Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಖಾಸಗಿ ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರ ನೇಮಕಾತಿ : ರಾಜ್ಯ ಸರ್ಕಾರದಿಂದ ಆದೇಶ

---Advertisement---

ಬೆಂಗಳೂರು: ರಾಜ್ಯದ ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕ ಹಾಗೂ ಸುಲಭಗೊಳಿಸಲು ಶಾಲಾ ಶಿಕ್ಷಣ ಇಲಾಖೆಯು ಆನ್‌ಲೈನ್ ತಂತ್ರಾಂಶದ ಮೂಲಕ ಪ್ರಸ್ತಾವನೆಗಳನ್ನು ಸ್ವೀಕರಿಸಲು ಅಗತ್ಯ ಕ್ರಮ ಕೈಗೊಂಡಿದೆ. ದಿನಾಂಕ 05-06-2026 ರಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ವಿಕಾಸ್ ಕಿಶೋರ್ ಸುರಳ್ಕರ್ ಅವರು ಈ ಕುರಿತು ಮಹತ್ವದ ಅಧಿಕೃತ ಜ್ಞಾಪನಾ ಪತ್ರವನ್ನು ಹೊರಡಿಸಿದ್ದಾರೆ.

ದಿನಾಂಕ 01-01-2016 ರಿಂದ 31-12-2020 ರವರೆಗಿನ ಅವಧಿಯಲ್ಲಿ ನಿಧನ, ನಿವೃತ್ತಿ, ರಾಜೀನಾಮೆ ಮತ್ತು ಇತರ ಕಾರಣಗಳಿಂದ ತೆರವಾದ ಹುದ್ದೆಗಳನ್ನು ಆನ್‌ಲೈನ್ ತಂತ್ರಾಂಶದ ಮೂಲಕವೇ ಭರ್ತಿ ಮಾಡಲು ಈ ಮುಂಚೆಯೇ ಸೂಚಿಸಲಾಗಿತ್ತು. ಇದರ ಮುಂದುವರಿದ ಭಾಗವಾಗಿ, 31-12-2015 ರ ಪೂರ್ವದಲ್ಲಿ ನಿಯಮಾನುಸಾರ ಅರ್ಹವಿದ್ದು ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅನುಮತಿ ಕೋರಿ ಆನ್‌ಲೈನ್ ಮೂಲಕ ಪ್ರಸ್ತಾವನೆ ಸಲ್ಲಿಸಲು 15-07-2025 ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಸರ್ಕಾರದ ಇತ್ತೀಚಿನ ಆದೇಶದನ್ವಯ ಪರಿಶಿಷ್ಟ ಜಾತಿಯ (SC) ಒಳಮೀಸಲಾತಿಯನ್ನು ಜಾರಿಗೊಳಿಸಲು ತಂತ್ರಾಂಶದಲ್ಲಿ ಸೂಕ್ತ ಮಾರ್ಪಾಡುಗಳನ್ನು ಮಾಡಲಾಗಿದ್ದು, ಈ ಕೆಳಗಿನ ಪ್ರಮುಖ ನಿಯಮಗಳನ್ನು ಪಾಲಿಸಲು ಸೂಚಿಸಲಾಗಿದೆ.

ಪ್ರವರ್ಗಗಳ ನಮೂದು ಇಲ್ಲದೆ ರೋಸ್ಟರ್ ಸಿದ್ಧತೆ: 400 ಬಿಂದುಗಳ ರೋಸ್ಟರ್‌ನಲ್ಲಿ ಪರಿಶಿಷ್ಟ ಜಾತಿಯ ಯಾವುದೇ ಪ್ರವರ್ಗಗಳನ್ನು (ಪ್ರವರ್ಗ- ಎ, ಬಿ ಮತ್ತು ಸಿ) ನಮೂದಿಸದೇ ಪ್ರಾಥಮಿಕ ಪಟ್ಟಿಯನ್ನು ತಯಾರಿಸಲಾಗಿದೆ. ಹಿಂದಿನ ನೇರ ನೇಮಕಾತಿಯು ಯಾವ ಬಿಂದುವಿನವರೆಗೆ ಮುಕ್ತಾಯಗೊಂಡಿದೆಯೋ, ಅದರ ಮುಂದಿನ ಬಿಂದುವಿನಿಂದ ಹೊಸ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. ಇದೇ ಪದ್ಧತಿ ಸಮತಲ ಮೀಸಲಾತಿಗೂ ಅನ್ವಯಿಸಲಿದೆ.

3 ಕ್ಕಿಂತ ಕಡಿಮೆ ಹುದ್ದೆಗಳಿದ್ದಾಗ: ನೇಮಕಾತಿ ಅಧಿಸೂಚನೆಯಲ್ಲಿ ಪರಿಶಿಷ್ಟ ಜಾತಿಗೆ 3 ಕ್ಕಿಂತ ಕಡಿಮೆ ಹುದ್ದೆಗಳು ಲಭ್ಯವಿದ್ದಲ್ಲಿ, ಲಗತ್ತಿಸಲಾದ 400 ರೋಸ್ಟರ್ ಬಿಂದುಗಳನ್ನು ಯಥಾವತ್ತಾಗಿ ಅನುಸರಿಸಬೇಕು.

3 ಕ್ಕಿಂತ ಹೆಚ್ಚು ಹುದ್ದೆಗಳಿದ್ದಾಗ ಒಳಮೀಸಲಾತಿ ಅನ್ವಯ: ಒಂದು ವೇಳೆ ಪರಿಶಿಷ್ಟ ಜಾತಿಗೆ 3 ಕ್ಕಿಂತ ಹೆಚ್ಚು ಹುದ್ದೆಗಳು ಲಭ್ಯವಿದ್ದಲ್ಲಿ ಒಳಮೀಸಲಾತಿಯನ್ನು ಕಡ್ಡಾಯವಾಗಿ ಅನ್ವಯಿಸಬೇಕು. ಪರಿಶಿಷ್ಟ ಜಾತಿಯ ವಿವಿಧ ಪ್ರವರ್ಗಗಳಿಗೆ ಕ್ರಮವಾಗಿ ಶೇ. 5.25 (ಪ್ರವರ್ಗ-ಎ), ಶೇ. 5.25 (ಪ್ರವರ್ಗ-ಬಿ) ಮತ್ತು ಶೇ. 4.5 (ಪ್ರವರ್ಗ-ಸಿ) ಪ್ರಮಾಣದಲ್ಲಿ ಒಳಮೀಸಲಾತಿ ಹಂಚಿಕೆ ಮಾಡಿ ಪ್ರತ್ಯೇಕವಾಗಿ ರೋಸ್ಟರ್ ನಿರ್ವಹಿಸಬೇಕು.

ಅತ್ಯಂತ ಹಿಂದುಳಿದ ಜಾತಿಗೆ ಆದ್ಯತೆ: ಪ್ರವರ್ಗ-ಸಿ ಅಡಿಯಲ್ಲಿ ಲಭ್ಯವಾಗುವ ಹುದ್ದೆಗಳಲ್ಲಿ ಶೇಕಡಾ 20 ರಷ್ಟು ಹುದ್ದೆಗಳನ್ನು 59 ಅತ್ಯಂತ ಹಿಂದುಳಿದ ಜಾತಿಯವರಿಗೆ ಮೀಸಲಿಡಬೇಕಾಗಿರುವುದರಿಂದ, ರೋಸ್ಟರ್ ಬಿಂದು ಸಂಖ್ಯೆ 3, 20, 37, 54 ಗಳನ್ನು ಕಡ್ಡಾಯವಾಗಿ ಈ 59 ಜಾತಿಗಳಿಗೆ ಮೀಸಲಿಡಬೇಕು. ಒಂದು ವೇಳೆ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಮಾತ್ರ ಪ್ರವರ್ಗ-ಸಿ ನ ಇತರ ಜಾತಿಗಳಿಗೆ ಅವಕಾಶ ನೀಡಲಾಗುವುದು.

ಒಂದೇ ಆಡಳಿತ ಮಂಡಳಿಯ ಅಡಿಯಲ್ಲಿ ನಡೆಯುತ್ತಿರುವ ಶಾಲೆಗಳಲ್ಲಿ 14 ಮತ್ತು ಅದಕ್ಕಿಂತ ಕಡಿಮೆ ಅರ್ಹ ಖಾಲಿ ಹುದ್ದೆಗಳಿದ್ದಲ್ಲಿ ರೋಸ್ಟರ್ ಟೇಬಲ್-1 ರಂತೆ ನಿಯಮ ಪಾಲಿಸಬೇಕು.

ಒಂದು ವೇಳೆ 15 ಮತ್ತು ಅದಕ್ಕಿಂತ ಹೆಚ್ಚು ಅರ್ಹ ಖಾಲಿ ಹುದ್ದೆಗಳು ಲಭ್ಯವಿದ್ದಲ್ಲಿ ರೋಸ್ಟರ್ ಟೇಬಲ್-2 ರ ಪ್ರಕಾರ ಒಳಮೀಸಲಾತಿಯನ್ನು ಅಳವಡಿಸಿ ಹಿಂದಿನ ನೇಮಕಾತಿಯ ಮುಂದಿನ ಬಿಂದುವಿನಿಂದ ಆಯ್ಕೆ ಪ್ರಕ್ರಿಯೆ ನಡೆಸಬೇಕು.

ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರುಗಳು (DDPI) ತಮ್ಮ ವ್ಯಾಪ್ತಿಯ ಖಾಸಗಿ ಅನುದಾನಿತ ಪ್ರೌಢಶಾಲಾ ಆಡಳಿತ ಮಂಡಳಿಗಳ ಗಮನಕ್ಕೆ ಈ ನಿಯಮಗಳನ್ನು ತರಬೇಕು ಹಾಗೂ ನಿಯಮಾನುಸಾರ ಪರಿಷ್ಕೃತ ರೋಸ್ಟರ್ ಬಿಂದುಗಳನ್ನು ನಿಗದಿಪಡಿಸಿ, ಅನುಮೋದಿತ ಪ್ರಸ್ತಾವನೆಗಳನ್ನು ಆನ್‌ಲೈನ್ ತಂತ್ರಾಂಶದಲ್ಲಿ ಇಂದೀಕರಿಸಲು (ಅಪ್‌ಲೋಡ್ ಮಾಡಲು) ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಯುಕ್ತರು ತಮ್ಮ ಆದೇಶದಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now