ಸುದ್ದಿಒನ್, ಚಿತ್ರದುರ್ಗ(ನ. 26) : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ಬಡಜನರ, ಅಸಹಾಯಕರ, ನಿರ್ಗತಿಕರ, ಅಭ್ಯುದ್ಯಯಕ್ಕಾಗಿ ನಿರಂತರ ಶ್ರಮಿಸುತ್ತಿದ್ದಾರೆ ಎಂದು ಬಸವೇಶ್ವರ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ವಿ.ಕೆ.ಶಂಕ್ರಪ್ಪ ಹೇಳಿದರು.
ಬಸವೇಶ್ವರ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಡಾ.ವಿರೇಂದ್ರ ಹೆಗ್ಗೆಡೆಯವರ 78ನೇ ಜನ್ಮದಿನಾಚರಣೆ ಸಮಾರಂಭವನ್ನು ಚಾಲನೆ ನೀಡಿ ಮಾತನಾಡಿದರು. ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಧರ್ಮಾಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮೂಲಕ ವಿಕಲಚೇತನರ, ಮಹಿಳೆಯರ, ಅನಾಥಮಕ್ಕಳ, ದೇವಸ್ಥಾನಗಳಿಗೆ ಅಪಾರ ಪ್ರಮಾಣದ ನೆರವು ನೀಡಿ, ನಿರಂತರವಾಗಿ ಪ್ರೋತ್ಸಾಹ ನೀಡಿಕೊಂಡು ಬರುತ್ತಿದ್ದಾರೆ. ಅವರ ಸೇವೆ ಸದಾ ಕಾಲ ಸ್ಮರಣೀಯ ಮತ್ತು ಶ್ಲಾಘನೀಯ ಎಂದು ಹೇಳಿದರು.
ರೈತ ಸಂಘದ ಮುಖಂಡರಾದ ಶ್ರೀಮತಿ ಶಾಂತಾ ಅವರು ಮಾತನಾಡಿ, ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಯೋಜನೆಯ ಮೂಲಕ ಸ್ವಸಹಾಯ ಸಂಘಗಳನ್ನು ರೂಪಿಸಿ, ಮಹಿಳೆಯರಿಗೆ ಸಹಕಾರ ನೀಡುತ್ತಿರುವುದು ನಿಜಕ್ಕೂ ಲಕ್ಷಾಂತರ ಕುಟುಂಬಗಳು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅನ್ನದಾಸೋಹ, ರೈತರಿಗಾಗಿ ಕೃಷಿ ಮೇಳ, ದೇವಸ್ಥಾನಗಳ ಪುನರ್ ನಿರ್ಮಾಣಕ್ಕೆ ಆರ್ಥಿಕ ನೆರವು, ಶಿಕ್ಷಣ, ಆರೋಗ್ಯ ಸೇವೆಗಳನ್ನು ನಿರಂತರವಾಗಿ ಕೈಗೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ ಎಂದು ನುಡಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಸಿ.ಬಿ.ನಾಗರಾಜ ಅವರು ಮಾತನಾಡಿ, ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ನಿರಂತರವಾಗಿ ಅಪಾರ ಸೇವೆಯನ್ನು ಮಾಡುತ್ತಿದ್ದು, ಕೋಟ್ಯಾಂತರ ಭಕ್ತರನ್ನು ಹೊಂದಿದ್ದಾರೆ. ಅವರ ಸೇವೆ ಧರ್ಮಸ್ಥಳ ಕ್ಷೇತ್ರದಲ್ಲಿ ಅವಿಸ್ಮರಣೀಯವಾಗಿದೆ. ಹಾಗಾಗಿ ನಾಡಿನ ಮತ್ತು ದೇಶದ ಭಕ್ತರು ಅವರನ್ನು ಹಗಲಿರುಳು ಸ್ಮರಿಸುವಂತಹ ಕೆಲಸವನ್ನು ಮಾಡುವ ಮೂಲಕ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ ಎಂದು ಹೇಳಿದರು.
ಸಮಾರಂಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜಿಲ್ಲಾ ವ್ಯವಸ್ಥಾಪಕರಾದ ಕಮಲಾಕ್ಷ, ಸಿರಿಗೆರೆ ಉಪವಿಭಾಗದ ವ್ಯವಸ್ಥಾಪಕ ರವಿಚಂದ್ರನ್, ಯೋಜನಾಧಿಕಾರಿ ಮಮತಾ ಭಟ್, ರಾಜು, ಹಿರಿಯ ಪತ್ರಕರ್ತರಾದ ನರೇನಹಳ್ಳಿ ಅರುಣ್‍ಕುಮಾರ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬಸವೇಶ್ವರ ವಿದ್ಯಾಸಂಸ್ಥೆಯ ಮಕ್ಕಳ ಭೋಜನಕ್ಕಾಗಿ ಯೋಜನಾ ಸಿಬ್ಬಂಧಿಗಳು ಟೇಬಲ್‍ಗಳನ್ನು ವಿತರಣೆಮಾಡಿದರು.
