಲು, ಟಿಸಿ ಹಾಕಿಸಲು ಸುಮಾರು ಮೂರು ಲಕ್ಷ ರೂಪಾಯಿಗಳನ್ನು ಸುಲಭವಾಗಿ ಖರ್ಚು ಮಾಡುತ್ತಾರೆ. ಅದರ ಜೊತೆಗೆ ಇನ್ನೊಂದು ಕೇವಲ 50,000 ರೂಪಾಯಿಗಳನ್ನು ಹೆಚ್ಚಿಗೆ ಖರ್ಚು ಮಾಡಿದರೆ, ಆ ಬೋರ್ ವೆಲ್ ಗೇ ಮಳೆಕೊಯ್ಲು ಮತ್ತು ರೀಚಾರ್ಜ್ ವ್ಯವಸ್ಥೆಯನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದು ಎಂದು ಚಿತ್ರದುರ್ಗದ ಶ್ರೀ ಮುರುಘ ರಾಜೇಂದ್ರ ಬೃಹನ್ಮಠದ ಡಾ. ಬಸವ ಕುಮಾರ ಸ್ವಾಮೀಜಿಯವರು ಕರೆ ನೀಡಿದ್ದಾರೆ.

‘ಸುದ್ದಿಒನ್’ ಹಮ್ಮಿಕೊಂಡಿರುವ “ನೀರು ಉಳಿಸಿ ನೆಲದ ಋಣ ತೀರಿಸಿ” ವಿಶೇಷ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ದುರಾದೃಷ್ಟವಶಾತ್ ಮನುಷ್ಯನಿಗೆ ಇನ್ನು ನೀರಿನ ಸಮಸ್ಯೆಯ ತೀವ್ರತೆಯ ಅರಿವು ಬಂದಿಲ್ಲ. ಯಾವತ್ತೋ ಒಂದು ದಿವಸ ಕೋಟಿ ಕೋಟಿ ದುಡ್ಡು ಕೊಟ್ಟರೂ ಒಂದು ಹನಿ ನೀರು ಸಿಗದಂತಹ ಕಠಿಣ ಪರಿಸ್ಥಿತಿ ಎದುರಾಗುತ್ತದೆಯೋ, ಅಂದು ಮಾತ್ರ ಮನುಷ್ಯನಿಗೆ ಇದರ ನಿಜವಾದ ಬೆಲೆ ಗೊತ್ತಾಗುತ್ತದೆ. ನೀರಿನ ಅಭಾವ ಎಷ್ಟಿದೆ ಎಂಬುದಕ್ಕೆ ನಮ್ಮ ಯೋಗವನ ಬೆಟ್ಟದಲ್ಲಿ ನಡೆಯುವ ಒಂದು ಘಟನೆಯೇ ಸಾಕ್ಷಿ.

ಇಲ್ಲಿ ಪ್ರತಿ ತಿಂಗಳು ನಾವು ನಾಲ್ಕೈದು ಬಾರಿ ನೀರಿನ ಪೈಪ್ಗಳನ್ನು ಬಿಚ್ಚಿ ಮರುಜೋಡಣೆ ಮಾಡಬೇಕಾಗುತ್ತದೆ. ಕಾರಣವೇನಪ್ಪಾ ಎಂದರೆ, ಸುತ್ತಮುತ್ತಲಿನ ಗುಡ್ಡದಲ್ಲಿರುವ ಕಾಡು ಕರಡಿಗಳು ನೀರಿನ ದಾಹದಿಂದ ಬೆಟ್ಟಕ್ಕೆ ಬಂದು, ಪೈಪ್ ಒಳಗೆ ನೀರಿರುತ್ತದೆ ಎಂಬ ಆಶಯದಿಂದ ಪೈಪ್ಗಳನ್ನೆಲ್ಲಾ ಮುರಿದು, ಮಣ್ಣು ಬಗೆದು ನೀರು ಕುಡಿಯಲು ಪ್ರಯತ್ನಿಸುತ್ತವೆ. ನಾವು ಮನುಷ್ಯರು ಹಣ ಕೊಟ್ಟರೆ ನೀರು ಕೊಳ್ಳಬಹುದು, ಆದರೆ ಆ ಮೂಕ ಪ್ರಾಣಿ ಕರಡಿಗಳು ನೀರನ್ನು ಎಲ್ಲಿ ಕೇಳಲು ಸಾಧ್ಯ? ಪ್ರಕೃತಿಯಲ್ಲಿ ಜಲಕ್ಷಾಮದ ಪರಿಸ್ಥಿತಿ ಅಷ್ಟು ಭೀಕರವಾಗಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಆದರೆ ಇವತ್ತಿನ ಮನುಷ್ಯ ಎಷ್ಟು ಬದಲಾಗಿದ್ದಾನೆ ಎಂದರೆ, ತನ್ನ ಮನೆಯ ಮಹಡಿಯ ಮೇಲೆ ಅಥವಾ ತೋಟದಲ್ಲಿ ಒಂದು ಸಣ್ಣ ಬಟ್ಟಲಿನಲ್ಲಿ ನೀರಿಟ್ಟು, ಅದನ್ನು ಫೋಟೋ ತೆಗೆದು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡುತ್ತಾನೆ. ‘ಪ್ರಾಣಿ ಪಕ್ಷಿಗಳಿಗೆ ನೀರಿಡಿ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಮಾಡುತ್ತಾನೆ. ಇಲ್ಲಿ ಪ್ರಾಣಿ ಪಕ್ಷಿಗಳು ನೀರು ಕುಡಿಯುತ್ತವೆ ಎನ್ನುವುದಕ್ಕಿಂತ, ‘ನಾನು ಎಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದೇನೆ’ ಎಂದು ಜನರಿಗೆ ಗೊತ್ತಾಗಲಿ ಎನ್ನುವ ಪ್ರಚಾರದ ಹಪಾಹಪಿಯೇ ಹೆಚ್ಚಾಗಿ ಕಾಣಿಸುತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.

ನಾವು ಮಾಡಬೇಕಾದ ವಾಸ್ತವ ಕೆಲಸಗಳೇನು?
ಕೇವಲ ಸಾಮಾಜಿಕ ಜಾಲತಾಣಗಳ ಪ್ರಚಾರದಿಂದ ನೀರು ಉಳಿಯುವುದಿಲ್ಲ. ವಾಸ್ತವವಾಗಿ ಜಲ ಸಂರಕ್ಷಣೆಗಾಗಿ ನಾವು ಕೆಲವು ಪ್ರಮುಖ ನಿಯಮಗಳನ್ನು ಪಾಲಿಸಲೇಬೇಕು ಎಂದು ಸ್ವಾಮೀಜಿ ಕಿವಿಮಾತು ಹೇಳಿದರು:

ನೀರನ್ನು ಮಿತವಾಗಿ ಬಳಸಿ: ಇದು ಅತ್ಯಂತ ಮಹತ್ವದ ವಿಷಯ. ನಾವು ಪ್ರತಿದಿನ ಸ್ನಾನ ಮಾಡುವುದು ತಪ್ಪಲ್ಲ, ಮಾಡಲೇಬೇಕು. ಆದರೆ ಸ್ನಾನಕ್ಕೆ ಬಳಸುವ ನೀರಿನ ಪ್ರಮಾಣವನ್ನು ಆದಷ್ಟು ಕಡಿಮೆ ಮಾಡಿಕೊಳ್ಳೋಣ. ಮುಂಚಿನ ಕಾಲದಲ್ಲಿ ಜನರು ಶೌಚಾಲಯಕ್ಕಾಗಿ ಒಂದು ಚರಿಗೆ ನೀರು ಹಿಡಿದು ಹೊಲಗಳಿಗೆ ಹೋಗುತ್ತಿದ್ದರು. ಇವತ್ತು ಕಾಲ ಬದಲಾಗಿ ಎಲ್ಲರ ಮನೆಗಳಿಗೂ ಶೌಚಾಲಯಗಳು ಬಂದಿವೆ. ಆದರೆ ಇಂದಿನ ಶೌಚಾಲಯದ ಫ್ಲಶ್ ಆನ್ ಮಾಡಿದರೆ ಒಟ್ಟಿಗೆ ಕೊಡಪಾನಗಟ್ಟಲೆ ನೀರು ವೀಣಾಗಿ ಹರಿದು ಹೋಗುತ್ತದೆ. ಆದ್ದರಿಂದ ಸ್ನಾನ ಮಾಡುವಾಗ ಆಗಲಿ, ಶೌಚಾಲಯ ಬಳಕೆಯಲ್ಲಾಗಲಿ, ಅಥವಾ ದಿನನಿತ್ಯದ ಕೆಲಸಗಳಲ್ಲಾಗಲಿ ನೀರನ್ನು ಅನಗತ್ಯವಾಗಿ ವೇಸ್ಟ್ ಮಾಡಬಾರದು ಮತ್ತು ಮಿತವಾಗಿ ಬಳಸಬೇಕು ಎಂಬ ಅರಿವು ಸದಾ ನಮ್ಮ ತಲೆಯಲ್ಲಿರಬೇಕು.

ಮಳೆಕೊಯ್ಲು ಪದ್ಧತಿ: ಮುಂಚೆ ಊರಿಗೊಂದು ಕೆರೆ ಇರುತ್ತಿತ್ತು, ಮನೆಗೊಂದು ಬಾವಿ ಇರುತ್ತಿತ್ತು. ಇವತ್ತು ಆ ಸುಂದರ ಪದ್ಧತಿ ಸಂಪೂರ್ಣ ನಾಶವಾಗಿ ಹೋಗಿದೆ. ಯಾರ ಮನೆಗಳಲ್ಲೂ ಬಾವಿ ಇಟ್ಟುಕೊಳ್ಳುವ ಪರಿಸ್ಥಿತಿ ಇಲ್ಲ. ಆದ್ದರಿಂದ, ಹೊಸದಾಗಿ ಬೋರ್ವೆಲ್ ಕೊರೆಸುವಾಗಲೇ ಕಡ್ಡಾಯವಾಗಿ ಮಳೆಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳಿ. ಜನರು ಬೋರ್ ಕೊರೆಸಿ ಮೋಟಾರ್ ಇಳಿಸಲು, ಟಿಸಿ ಹಾಕಿಸಲು, ಸ್ವಿಚ್ ಬೋರ್ಡ್ ಅಳವಡಿಸಲು ಸುಮಾರು ಮೂರು ಲಕ್ಷ ರೂಪಾಯಿಗಳನ್ನು ಸುಲಭವಾಗಿ ಖರ್ಚು ಮಾಡುತ್ತಾರೆ. ಅದರ ಜೊತೆಗೆ ಇನ್ನೊಂದು ಕೇವಲ 50,000 ರೂಪಾಯಿಗಳನ್ನು ಹೆಚ್ಚಿಗೆ ಖರ್ಚು ಮಾಡಿದರೆ, ಆ ಬೋರ್ವೆಲ್ಗೇ ಮಳೆಕೊಯ್ಲು ಮತ್ತು ರೀಚಾರ್ಜ್ ವ್ಯವಸ್ಥೆ ಮುಗಿದುಹೋಗುತ್ತದೆ.

ಕಟ್ಟಡಗಳ ಮೇಲೆ ಮಳೆನೀರು ಸಂಗ್ರಹ: ನಮ್ಮ ಯೋಗವನ ಬೆಟ್ಟದ ವಿಶಾಲವಾದ ಕಟ್ಟಡದ ಮೇಲಿರುವ ಮಳೆನೀರನ್ನೆಲ್ಲಾ ನಾವು ವೇಸ್ಟ್ ಮಾಡದೆ, ಪೈಪ್ಗಳ ಮುಖಾಂತರ ತಂದು ದೊಡ್ಡ ಟ್ಯಾಂಕಿನಲ್ಲಿ ಸಂಗ್ರಹಿಸುತ್ತೇವೆ. ಅದೇ ನೀರನ್ನು ನಮ್ಮ ದೈನಂದಿನ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುತ್ತೇವೆ. ಇಂತಹ ಮಾದರಿಯನ್ನು ಪ್ರತಿಯೊಬ್ಬರೂ ತಮ್ಮ ಮನೆ ಹಾಗೂ ಕಚೇರಿಗಳಲ್ಲಿ ಅಳವಡಿಸಿಕೊಳ್ಳಬೇಕು. ನೀರಿನ ಪ್ರತಿ ಹನಿಯೂ ಅತ್ಯಮೂಲ್ಯ ಎಂಬ ಜಾಗೃತಿ ಸಮಾಜದಲ್ಲಿ ಮೂಡಬೇಕು.

ಭೂಸುಧಾರಣಾ ಕಾಯ್ದೆಯ ಬದಲಾವಣೆ ಮತ್ತು ಕೃಷಿ ಭೂಮಿಯ ವಾಣಿಜ್ಯೀಕರಣ

ಇವತ್ತು ಬೆಂಗಳೂರಿನಂತಹ ಮಹಾನಗರಗಳಲ್ಲಿ ಅಥವಾ ಯಾವುದೇ ಸಿಟಿಗಳನ್ನು ತೆಗೆದುಕೊಂಡರೆ ಎಲ್ಲೆಲ್ಲೂ ಕಾಂಕ್ರೀಟ್ ರಸ್ತೆಗಳು ಮತ್ತು ಕಾಂಕ್ರೀಟ್ ಕಟ್ಟಡಗಳೇ ತುಂಬಿವೆ. ಮಣ್ಣಿನ ನೆಲವೇ ಕಾಣಿಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಳೆನೀರು ಎಲ್ಲಿ ಹೋಗಬೇಕು? ಭೂಮಿಯೊಳಗೆ ಇಂಗಲು ಜಾಗವೇ ಇಲ್ಲದಂತಾಗಿದೆ ಎಂದು ಕಳವಳಪಟ್ಟರು. ಇನ್ನೊಂದು ಕಡೆ, ಕೃಷಿ ಭೂಮಿಗಳ ಸ್ಥಿತಿಯೂ ಆತಂಕಕಾರಿಯಾಗಿದೆ. ಹಿಂದೆ 1979/80 ರ ಭೂಸುಧಾರಣಾ ಕಾಯ್ದೆಯ ಅಡಿಯಲ್ಲಿ ಕೇವಲ ರೈತರಾಗಿದ್ದವರು ಮಾತ್ರ ರೈತರ ಜಮೀನನ್ನು ಕೊಳ್ಳಲು ಕಾನೂನಿನಲ್ಲಿ ಅವಕಾಶವಿತ್ತು. ಆದರೆ ಸುಮಾರು ಐದು ವರ್ಷಗಳ ಹಿಂದೆ ಬಂದ ಕಾನೂನು ತಿದ್ದುಪಡಿಯಿಂದಾಗಿ ಇವತ್ತು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಇವತ್ತು ಹಣವಿರುವ, ಬಂಡವಾಳವಿರುವ ಯಾವುದೇ ವ್ಯಕ್ತಿ ಅಥವಾ ಯಾವುದೇ ದೇಶದ ಕಂಪನಿಯಾಗಲಿ ಇಲ್ಲಿಗೆ ಬಂದು ನೇರವಾಗಿ ಕೃಷಿ ಭೂಮಿಯನ್ನು ಖರೀದಿ ಮಾಡಿ, ಕೈಗಾರಿಕೆಗಳನ್ನು ಸ್ಥಾಪಿಸಬಹುದು.

ಹಿಂದೆ ಚಿತ್ರದುರ್ಗ ಜಿಲ್ಲೆಯ ಸುತ್ತಮುತ್ತಲಿನ ರೈತರೆಲ್ಲರೂ ತರಕಾರಿ, ಹೂವುಗಳನ್ನು ಸಮೃದ್ಧವಾಗಿ ಬೆಳೆಯುತ್ತಿದ್ದರು. ಆದರೆ ಇವತ್ತು ಚಿತ್ರದುರ್ಗದ ಸುತ್ತಲಿನ 10 ಕಿಲೋಮೀಟರ್ ವ್ಯಾಪ್ತಿಯು ಸಂಪೂರ್ಣವಾಗಿ ರಿಯಲ್ ಎಸ್ಟೇಟ್ ಆಗಿ ಮಾರ್ಪಟ್ಟಿದೆ. ಮುಂಚೆ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಬೇಕಾದರೆ ಅದು ಕೃಷಿಗೆ ಯೋಗ್ಯವಲ್ಲದ ಭೂಮಿ ಎಂಬ ನಿಯಮಗಳಿದ್ದವು. ಆದರೆ ಇಂದು ರೈತರ ಫಲವತ್ತಾದ ಕೃಷಿ ಭೂಮಿಗಳೇ ರಿಯಲ್ ಎಸ್ಟೇಟ್ ಪಾಲಾಗುತ್ತಿವೆ. ಹಿಂದೆ ನಾವು ಒಂದು ಸಣ್ಣ ಮಠ ಕಟ್ಟಬೇಕಾದರೂ ಜಿಲ್ಲಾಧಿಕಾರಿಗಳಿಂದ ಕಟ್ಟುನಿಟ್ಟಿನ ಅನುಮತಿ ಪಡೆಯಬೇಕಾಗುತ್ತಿತ್ತು. ಆದರೆ ಐದು ವರ್ಷಗಳ ಹಿಂದೆ ಬಂದ ಕಾಯ್ದೆಯಿಂದಾಗಿ ಯಾರು ಬೇಕಾದರೂ ಸಂಘ ಸಂಸ್ಥೆಗಳಿಗೆ, ಕಂಪನಿಗಳಿಗೆ ಮತ್ತು ಬಂಡವಾಳಶಾಹಿಗಳಿಗೆ ನೇರವಾಗಿ ಭೂಮಿಯನ್ನು ನೊಂದಣಿ ಮಾಡಿಕೊಡಬಹುದಾಗಿದೆ ಎಂದು ಕಾನೂನಿನ ಸ್ಥಿತ್ಯಂತರಗಳನ್ನು ವಿವರಿಸಿದರು. ಒಂದು ಕಡೆ ದೊಡ್ಡ ಪ್ರಮಾಣದಲ್ಲಿ ಕೃಷಿ ಭೂಮಿಗಳು ಕೈಗಾರಿಕೀಕರಣ ಮತ್ತು ವಾಣಿಜ್ಯೀಕರಣಗೊಳ್ಳುತ್ತಿದ್ದರೆ, ಮತ್ತೊಂದೆಡೆ ಕೌಟುಂಬಿಕ ವ್ಯವಸ್ಥೆಯೂ ಬದಲಾಗಿದೆ. ಹಿಂದೆ ನಾಲ್ಕು ಜನ ಸಹೋದರರಿದ್ದರೆ ಒಂದೇ ಮನೆಯಲ್ಲಿದ್ದರು, ಇವತ್ತು ನಾಲ್ಕೂ ಜನರಿಗೂ ನಾಲ್ಕು ಪ್ರತ್ಯೇಕ ಸೈಟ್ಗಳು ಬೇಕು, ಅವರ ಮಕ್ಕಳಿಗೂ ಮೊಮ್ಮಕ್ಕಳಿಗೂ ಸೈಟ್ಗಳು ಬೇಕು. ಈ ಎಲ್ಲಾ ವಾಣಿಜ್ಯೀಕರಣ ಹೀಗೆಯೇ ಮುಂದುವರಿದರೆ, ನಾವು ಮಾಡುವ ಇಂತಹ ಜಲ ಜಾಗೃತಿ ಅಭಿಯಾನಗಳಿಗೆ ಅರ್ಥವೇ ಇಲ್ಲದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಮುಂದಿನ ತಲೆಮಾರಿಗೆ ಸಮೃದ್ಧಿಯ ಜಲಸಂದೇಶ

ದೇಶದಲ್ಲಿ ಇವತ್ತು ಶೇಕಡಾ 80 ರಷ್ಟು ನೀರಿನ ಅಭಾವ ಮತ್ತು ಸಮಸ್ಯೆ ಎದುರಾಗುತ್ತಿದೆ ಎಂಬ ಭೀಕರ ಸಮೀಕ್ಷೆಯ ವರದಿ ನಮ್ಮ ಮುಂದಿದೆ. ಈ ದೃಷ್ಟಿಯಿಂದ ನಾವೆಲ್ಲರೂ ತಕ್ಷಣವೇ ಎಚ್ಚೆತ್ತುಕೊಂಡು ನಮ್ಮ ಜಮೀನುಗಳಲ್ಲಿ, ಮನೆಗಳಲ್ಲಿ ಮತ್ತು ಸುತ್ತಮುತ್ತಲಿನ ವಾತಾವರಣದಲ್ಲಿ ನೀರಿನ ಸದ್ಬಳಕೆ ಹೇಗೆ ಮಾಡಬೇಕು ಎಂಬ ಜಾಗೃತಿ ಮೂಡಿಸಬೇಕಾಗಿದೆ. ದೇವರಾಜ್ ರೆಡ್ಡಿ ಅವರಂತಹ ಜಲ ತಜ್ಞರನ್ನು ನಿಮ್ಮ ನಿಮ್ಮ ಜಮೀನುಗಳಿಗೆ ಕರೆಸಿ, ಅವರಿಂದ ಸೂಕ್ತ ಸಲಹೆಗಳನ್ನು ಪಡೆದು ಬೋರ್ವೆಲ್ ರೀಚಾರ್ಜ್ ಮಾಡಿಸಿಕೊಳ್ಳಿ. ಇದಕ್ಕೆ ಬಹಳ ದೊಡ್ಡ ಖರ್ಚೇನಾಗುವುದಿಲ್ಲ; ಕೇವಲ 6mm, 20mm ಮತ್ತು 40mm ನಷ್ಟು ಜಲ್ಲಿಗಲ್ಲುಗಳು ಹಾಗೂ ವೈಜ್ಞಾನಿಕ ವಿನ್ಯಾಸವಿದ್ದರೆ ಸಾಕು, ಮಳೆನೀರು ನೇರವಾಗಿ ಭೂಮಿಯ ಒಡಲು ಸೇರುತ್ತದೆ. ಇದನ್ನು ಒಂದು ಪವಿತ್ರವಾದ ‘ಸಾಮಾಜಿಕ ಕಳಕಳಿ’ ಎಂದು ತಿಳಿದು ನಾವೆಲ್ಲರೂ ಕೆಲಸ ಮಾಡಬೇಕಾಗಿದೆ. ಇವತ್ತು ನಮಗೆ ಸಮೃದ್ಧಿಯಾದ ನೀರು ಸಿಕ್ಕಿದೆ, ಅದೇ ರೀತಿ ನಮ್ಮ ಮುಂದಿನ ತಲೆಮಾರಿಗೂ, ನಾಳಿನ ಮಕ್ಕಳಿಗೂ ಈ ನೀರು ಸಿಗಬೇಕು ಎನ್ನುವ ಉದಾತ್ತ ಮನೋಭಾವವನ್ನು ನಾವೆಲ್ಲರೂ ಇಟ್ಟುಕೊಳ್ಳೋಣ ಎಂದರು.

ಕೊನೆಯದಾಗಿ, ‘ಸುದ್ದಿಒನ್’ ಚಾನೆಲ್ ಹಮ್ಮಿಕೊಂಡಿರುವ ಈ ‘ನೀರು ಉಳಿಸಿ, ನೆಲದ ಋಣ ತೀರಿಸಿ’ ಅಭಿಯಾನವು ಅತ್ಯಂತ ಶ್ಲಾಘನೀಯವಾಗಿದೆ. ಅವರು ಕೇವಲ ಸ್ಟುಡಿಯೋಗಳಿಗೆ ಸೀಮಿತವಾಗದೆ, ಪ್ರತಿ ಮಠಮಾನ್ಯಗಳಿಗೆ, ರಾಜಕಾರಣಿಗಳಿಗೆ, ಜನಪ್ರತಿನಿಧಿಗಳಿಗೆ, ಪ್ರಗತಿಪರರಿಗೆ ಹಾಗೂ ರೈತರ ಬಳಿಗೇ ಖುದ್ದಾಗಿ ಹೋಗಿ, ಈ ತರಹದ ಸಂದರ್ಶನಗಳ ಮೂಲಕ ಯಾರು ಜಲ ಸಂರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ ಎಂಬುದನ್ನು ಸಮಾಜಕ್ಕೆ ತಿಳಿಸುವ ಅದ್ಭುತ ಕೆಲಸವನ್ನು ಮಾಡುತ್ತಿದ್ದಾರೆ. ಈ ಜಲ ಜಾಗೃತಿ ಕಾರ್ಯಕ್ರಮವು ಇಡೀ ಸಮಾಜದಲ್ಲಿ ಯಶಸ್ವಿಯಾಗಿ ನಡೆಯಲಿ ಎಂದು ಆಶಿಸುತ್ತಾ, ಎಲ್ಲರಿಗೂ ಶರಣು ಶರಣಾರ್ಥಿಗಳನ್ನು ಸಮರ್ಪಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now