ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಮೇ. 02 : ನಗರದ ಆರಾಧ್ಯ ದೈವವಾದ ಶ್ರೀ ವೀರಭದ್ರ ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ರಥೋತ್ಸವವು ಶನಿವಾರ ಸಂಜೆ 5.15ರ ವೇಳೆಗೆ ಅಪಾರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಹಾಗೂ ಶ್ರದ್ಧಾಭಕ್ತಿಯಿಂದ ಜರುಗಿತು.

ವೀರಭದ್ರಸ್ವಾಮಿಗೆ ಬೃಹತ್ ಹೂವಿನ ಹಾರಗಳು, ಬಣ್ಣ ಬಣ್ಣದ ಬಾವುಟಗಳಿಂದ ಅಲಂಕರಿಸಲ್ಪಟ್ಟ ಭವ್ಯ ರಥದಲ್ಲಿ ದೇವರನ್ನು ಆಸೀನಗೊಳಿಸಿ ಪೂಜೆ ಸಲ್ಲಿಸಿದ ಬಳಿಕ ಜಯಘೋಷಗಳ ಮಧ್ಯೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ರಥವು ನಗರದ ತೇರು ಬೀದಿಯಲ್ಲಿ ಗಾಂಭೀರ್ಯದಿಂದ ಸಾಗಿತು. ಸಾವಿರಾರು ಭಕ್ತರು ಭಕ್ತಿಭಾವದಿಂದ ಭಾಗವಹಿಸಿದರು.
ರಥೋತ್ಸವದ ಮುಂಭಾಗದಲ್ಲಿ ಮಂಗಳವಾದ್ಯಗಳು, ಕರಡಿ ಮಜಲು, ನಂದಿಕೋಲು, ಕೋಲಾಟ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ತಂದವು. ಭಕ್ತರು “ಸ್ವಾಮಿಗೆ ಜಯಕಾರ” ಕೂಗುತ್ತಾ ಸೂರುಬೆಲ್ಲ, ಮೆಣಸು, ಬಾಳೆಹಣ್ಣುಗಳನ್ನು ತೇರಿಗೆ ಎಸೆಯುವ ಮೂಲಕ ತಮ್ಮ ಹರಕೆಗಳನ್ನು ಸಲ್ಲಿಸಿ ಭಕ್ತಿ ಭಾವ ವ್ಯಕ್ತಪಡಿಸಿದರು.
ಜಾತ್ರೆಯ ವಿಶೇಷ ಆಕರ್ಷಣೆಯಾಗಿರುವ “ಮುಕ್ತಿ ಬಾವುಟ” ಹರಾಜು ಪ್ರಕ್ರಿಯೆಯೂ ಭಾರೀ ಕುತೂಹಲಕ್ಕೆ ಕಾರಣವಾಯಿತು. ಈ ವೇಳೆ ನಗರದ ವಾಣಿಜ್ಯೋದ್ಯಮಿ ಎಸ್. ರುದ್ರಮನಿಯಪ್ಪ 9ಲಕ್ಷ ರೂಪಾಯಿಗೆ ಬಿಡ್ ಮಾಡುವ ಮೂಲಕ ಮುಕ್ತಿ ಬಾವುಟವನ್ನು ತಮ್ಮದಾಗಿಸಿಕೊಂಡರು. ಈ ಸಂದರ್ಭ ಭಕ್ತರು ಜಯಘೋಷಗಳ ಮೂಲಕ ಸಂಭ್ರಮ ವ್ಯಕ್ತಪಡಿಸಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಮೇ 6ರಿಂದ ಸೂಜಿಮಲ್ಲೇಶ್ವರ ನಗರದಲ್ಲಿ ಒಂದು ವಾರದ ದನಗಳ ಜಾತ್ರೆ ನಡೆಯಲಿದೆ. ದನಗಳಿಗೆ ಕುಡಿಯುವ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡಲಾಗಿದ್ದು, ರೈತರು ತಮ್ಮ ದನಗಳೊಂದಿಗೆ ಮೇವು ತರಬೇಕೆಂದು ದೇವಸ್ಥಾನ ಸಮಿತಿ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಶಾಸಕ ಟಿ ರಘುಮೂರ್ತಿ ವೀರಭದ್ರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.




















