Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶಿಕ್ಷಣ ಮತ್ತು ಆಧುನಿಕತೆಯಿಂದ ಸಮಾಜದ ಪ್ರಗತಿ ಸಾಧ್ಯ : ಎಡಿಸಿ ಬಿ.ಟಿ.ಕುಮಾರಸ್ವಾಮಿ

---Advertisement---

 

ಚಿತ್ರದುರ್ಗ.ಜ.27: ಸವಿತಾ ಸಮಾಜವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರಬಹುದು, ಆದರೆ ಅದನ್ನು ಮೆಟ್ಟಿ ನಿಲ್ಲಲು ‘ಶಿಕ್ಷಣ’ ಒಂದೇ ದಾರಿ. ಪೋಷಕರು ತಮ್ಮ ಮಕ್ಕಳನ್ನು ಕನಿಷ್ಠ ಪದವಿವರೆಗೆ ಓದಿಸಲೇಬೇಕು. ಸರ್ಕಾರಿ ಸವಲತ್ತುಗಳು, ಹಾಸ್ಟೆಲ್ ಸೌಲಭ್ಯಗಳು ಮತ್ತು ಮೀಸಲಾತಿಯನ್ನು ಬಳಸಿಕೊಂಡು ಮಕ್ಕಳು ಉನ್ನತ ಮಟ್ಟದ ಶಿಕ್ಷಣ ಪಡೆಯುಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸವಿತಾ ಮಹರ್ಷಿ ಜಯಂತಿಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

 

ಸವಿತಾ ಸಮಾಜವು ಕೇವಲ ಒಂದು ಸಮುದಾಯವಲ್ಲ, ಅದು ಇಡೀ ಸಮಾಜಕ್ಕೆ ಸೌಂದರ್ಯ ಮತ್ತು ಶುಚಿತ್ವ ನೀಡುವ ಶ್ರಮಜೀವಿಗಳ ಸಮೂಹ. ಸವಿತಾ ಸಮಾಜದ ಅವಿರತ ಶ್ರಮದಿಂದಾಗಿ ನಾವೆಲ್ಲರೂ ಸುಂದರವಾಗಿ ಕಾಣುತ್ತೇವೆ. ಕುಲವೃತ್ತಿಯ ಬಗ್ಗೆ ಕೀಳರಿಮೆ ಬೇಡ. ಆದರೆ, ಮಾಡುವ ಕೆಲಸದಲ್ಲಿ ವೃತ್ತಿಪರತೆ ಇರಲಿ, ಸಾಂಪ್ರದಾಯಿಕ ಕಸುಬಿಗೆ ಆಧುನಿಕತೆಯ ಸ್ಪರ್ಶ ನೀಡಿ ಉದ್ಯಮವನ್ನಾಗಿ ಪರಿವರ್ತಿಸಬೇಕು ಆಧುನಿಕ ತಂತ್ರಜ್ಞಾನ ಮತ್ತು ನವೀನ ಶೈಲಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಹತ್ತು ಜನರಿಗೆ ಕೆಲಸ ಕೊಡುವ ಮಟ್ಟಕ್ಕೆ ಸಮಾಜದ ಯುವಕರು ಬೆಳೆಯಬೇಕು. ಸರ್ಕಾರದ ವಿವಿಧ ಸಾಲ ಸೌಲಭ್ಯಗಳು ಮತ್ತು ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಸವಿತಾ ಸಮಾಜದ ಪ್ರತಿಯೊಬ್ಬರೂ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಣದತ್ತ ಗಮನಹರಿಸಿ, ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಆಶಿಸಿದರು.

 

ಕನ್ನಡ ಸಂಪಿಗೆ ದಿನಪತ್ರಿಕೆಯ ಸಂಪಾದಕ ಟಿ.ತಿಪ್ಪೇಸ್ವಾಮಿ ಉಪನ್ಯಾಸ ನೀಡಿ, ಮನುಷ್ಯನನ್ನು ಸುಂದರಗೊಳಿಸುವ ಕಾಯಕದ ಮೂಲಕ ಸವಿತಾ ಸಮಾಜವು ಜಗತ್ತಿಗೆ ಶ್ರೇಷ್ಠ ಕೊಡುಗೆ ನೀಡುತ್ತಿದೆ. ಸವಿತಾ ಸಮಾಜದ ಸೇವೆಯು ಕೇವಲ ಉದ್ಯೋಗವಲ್ಲ, ಅದು ಮನುಷ್ಯನ ಜೀವನದ ಮೂರು ಹಂತಗಳಾದ ಜನನ, ವಿವಾಹ ಮತ್ತು ಮರಣದಲ್ಲಿ ಹಾಸುಹೊಕ್ಕಿರುವ ಪವಿತ್ರ ಕಾಯಕವಾಗಿದೆ. ಹುಟ್ಟಿದ ಮಗುವಿನ ಚೌಲ ಕರ್ಮದಿಂದ ಹಿಡಿದು, ಮರಣದ ನಂತರ ಮೋಕ್ಷಕ್ಕೆ ದಾರಿಯಾಗುವ ಅಂತ್ಯಸಂಸ್ಕಾರದ ವಿಧಿಗಳವರೆಗೆ ಈ ಸಮಾಜದ ಸೇವೆ ಅನಿವಾರ್ಯವಾಗಿದೆ ಎಂದು ತಿಳಿಸಿದರು.

 

ಬ್ರಹ್ಮನ ಎಡಗಣ್ಣಿನಿಂದ ಉದ್ಭವಿಸಿದ ಸವಿತಾ ಮಹರ್ಷಿಗಳು ಸಾಮವೇದವನ್ನು ರಚಿಸಿದವರು. ದೇವತೆಗಳ ಯಜ್ಞ-ಯಾಗಾದಿ ಸಂದರ್ಭದಲ್ಲಿ ಅವರಿಗೆ ಸಂಸ್ಕಾರ ನೀಡಿದ ಕಾರಣಕ್ಕಾಗಿ ಇವರಿಗೆ ಆಯುರ್ವೇದ, ಸಂಗೀತ ಮತ್ತು ಕುಲಕಸುಬಿನ ಮೂರು ವರಗಳು ಲಭಿಸಿವೆ ಎಂದು ಪುರಾಣಗಳ ಹಿನ್ನೆಲೆಯನ್ನು ಟಿ.ತಿಪ್ಪೇಸ್ವಾಮಿ ಸ್ಮರಿಸಿದರು.

 

ದೇಶವನ್ನು ಸುದೀರ್ಘ ಕಾಲ ಆಳಿದ ನಂದ ರಾಜವಂಶವು ಸವಿತಾ ಸಮಾಜಕ್ಕೆ ಸೇರಿದೆ. ಅಲ್ಲದೆ, 12ನೇ ಶತಮಾನದ ಶರಣ ಹಡಪದ ಅಪ್ಪಣ್ಣನವರು ಬಸವಣ್ಣನವರ ನಂಬಿಕಸ್ತ ಆಪ್ತರಾಗಿ ಮತ್ತು ಆರ್ಥಿಕ ಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಬಿಜ್ಜಳ ಮಹಾರಾಜರು ಕಳಚೂರಿ ವಂಶಕ್ಕೆ ಸೇರಿದವರಾಗಿದ್ದು, ಬಸವಣ್ಣನವರಿಗೆ ರಾಜಾಶ್ರಯ ನೀಡಿ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಸಹಕರಿಸಿದ್ದರು.ಇಂದಿಗೂ ಸವಿತಾ ಸಮಾಜವು ಆಯುರ್ವೇದ, ಸಂಗೀತ ಮತ್ತು ಕಲೆಗಳ ಮೂಲಕ ಜನಸೇವೆಯಲ್ಲಿ ತೊಡಗಿದ್ದು, ಸವಿತಾ ಮಹರ್ಷಿಗಳ ಆದರ್ಶಗಳನ್ನು ಮೈಗೂಡಿಸಿಕೊಂಡಿದೆ ಎಂದು ಟಿ.ತಿಪ್ಪೇಸ್ವಾಮಿ ತಿಳಿಸಿದರು.

 

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‌ಪೀರ್ ಮಾತನಾಡಿ ಕ್ಷೌರಿಕ ಕೆಲಸದ ಬಗ್ಗೆ ಎಲ್ಲರಲ್ಲೂ ಗೌರವ ಭಾವನೆ ಮೂಡಬೇಕು. ಕ್ಷೌರಿಕರು ಸಮಾಜದಲ್ಲಿ ಎರಡನೇ ವೈದ್ಯರಿದ್ದ ಹಾಗೆ. ಪತ್ರಿಯೊಬ್ಬರ ಅಶುಚಿತ್ವವನ್ನು ನಿವಾರಿಸಿ ಮನುಷ್ಯರನ್ನಾಗಿ ಮಾಡುತ್ತಾರೆ. ಎಲ್ಲಾ ಧರ್ಮಗಳಲ್ಲಿಯೂ ಪವಿತ್ರ ಸ್ಥಳಗಳಿಗೆ ಭೇಟಿ ನೀಡಿದಾಗ ತಲೆಗೂದಲು ನೀಡುವ ಸಂಪ್ರದಾಯವಿದೆ. ವಿಶ್ವದ ಎಲ್ಲಡೆಯೂ ಕ್ಷೌರಿಕ ವೃತ್ತಿ ಕಂಡುಬರುತ್ತದೆ ಎಂದರು.

ಹಿಂದುಳಿದ ವರ್ಗಗಳ ಜಿಲ್ಲಾ ಅಧ್ಯಕ್ಷ ಎನ್.ಡಿ.ಕುಮಾರ ಮಾತನಾಡಿ ಸರ್ಕಾರ ಸವಿತಾ ಸಮಾಜದ ಜಾತಿ ನಿಂದನೆ ತಡೆಯಲು ಕಟ್ಟುನಿಟ್ಟಿನ ಕಾಯ್ದೆ ಜಾರಿ ಮಾಡಬೇಕು. ಸವಿತಾ ಸಮಾಜವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್ ಪ್ರಸ್ತಾವಿಕವಾಗಿ ಮಾತನಾಡಿ, ಎಲ್ಲರನ್ನೂ ಸ್ವಾಗತಿಸಿದರು. ಸುರೇಂದ್ರನಾಥ ಮತ್ತು ತಂಡ ನಾಡಗೀತೆ ಹಾಡುವುದರೊಂದಿಗೆ ಗೀತಗಾಯನ ಪ್ರಸ್ತುತ ಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್, ಸವಿತಾ ಸಮಾಜದ ಗೌರವಾಧ್ಯಕ್ಷ ಜಿ ಎನ್ ಲಿಂಗರಾಜು. ಕಾರ್ಯಧ್ಯಕ್ಷ ಏನ್ ಶ್ರೀನಿವಾಸ್. ಲಾಯರ್ ಸಾಯಿನಾಥ್. ತಾಲೂಕ ಅಧ್ಯಕ್ಷ ಆರ್ ಶ್ರೀನಿವಾಸ್. ನಗರಸಭೆ ಮಾಜಿ ಸದಸ್ಯ ನಾಗರಾಜ್. ಘಟಕದ ಅಧ್ಯಕ್ಷ ರಂಜಿತ್, ಶ್ಯಾಮ್, ಹನುಮಂತಪ್ಪ ಮದಕರಿಪುರ,  ಧರ್ಮಣ್ಣ ಬಾಬು,  ಶ್ರೀನಿವಾಸ್,  ಗೋಲ್ಡನ್ ವೆಂಕಟೇಶ್, ಭರಮಸಾಗರ ಶಿವು,  ಪಲ್ಲವಿ ಪ್ರಸನ್ನ, ಸಂತೋಷ ಮತ್ತಿತರರು ಮುಂತಾದವರು ಭಾಗವಹಿಸಿದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now