ಚಿತ್ರದುರ್ಗ, (ಫೆ.24) : ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಬುಧವಾರ ಮಂಡಿಸಿರುವ ಅಯವ್ಯಯದಲ್ಲಿ ನೂತನ ಪಿಂಚಣಿ ವ್ಯವಸ್ಥೆ ಜಾರಿಗೆ ತರುವುದಾಗಿ ಘೋಷಿಸಿರುವ ಮಾದರಿಯಲ್ಲಿ ರಾಜ್ಯದಲ್ಲೂ ಅನುಸರಿಸಬೇಕೆಂದು
ಚಿತ್ರದುರ್ಗ ಎನ್.ಪಿ.ಎಸ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ.ಎಸ್.ಆರ್.ಲೇಪಾಕ್ಷ ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರವು ದಿನಾಂಕ:01-04-2006 ರಿಂದ ರಾಜ್ಯ ಸರ್ಕಾರಿ ನೌಕರಿಗೆ ಮಂತಿಗೆ ಆಧಾರಿತ ನೂತನ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ. ಇದು ಷೇರು ಮಾರುಕಟ್ಟೆ ಆಧಾರಿತ ಪಿಂಚಣಿ ವ್ಯವಸ್ಥೆಯಾಗಿದ್ದು, ಇದರಿಂದ ನೌಕರರು ರೂ.1000, 1500 ಪಿಂಚಣಿ ದೊರೆಯುವಂತಾಗಿದೆ.
ಆದುದರಿಂದ ನೂತನ ಪಿಂಚಣಿಗೆ ಒಳಪಡುವ ಸುಮಾರು 250000 ನೌಕರರನ್ನು ಪ್ರತಿನಿಧಿಸುವ ಕರ್ನಾಟಕ ರಾಜ್ಯ ಸರ್ಕಾರಿ (ಎನ್.ಪಿ.ಎಸ್) ನೌಕರರ ಸಂಘವು ಹಳೆ ಪಿಂಚಣಿಗಾಗಿ ನಿರಂತರ ಹೋರಾಟ ನಡೆಸುತ್ತಿದೆ.
ರಾಷ್ಟ್ರಮಟ್ಟದಲ್ಲಿ ಸಂಘಟನೆಯ ಹೋರಾಟಕ್ಕೆ ಮಣಿದ ರಾಜಸ್ತಾನ ಸರ್ಕಾರವು ಈ ದಿನ ತನ್ನ ಬಜೆಟ್‌ನಲ್ಲಿ ನೂತನ ಪಿಂಚಣಿ (ಎನ್.ಪಿ.ಎಸ್) ಯೋಜನೆಯನ್ನು ರದ್ದುಪಡಿಸಿ, ಹಳೆ ಪಿಂಚಣಿ (ಒ.ಪಿ.ಎಸ್) ಯನ್ನು ಪುನರ್ ಸ್ಥಾಪಿಸಿದೆ.
ರಾಜಸ್ಥಾನ ಸರ್ಕಾರದ ಈ ಕ್ರಮವನ್ನು ಸಂಘವು ಸ್ವಾಗತಿಸುತ್ತದೆ. ಕರ್ನಾಟಕ ಸರ್ಕಾರವು ಈ ಯೋಜನೆಯನ್ನು ಈ ಬಜೆಟ್‌ನಲ್ಲಿ ರದ್ದುಗೊಳಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ (ಎನ್.ಪಿ.ಎಸ್) ನೌಕರರ ಸಂಘವು ಒತ್ತಾಯಿಸುತ್ತದೆ.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬೆಳಗಾವಿ ಅಧಿವೇಶನ ನಡೆದಾಗ ಮಾಜಿ ಸಿಎಂ ಯಡಿಯೂರಪ್ಪ ಸೇರಿ ಬಿಜೆಪಿಯ ಬಹುತೇಕ ಶಾಸಕರು ಎನ್.ಪಿ.ಎಸ್ ರದ್ದು ಮಾಡುವಂತೆ ಒತ್ತಡ ತಂದಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿ ಆದಾಗ ಎನ್.ಪಿ.ಎಸ್ ರದ್ದತಿಗೆ ಸಂಬಂಧಿಸಿದಂತೆ ಅಧ್ಯಯನಕ್ಕಾಗಿ ಅಧಿಕಾರಿಗಳ ಸಮಿತಿ ರಚನೆ ಮಾಡಿದ್ದರು.
ಆದರೆ, ಅಧಿಕಾರಿಗಳ ಸಮಿತಿ ಇದುವರೆಗೂ ಒಂದೇ ಒಂದು ಸಭೆ ನಡೆಸಲಿಲ್ಲ. ಮುಖ್ಯಮಂತ್ರಿಗಳ ಸೂಚನೆಯನ್ನು ಪಾಲಿಸದೇ ನಿರ್ಲಕ್ಷ್ಯ ತೋರಿಸಿತ್ತು. ಇದೀಗ ರಾಜಸ್ಥಾನದಲ್ಲಿ ಎನ್.ಪಿ.ಎಸ್ ರದ್ದು ಮಾಡುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಮಾದರಿಯಲ್ಲಿಯೇ ಸಿಎಂ ಬಸವರಾಜ ಬೊಮ್ಮಾಯಿ ರವರು ಮಾರ್ಚ್ 4ರಂದು ಮಂಡಿಸಲಿರುವ ಬಜೆಟ್‌ನಲ್ಲಿ ರಾಜ್ಯದಲ್ಲಿ ಎನ್.ಪಿ.ಎಸ್ ರದ್ದು ಮಾಡಬೇಕೆಂದು ಎನ್.ಪಿ.ಎಸ್ ನೌಕರರ ಸಂಘವು ಪ್ರಕಟಣೆಯಲ್ಲಿ ಮನವಿ ಮಾಡಿದೆ.