ಬೆಂಗಳೂರು.ಜುಲೈ.03: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಹಕ್ಕು ಕಾಯ್ದೆಯಡಿ ಪ್ರತಿದಿನ ಶಾಲಾ ಹಂತದಲ್ಲಿ ನಿರಂತರ ಬೋಧನೆ ಮತ್ತು ಕಲಿಕೆ ಸುಗಮವಾಗಿ ನಡೆಯಲು ಹಾಗೂ ಕಲಿಕಾ ಫಲಿತಾಂಶಗಳನ್ನು ಸುಧಾರಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಅತ್ಯಂತ ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ.
ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ವಿ. ರಶ್ಮಿ ಮಹೇಶ್ ಅವರ ಆದೇಶದ ಮೇರೆಗೆ ಹೊರಡಿಸಲಾದ ಈ ಹೊಸ ಮಾರ್ಗಸೂಚಿಗಳು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ನಿಯಮ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಇಲಾಖೆ ಹೊರಡಿಸಿರುವ ಪ್ರಮುಖ ಕಟ್ಟುನಿಟ್ಟಿನ ಮಾರ್ಗಸೂಚಿಗಳು ಹೀಗಿವೆ
ಶಾಲಾ ಅವಧಿಯಲ್ಲಿ ತರಬೇತಿ, ಸಭೆಗಳಿಗೆ ನಿಷೇಧ: ಯಾವುದೇ ಶಿಕ್ಷಕರನ್ನು ಅಥವಾ ಶಾಲಾ ಮುಖ್ಯೋಪಾಧ್ಯಾಯರನ್ನು ಶಾಲಾ ದಿನಗಳಲ್ಲಿ ಹಾಗೂ ಶಾಲೆಯ ವೇಳೆಯಲ್ಲಿ ಯಾವುದೇ ತರಬೇತಿ ಕಾರ್ಯಕ್ರಮ, ಕಾರ್ಯಾಗಾರ ಅಥವಾ ಸಭೆಗಳಿಗೆ ನಿಯೋಜನೆ (ಒ.ಓ.ಡಿ), ಮೌಖಿಕ ಅಥವಾ ಲಿಖಿತ ಆದೇಶಗಳ ಮೂಲಕ ಕಳುಹಿಸುವಂತಿಲ್ಲ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಹ ಇಂತಹ ಯಾವುದೇ ಆದೇಶ ನೀಡಬಾರದು ಎಂದು ಸೂಚಿಸಲಾಗಿದೆ.
ವಿಡಿಯೋ ಕಾನ್ಫರೆನ್ಸ್ ಮಾಡುವಂತಿಲ್ಲ: ಶಾಲಾ ಸಮಯದಲ್ಲಿ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರ ಯಾವುದೇ ಸಭೆಗಳನ್ನು ಕರೆಯಬಾರದು ಅಥವಾ ವಿಡಿಯೋ ಕಾನ್ಫರೆನ್ಸ್ (Video Conference) ನಡೆಸಬಾರದು. ಶಾಲೆಗಳಿಗೆ ಭೇಟಿ ನೀಡುವ ಅಧಿಕಾರಿಗಳು ತರಗತಿಗಳಿಗೆ ಮತ್ತು ಬೋಧನೆಗೆ ಯಾವುದೇ ತೊಂದರೆಯಾಗದಂತೆ ನಡೆದುಕೊಳ್ಳಬೇಕು.
ವಿದ್ಯಾರ್ಥಿಗಳನ್ನು ಹೊರಗೆ ಕರೆದೊಯ್ಯುವಂತಿಲ್ಲ: ಯಾವುದೇ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಶಾಲೆಯ ಹೊರಗಡೆ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಪ್ರೇಕ್ಷಕರಾಗಿ ಭಾಗವಹಿಸಲು ಅಥವಾ ಕರೆದುಕೊಂಡು ಹೋಗಲು ನಿರ್ದೇಶಿಸುವಂತಿಲ್ಲ.
ಬಾಹ್ಯ ಪರೀಕ್ಷೆಗಳಿಗೆ ಬ್ರೇಕ್: ಶಾಲಾ ದಿನಗಳಲ್ಲಿ ಕೆಪಿಎಸ್ಸಿ (KPSC) ಅಥವಾ ಇತರ ರಾಜ್ಯ/ಕೇಂದ್ರ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ನಡೆಸುವ ಯಾವುದೇ ಬಾಹ್ಯ ಪರೀಕ್ಷೆಗಳನ್ನು ಶಾಲಾ ಆವರಣದಲ್ಲಿ ನಡೆಸಲು ಅವಕಾಶವಿಲ್ಲ. ಒಂದು ವೇಳೆ ಇಂತಹ ಪರೀಕ್ಷೆಗಳನ್ನು ನಡೆಸಬೇಕಾದಲ್ಲಿ, ಕೇವಲ ಸಾರ್ವಜನಿಕ ರಜೆ ಅಥವಾ ಬೇಸಿಗೆ ರಜೆಯ ದಿನಗಳಲ್ಲಿ ಮಾತ್ರ ನಿಯಮಾನುಸಾರ ಅವಕಾಶ ನೀಡಬಹುದು. ಇದನ್ನು ಉಲ್ಲಂಘಿಸಿದರೆ ಸಂಬಂಧಪಟ್ಟ DDPI, BEO ಮತ್ತು ಡಯಟ್ ಪ್ರಾಂಶುಪಾಲರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ.
ಡೇಟಾ ಎಂಟ್ರಿ ಕೆಲಸಕ್ಕೆ ಶಿಕ್ಷಕರನ್ನು ಬಳಸುವಂತಿಲ್ಲ: ಖಾಸಗಿ ಸಂಸ್ಥೆಗಳು ಅಥವಾ ಯಾವುದೇ ಜ್ಞಾನ ಪಾಲುದಾರರ ಸಾಫ್ಟ್ವೇರ್ಗಳಲ್ಲಿ ಡೇಟಾ ಎಂಟ್ರಿ (Data Entry) ಮಾಡುವಂತೆ ಶಿಕ್ಷಕರಿಗೆ ಅಥವಾ ಮುಖ್ಯೋಪಾಧ್ಯಾಯರಿಗೆ ಮೌಖಿಕ ಅಥವಾ ಲಿಖಿತ ಆದೇಶ ನೀಡಬಾರದು. ಇಂತಹ ಆದೇಶ ನೀಡುವ ಅಧಿಕಾರಿಗಳ ವಿರುದ್ಧ ಇಲಾಖೆಯು ಕಠಿಣ ಶಿಸ್ತು ಕ್ರಮ ಜರುಗಿಸಲಿದೆ.
ಸರ್ಕಾರಿ ಶಾಲೆಗಳಲ್ಲಿ ಶಾಲಾ ಸಮಯದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಯಲ್ಲಿಯೇ ಹಾಜರಿದ್ದು, ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಗೆ ಸಂಪೂರ್ಣ ಆದ್ಯತೆ ನೀಡಬೇಕು ಎನ್ನುವುದೇ ಈ ಬಿಗಿ ಕ್ರಮದ ಮುಖ್ಯ ಉದ್ದೇಶವಾಗಿದೆ.























