ಚಿತ್ರದುರ್ಗ, ಮೇ. 20 : ತಾಲೂಕಿನ ಗಂಜಿಗಟ್ಟೆ ಹಾಗೂ ಕಳ್ಳಿಹಟ್ಟಿ ಗೊಲ್ಲರಹಟ್ಟಿ ಹಳ್ಳಿಗಳಲ್ಲಿ ಎಐಡಿಎಸ್ಓ (ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೆಷನ್) ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ನೇತೃತ್ವದಲ್ಲಿ ಕೆಪಿಎಸ್ ಶಾಲೆಗೆ ಊರಿನ ಮಕ್ಕಳನ್ನು ಸೇರಿಸಲು ಒಪ್ಪಿಗೆ ಇರುವುದಿಲ್ಲ ಎಂದು ಸರ್ಕಾರಿ ಶಾಲೆಗಳ ಮುಂದೆ “ನಮ್ಮೂರ ಶಾಲೆ ನಮ್ಮಯ ಕಣ್ಮಣಿ” ಬ್ಯಾನರ್ ಕಟ್ಟಿ ನಮ್ಮೂರ ಶಾಲೆ ನಮ್ಮೂರಲ್ಲಿ ಇರಬೇಕೆಂದು ಹೋರಾಟ ನಡೆಸಿದರು.
ಎಐಡಿಎಸ್ಓ ಜಿಲ್ಲಾ ಸಂಚಾಲಕರು ಕೆ ಈರಣ್ಣ ಅವರು ಮಾತನಾಡಿ… ಕರ್ನಾಟಕ ರಾಜ್ಯ ಸರ್ಕಾರವು ಬಜೆಟ್ ನಲ್ಲಿ ಘೋಷಿಸಿರುವಂತೆ ಜೂನ್ ತಿಂಗಳಿಂದಲೇ ಹೊಸ ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಈ ಶಾಲೆಗಳ 3ರಿಂದ 5 ಕಿ. ಮೀ ವ್ಯಾಪ್ತಿಯ ಶಾಲೆಗಳನ್ನು ವಿಲೀನಗೊಳಿಸಲಾಗುವುದೆಂದು 15 ಅಕ್ಟೋಬರ್ 2025ರ ಆದೇಶವು ಹೊರಡಿಸಿದೆ. ಈ ಕುರಿತು ಪಟ್ಟಿ ಕೂಡ ದೊರೆತಿದೆ. ನಮ್ಮೂರ ಶಾಲೆ ನಮ್ಮ ಊರಿನಲ್ಲಿ ಉಳಿಯಬೇಕು ಮತ್ತು ಕೆಪಿಎಸ್ ಯೋಜನೆ ರದ್ದಾಗಬೇಕೆಂದು ಆಗ್ರಹಿಸಿ ಎಐಡಿಎಸ್ಓ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಿಕೊಂಡು ಕಳೆದ ಆರು ತಿಂಗಳಿಂದ ಗ್ರಾಮಸ್ಥರು ಹಾಗೂ ಪೋಷಕರು ಹೋರಾಟ ನಡೆಸಿದ್ದಾರೆ. ಹಳ್ಳಿಯಿಂದ ಆರಂಭಿಸಿ ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದವರೆಗೂ ಪ್ರತಿಭಟನೆ ಹಾಗೂ ಸಮಾವೇಶಗಳನ್ನು ನಡೆಸಿದ್ದೇವೆ. ನಾಡಿನ ಹೆಸರಾಂತ ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರು ನಮ್ಮೊಂದಿಗೆ ಧ್ವನಿಗೂಡಿಸಿದ್ದಾರೆ. ಆದರೆ ರಾಜ್ಯ ಸರಕಾರವು ಜನರ ತೀವ್ರ ವಿರೋಧ ನಡುವೆಯೂ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಆರಂಭಿಸಲು ಮುಂದಾಗಿದೆ, ಇದರಿಂದಾಗಿ ಸಾವಿರಾರು ಬಡ ಮಕ್ಕಳ ಸರ್ಕಾರಿ ಶಾಲೆಗಳನ್ನು ಮುಚ್ಚಿ ಹೋಗುತ್ತವೆ. ಆದ್ದರಿಂದ ಗ್ರಾಮಸ್ಥರು ಈ ಕೆಪಿಎಸ್ ಯೊಜನೆಯನ್ನು ವಿರೋಧಿಸುತ್ತಾರೆ. “ಯಾಕೆಂದರೆ ನಮ್ಮೂರ ಶಾಲೆ ನಮ್ಮೂರ ಮಕ್ಕಳ ಜ್ಞಾನದ ಮಂದಿರವಾಗಿದೆ”. ನಮ್ಮೂರ ಶಾಲೆಯನ್ನು ಮುಚ್ಚಲು/ವಿಲೀನಗೊಳಿಸಲು ಊರಿನ ಗ್ರಾಮಸ್ಥರಿಗೆಲ್ಲಾ ಒಪ್ಪಿಗೆ ಇರುವುದಿಲ್ಲ.

ಅಷ್ಟೇ ಅಲ್ಲದೇ ಸರ್ಕಾರವು 1ನೇ ತರಗತಿಯಿಂದಲೇ ಕನ್ನಡ ಮಾಧ್ಯಮದೊಂದಿಗೆ ಇಂಗ್ಲಿಷ್ ಮಾಧ್ಯಮ ಕೂಡ ಆರಂಭಿಸುತ್ತಿದೆ. ದ್ವಿಭಾಷಾ ಮಾಧ್ಯಮದ ಹೆಸರಲ್ಲಿ ಕೇವಲ ಇಂಗ್ಲಿಷ್ ಮಾಧ್ಯಮ ಕಲಿಸಲು ತಯಾರಿ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಕನ್ನಡ ಮಾಧ್ಯಮ ತೆಗೆದುಹಾಕುವುದನ್ನು ಒಪ್ಪಲು ಸಾಧ್ಯವಿಲ್ಲ.
ಆದ್ದರಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳು ಓದುತ್ತಿದ್ದು ಎಲ್ಲರೂ ರೈತರು, ಕೂಲಿ ಕಾರ್ಮಿಕರ ಮಕ್ಕಳು, ನಮ್ಮೂರು ಶಾಲೆ ಮುಚ್ಚಿದರೆ 3-4ಕಿಲೋಮೀಟರ್ ದೂರವಿರುವ ಕುರುಬರಹಳ್ಳಿ ಕೆಪಿಎಸ್ ಶಾಲೆಗೆ ನಮ್ಮಮಕ್ಕಳನ್ನು ಕಳಿಸಲು ಸಾಧ್ಯವಾಗುವುದಿಲ್ಲ.. ಆದ್ದರಿಂದ ನಮ್ಮೂರ ಶಾಲೆ ನಮ್ಮೂರಲ್ಲಿ ಉಳಿಸಿ, ಸಮರ್ಪಕ ಸೌಲಭ್ಯ ಹಾಗೂ ಶಿಕ್ಷಕರನ್ನು ನೀಡಿ ಅಭಿವೃದ್ಧಿ ಪಡಿಸಬೇಕೆಂದು ಆಗ್ರಹಿಸಿದರು.
ಬೇಡಿಕೆಗಳು:
* ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹಿಂಪಡೆಯಿರಿ.
* ನಮ್ಮೂರ ಶಾಲೆ ವಿಲೀನ ಕೈಬಿಡಿ.
* ನಮ್ಮೂರ ಶಾಲೆಗೆ ಸಮರ್ಪಕ ಸೌಲಭ್ಯ ನೀಡಿ ಬಲಪಡಿಸಿ.
* ಕನ್ನಡ ಮಾಧ್ಯಮವನ್ನು ಉಳಿಸಿ. ಇಂಗ್ಲಿಷ್ ಮಾಧ್ಯಮಕ್ಕಾಗಿ ಪ್ರತ್ಯೇಕ ಶಿಕ್ಷಕರ ನೇಮಕ ಮಾಡಿಕೊಳ್ಳಿ
ಈ ಸಂದರ್ಭದಲ್ಲಿ ಗಂಜಿಗಟ್ಟೆ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಅಧ್ಯಕ್ಷರು ಮಂಜಣ್ಣ, ಕಾರ್ಯದರ್ಶಿ ನಾಗರಾಜ್ ಮತ್ತು ಸದಸ್ಯರು ಗೋಪಾಲಸ್ವಾಮಿ ಹಾಗೂ ಕಳ್ಳಿಹಟ್ಟಿ ಗೊಲ್ಲರಹಟ್ಟಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಅಧ್ಯಕ್ಷರು ರಾಮಕೃಷ್ಣ, ಕಾರ್ಯದರ್ಶಿ ಸಿದ್ದೇಶ್, ಸದಸ್ಯರು ಪ್ರಕಾಶ್ ಜೊತೆಗೆ ಊರಿನ ಜನರು ಇನ್ನಿತರರಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















