ಮೈಸೂರು: ರಾಜ್ಯದಲ್ಲಿ ಸಿಎಂ ಕುರ್ಚಿ ಬದಲಾಗುತ್ತೆ ಎಂಬ ಮಾತು ಇಂದು ನಿನ್ನೆಯದಲ್ಲ. ಕಾಂಗ್ರೆಸ್ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದಾಗಿನಿಂದ ಸಿಎಂ ಖುರ್ಚಿಗೆ ಕಾದಾಟ ನಡೆಯುತ್ತಲೇ ಇದೆ. ಸಿದ್ದರಾಮಯ್ಯ ತಮ್ಮ ಹುದ್ದೆಯನ್ನ ಬಿಟ್ಟುಕೊಟ್ಟರೆ ನೆಕ್ಸ್ಟ್ ಮೂಮೆಂಟ್ ಡಿಕೆ ಶಿವಕುಮಾರ್ ಅವರು ಸಿಎಂ ಆಗ್ತಾರೆ ಎಂಬುದೇ ಗಟ್ಟಿ ಮಾತು. ಆದರೆ ಇದೀಗ ವಿಧಾನ ಪರಿಷತ್ ಸದಸ್ಯರಾದ ಹೆಚ್.ವಿಶ್ವನಾಥ್ ಅವರು ಸಿಎಂ ಆಗಲಿರುವ ಇನ್ನೊಬ್ಬರ ಹೆಸರನ್ನು ಹೇಳಿದ್ದಾರೆ.
ಸಿಎಂ ಬದಲಾವಣೆಯ ಬಗ್ಗೆ ಮಾತನಾಡಿದ್ದ ವಿಶ್ವನಾಥ್ ಅವರು, ನವೆಂಬರ್ ನಲ್ಲಿ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರು ಇಳಿಯೋದು ಗ್ಯಾರಂಟಿ. ಮಲ್ಲಿಕಾರ್ಜುನ ಖರ್ಗೆ ಅಥವಾ ಡಿಕೆ ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ನವೆಂಬರ್ ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಆಗಿ ಉಳಿಯುವುದಿಲ್ಲ ಎಂದಿದ್ದಾರೆ.
ಇದೆ ವೇಳೆ ಜಾತಿಗಣತಿ ವಿಚಾರಕ್ಕೆ ಮಾತನಾಡಿದ್ದು, ಸಿದ್ದರಾಮಯ್ಯ ಅವರು ಹತ್ತು ವರ್ಷದ ಹಿಂದೆಯೇ ಜಾತಿವಾರು ಗಣತಿಯನ್ನು ಮಾಡಿಸಿದ್ದರು. ಒಂದೂವರೆ ಲಕ್ಷ ಶಿಕ್ಷಕರು ಎರಡೂವರೆ ವರ್ಷ ಜಾತಿಗಣತಿ ಮಾಡಿದ್ದರು. ಅದಕ್ಕೋಸ್ಕರ 170 ಕೋಟಿಗೂ ಅಧಿಕ ಹಣ ಖರ್ಚಾಗಿತ್ತು. ಅಂದಿನಿಂದ ಜಾತಿಗಣತಿಯನ್ನ ಗುಟ್ಟಾಗಿಯೇ ಇಟ್ಟುಕೊಂಡಿದ್ದರು. ಈಗ ಹೈಕಮಾಂಡ್ ಹೆದರಿಕೊಂಡು ಮತ್ತೆ ಜಾತಿಗಣತಿ ಮಾಡಿರುವುದಾಗಿ ಹೇಳಿದ್ದಾರೆ. ಇದು ಹೇಗೆ ತಾನೇ ಸಾಧ್ಯ..? ಜಾತಿಗಣತಿ ಮಾಡಲು ಶಿಕ್ಷಕರು ಬೇಕೆ ಬೇಕು. ಈಗಾ ತಾನೇ ಶಾಲೆ ಆರಂಭವಾಗಿದೆ. ಶಿಕ್ಷಕರು ಲಭ್ಯವಿರುವುದಕ್ಕೆ ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾವಾಡಿಗನ ರೀತಿ ಮತ್ತೆ ಜಾತಿಗಣತಿ ಮಾಡಿಸುವುದಾಗಿ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಹೆಚ್. ವಿಶ್ವನಾಥ್ ಗದಾಪ್ರಹಾರ ಮಾಡಿದ್ದಾರೆ.






