ಬೆಂಗಳೂರು.ಜುಲೈ.13: ದೇಶದ ವಿವಿಧೆಡೆ ಹಾಗೂ ರಾಜ್ಯದ ಮುಜರಾಯಿ ದೇವಾಲಯಗಳ ಹುಂಡಿಗಳಲ್ಲಿ ಕಳ್ಳತನ, ಲೆಕ್ಕಪತ್ರ ನಿರ್ವಹಣೆಯಲ್ಲಿ ಲೋಪ ಹಾಗೂ ಹಣ ದುರುಪಯೋಗವಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಕಾಯ್ದುಕೊಳ್ಳಲು ಕಂದಾಯ ಇಲಾಖೆಯು 19 ಅಂಶಗಳ ನೂತನ ಪ್ರಮಾಣಿತ ಕಾರ್ಯವಿಧಾನ (SOP) ಮಾರ್ಗಸೂಚಿಗಳನ್ನು ಹೊರಡಿಸಿದೆ.
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು ಈ ಕುರಿತು ಸುತ್ತೋಲೆ ಹೊರಡಿಸಿದ್ದು, ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಹಾಗೂ ಮುಜರಾಯಿ ತಹಶೀಲ್ದಾರರು ಕಡ್ಡಾಯವಾಗಿ ಇದನ್ನು ಜಾರಿಗೊಳಿಸುವಂತೆ ಸೂಚಿಸಿದ್ದಾರೆ.
ದೇವಸ್ಥಾನಗಳ ಆಯಕಟ್ಟಿನ ಜಾಗಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ವೆಬ್ ಕ್ಯಾಮೆರಾಗಳನ್ನು ಅಳವಡಿಸಬೇಕು ಮತ್ತು ಈ ಕ್ಯಾಮೆರಾಗಳನ್ನು ಜಿಲ್ಲಾಧಿಕಾರಿಗಳ ಕಚೇರಿಯ ಮುಜರಾಯಿ ವಿಭಾಗದಿಂದ ಮಾನಿಟರ್ ಮಾಡಬೇಕು. ಭದ್ರತೆಯ ಹಿತದೃಷ್ಟಿಯಿಂದ ಸಿಸಿಟಿವಿ ಲೈವ್ ಫೀಡ್ ಅನ್ನು ಸ್ಥಳೀಯ ಪೊಲೀಸ್ ಠಾಣೆ ಅಥವಾ ಪೊಲೀಸ್ ನಿಯಂತ್ರಣ ಕೊಠಡಿಯ ಡ್ಯಾಶ್ಬೋರ್ಡ್ಗೆ ಸಂಪರ್ಕಿಸಬೇಕು. ಹುಂಡಿ ಹಣ ಎಣಿಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣ ಮಾಡುವುದು ಕಡ್ಡಾಯವಾಗಿದೆ.
ಡಿಜಿಟಲ್ ಪಾವತಿಯನ್ನು ಉತ್ತೇಜಿಸಲು ಕೇವಲ ಹುಂಡಿ ಇರುವ ಕಡೆ ಮಾತ್ರ ಕರಾರುವಾಕ್ಕಾಗಿ ಬ್ಯಾಂಕ್ ವಿವರಗಳಿರುವ ಕ್ಯೂಆರ್ ಕೋಡ್ (QR Code) ಅಳವಡಿಸಬೇಕು. ಬೇರೆಡೆಯೂ ಕ್ಯೂಆರ್ ಕೋಡ್ ದುರುಪಯೋಗವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಹುಂಡಿ ಎಣಿಕೆ ಕಾರ್ಯಕ್ಕೆ ಸಾರ್ವಜನಿಕರ ಬದಲಾಗಿ ಕಡ್ಡಾಯವಾಗಿ ಗೃಹ ರಕ್ಷಕ ದಳ, ಬ್ಯಾಂಕ್ ಸಿಬ್ಬಂದಿ ಅಥವಾ ಸರ್ಕಾರಿ ನೌಕರರನ್ನು ಬಳಸಿಕೊಳ್ಳಬೇಕು. ಎಣಿಕೆ ಸಮಯದಲ್ಲಿ ಹಾಜರಿರುವ ಸಿಬ್ಬಂದಿಯ ಮುಖ ಗುರುತಿಸುವಿಕೆಗೆ ‘ಫೇಸ್ ರೆಕಗ್ನಿಷನ್’ ವ್ಯವಸ್ಥೆ ಬಳಸಬೇಕು. ಒಂದು ವೇಳೆ ಹುಂಡಿಗಳಲ್ಲಿ ಕಳ್ಳತನ ಅಥವಾ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ದೇವಸ್ಥಾನದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.
ಸ್ಥಳೀಯ ಕಂದಾಯ, ಪೊಲೀಸ್ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಕನಿಷ್ಠ 15 ದಿನಗಳಿಗೊಮ್ಮೆ ಜಂಟಿಯಾಗಿ ದೇವಸ್ಥಾನಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಲ್ಲದೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ರಚಿಸಿ ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಆದೇಶಿಸಲಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.








