ಸುದ್ದಿಒನ್, ಚಿತ್ರದುರ್ಗ, ಮೇ.18 : ಆಧುನಿಕ ಜಗತ್ತಿನಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಜಟಿಲವಾಗುತ್ತಿರುವ ಬೆನ್ನಲ್ಲೇ, ಚಿತ್ರದುರ್ಗದ ಮೆದೇಹಳ್ಳಿ ರಸ್ತೆಯಲ್ಲಿರುವ ಶ್ರೀರಾಮ ತೀರ್ಥ ಆಶ್ರಮವು ಮಳೆ ನೀರು ಕೊಯ್ಲು ಮತ್ತು ಶುದ್ಧೀಕರಣ ವ್ಯವಸ್ಥೆಯನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ದೊಡ್ಡ ಮಾದರಿಯಾಗಿ ಹೊರಹೊಮ್ಮಿದೆ.
ಆಶ್ರಮದ ಆವರಣದಲ್ಲಿರುವ ಮೂರು ಎಕರೆ ಜಮೀನಿನ ಬೋರ್ವೆಲ್ ನೀರು ತೀವ್ರವಾಗಿ ಉಪ್ಪಾಗಿದ್ದು, ಕುಡಿಯಲು ಹಾಗೂ ಅಡುಗೆ ಮಾಡಲು ಯೋಗ್ಯವಾಗಿರಲಿಲ್ಲ. ಹಾಲು ಹಾಕಿದ ತಕ್ಷಣ ಟೀ ಒಡೆದು ಹೋಗುವಷ್ಟು ಮತ್ತು ಬೇಳೆಯೂ ಬೇಯದಷ್ಟು ಕಠಿಣವಾದ ನೀರು ಅದಾಗಿತ್ತು. ಈ ಸಮಸ್ಯೆಯಿಂದಾಗಿ ಆರಂಭದಲ್ಲಿ ಬೇರೆಡೆಯಿಂದ ನೀರನ್ನು ತಂದು ಬಳಸಲಾಗುತ್ತಿತ್ತು. ಮಳೆಗಾಲದಲ್ಲಿ ಕೇವಲ ಡ್ರಮ್ಗಳಲ್ಲಿ ನೀರು ಸಂಗ್ರಹಿಸಿ ಒಂದು ವಾರ ಬಳಸುತ್ತಿದ್ದ ಆಶ್ರಮದ ಪರಿಸ್ಥಿತಿಯನ್ನು ಗಮನಿಸಿದ ಜಲತಜ್ಞ ದೇವರಾಜ್ ರೆಡ್ಡಿ ಅವರು, ಶಾಶ್ವತವಾಗಿ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸುವಂತೆ ಪ್ರೇರೇಪಿಸಿದರು ಎಂದು ಶ್ರೀಪ್ರಹ್ಲಾದ್ ಗುರೂಜಿ ತಿಳಿಸಿದ್ದಾರೆ.

ಆರಂಭದಲ್ಲಿ ಜನರ ವಿರೋಧ ಹಾಗೂ ಅನುಮಾನಗಳ ನಡುವೆಯೂ ಆಶ್ರಮದಲ್ಲಿ ಮೊದಲು 50,000 ಲೀಟರ್ ಸಾಮರ್ಥ್ಯದ ಮಳೆ ನೀರು ಸಂಗ್ರಹಣಾ ತೊಟ್ಟಿಯನ್ನು ನಿರ್ಮಿಸಲಾಯಿತು. ಈ ಪ್ರಯೋಗ ಅತ್ಯಂತ ಯಶಸ್ವಿಯಾದ ಹಿನ್ನೆಲೆಯಲ್ಲಿ, ಪ್ರಸ್ತುತ ಆಶ್ರಮದಲ್ಲಿ 2 ಲಕ್ಷ ಲೀಟರ್ ಸಾಮರ್ಥ್ಯದ ಬೃಹತ್ ಮಳೆ ನೀರು ಕೊಯ್ಲು ಮತ್ತು ಅತ್ಯಾಧುನಿಕ ಶುದ್ಧೀಕರಣ ಘಟಕವನ್ನು ಸ್ಥಾಪಿಸಲಾಗಿದೆ.
ಆಶ್ರಮದ ಬೋರ್ವೆಲ್ ನೀರಿನ ಟಿ.ಡಿ.ಎಸ್ (TDS) ಮಟ್ಟವು 1000 ರಷ್ಟಿದ್ದು, ಅದು ಆರೋಗ್ಯಕ್ಕೆ ಹಾನಿಕಾರಕವಾಗಿತ್ತು. ಆದರೆ ಪ್ರಸ್ತುತ ಮಳೆ ನೀರು ಕೊಯ್ಲು ವ್ಯವಸ್ಥೆಯಿಂದ ಸಿಗುತ್ತಿರುವ ಶುದ್ಧೀಕರಿಸಿದ ನೀರಿನ ಟಿ.ಡಿ.ಎಸ್ ಮಟ್ಟವು ಕೇವಲ 50 ರಿಂದ 60 ರಷ್ಟಿದೆ. ಈ ನೀರನ್ನು ಕುಡಿಯುವುದರಿಂದ ಯಾವುದೇ ರೀತಿಯ ಮಂಡಿ ನೋವು ಅಥವಾ ಕೀಲು ನೋವುಗಳಂತಹ ಆರೋಗ್ಯ ಸಮಸ್ಯೆಗಳು ನಮಗೆ ಕಂಡುಬಂದಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ವರ್ಷಕ್ಕೊಮ್ಮೆ ತೊಟ್ಟಿಯನ್ನು ಸ್ವಚ್ಛಗೊಳಿಸಿ, ಪ್ರತಿ ಆರು ತಿಂಗಳಿಗೊಮ್ಮೆ ಹರಳು ಉಪ್ಪನ್ನು ಬಳಸುವ ಮೂಲಕ ಅತ್ಯಂತ ಸರಳವಾಗಿ ಈ ನೀರನ್ನು ನಿರ್ವಹಣೆ ಮಾಡಲಾಗುತ್ತಿದೆ. ಸದ್ಯ ಆಶ್ರಮದಲ್ಲಿ ನಡೆಯುವ ದೊಡ್ಡ ದೊಡ್ಡ ಸಮಾರಂಭಗಳಿಗೂ ಇದೇ ನೀರನ್ನು ಬಳಸಲಾಗುತ್ತಿದ್ದು, ಸುತ್ತಮುತ್ತಲಿನ ಸಾರ್ವಜನಿಕರೂ ಸಹ ಪ್ರತಿದಿನ 20 ಲೀಟರ್ನ ಕ್ಯಾನ್ಗಳಲ್ಲಿ ಆಶ್ರಮದಿಂದ ಕುಡಿಯುವ ನೀರನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.
ಸಾರ್ವಜನಿಕರಿಗೆ ಕರೆ:
ನಾಲ್ಕು ಜನರ ಒಂದು ಸಾಧಾರಣ ಕುಟುಂಬಕ್ಕೆ ಕನಿಷ್ಠ 15,000 ಲೀಟರ್ ಸಾಮರ್ಥ್ಯದ ತೊಟ್ಟಿಯನ್ನು ನಿರ್ಮಿಸಿಕೊಂಡರೆ ಇಡೀ ವರ್ಷದ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಿಕೊಳ್ಳಬಹುದು. ಪ್ರತಿಯೊಬ್ಬರೂ ತಮ್ಮ ಮನೆಗಳ ಛಾವಣಿಯ ಮಳೆ ನೀರನ್ನು ವ್ಯರ್ಥ ಮಾಡದೆ ಇಂತಹ ವ್ಯವಸ್ಥೆ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಆಶ್ರಮದ ಪ್ರಮುಖರು ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
ಸುದ್ದಿಒನ್ ವಿಶೇಷ ಅಭಿಯಾನ ; ನೀರು ಉಳಿಸಿ, ನೆಲದ ಋಣ ತೀರಿಸಿ :
ನೀರು ಪ್ರಕೃತಿ ನಮಗೆ ಕೊಟ್ಟ ಉಚಿತ ಕೊಡುಗೆಯಾಗಿರಬಹುದು, ಆದರೆ ಅದನ್ನು ನಮ್ಮ ನಾಳೆಗಳಿಗಾಗಿ ಮತ್ತು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮ ಜವಾಬ್ದಾರಿ. ನೀರು ವ್ಯರ್ಥ ಮಾಡುವುದನ್ನು ನಿಲ್ಲಿಸೋಣ, ಜಲಸಂರಕ್ಷಣೆಗೆ ಕೈಜೋಡಿಸೋಣ. ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು 9036974702 WhatsApp ಮೆಸೇಜ್ ಮೂಲಕ ತಿಳಿಸಿ.
















