ಮೈಸೂರು: ಇಲ್ಲಿನ ರಾಜಕುಮಾರಿ ರಸ್ತೆಗೆ ಸಿಎಂ ಸಿದ್ದರಾಮಯ್ಯ ಅವರ ಹೆಸರಿಡಬೇಕು ಎಂಬ ವಿಚಾರ ದೊಡ್ಡಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಇತಿಹಾಸ ತಜ್ಞರಾದ ನಂಜರಾಜೇ ಅರಸರು ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಅವರೇ ನನ್ನ ಹೆಸರನ್ನು ಇಡಬೇಡಿ ಎಂದು ಹೇಳುವ ಕಾಲ ಬರುತ್ತದೆ ಎಂದಿದ್ದಾರೆ.

ಮಾಧ್ಯಮದವರ ಜೊತೆಗೆ ಮಾತನಾಡಿ, ಹೊರಗಡೆಯಿಂದ ಮೈಸೂರಿಗೆ ಬರುವ ಅಧಿಕಾರಿಗಳಿಗೆ, ಕೆಲವು ವೃತ್ತಿ ನಿರತ ರಾಜಕಾರಣಿಗಳಿಗೆ, ಸ್ವಾರ್ಥಿಗಳಿಗೆ ಮೈಸೂರಿನ ಇತಿಹಾಸ, ಸಂಸ್ಕೃತಿ, ಪರಂಪರೆ ಗೊತ್ತಿರಲ್ಲ. ಅವರೇನೋ ತೀರ್ಮಾನ ಮಾಡ್ತಾರೆ. ನಾವೂ ಮೈಸೂರಿನ ನಾಗರಿಕರಾಗಿ, ಮೈಸೂರಿನ ಗೌರವ ಉಳಿಯಬೇಕು ಎನ್ನುವ ದೃಷ್ಟಿಯಿಂದ, ಪ್ರಿನ್ಸೆಸ್ ರಸ್ತೆ ಬಗ್ಗೆ ಅವರು ಏನು ಹೇಳ್ತಾರೆ, ದಾಖಲೆಗಳನ್ನ ಕೊಟ್ಟಿದ್ದೀವಿ. ಈ ಹಗರಣ ಹೇಗಾಗಿದೆ ಎಂದರೆ ಇವರು ಅವರನ್ನ ಬೈಯ್ಯೋದು, ಅವರು ಇವರನ್ನ ಬೈಯ್ಯೋದು.

ನಾನು ನಿನ್ನೆ ಮಹದೇವಪ್ಪ ಅವರ ಬಳಿ ಈ ಬಗ್ಗೆ ಮಾತಾಡಿದ್ದೀನಿ. ಅವರು 5ನೇ ತಾರೀಖು ಮೈಸೂರಿಗೆ ಬರ್ತಾರೆ. ಅವತ್ತು ಅವರ ಬಳಿ ಮಾತನಾಡಿ, ಮುಖ್ಯಮಂತ್ರಿ ಅವರನ್ನ ಭೇಟಿ ಮಾಡ್ತೀವಿ. ಮುಖ್ಯಮಂತ್ರಿಗಳ ಗಮನಕ್ಕೆ ಬಾರದೆಯೆ ಈ ರೀತಿ ಅಪಪ್ರಚಾರ ಆಗ್ತಾ ಇದೆ. ಹೀಗಾಗಿ ಮುಖ್ಯಮಂತ್ರಿಗಳಿಗೆ ಸಂಪೂರ್ಣ ವಿಷಯ ತಿಳಿಸಿ, ನಿಮ್ಮ ಮರ್ಯಾದೆ ನೀವು ಕಳೆದುಕೊಳ್ಳಬೇಡಿ, ಮೈಸೂರಿನ ಗೌರವನು ಉಳಿಯಲಿ. ನಿಮಗೆ ಅವಮಾನ ಆಗುವುದು ತಪ್ಪಬೇಕು. ಈ ಹಗರಣಗಳು, ವಾದ ವಿವಾದಗಳು ಬೇಡ ಅಂತ ಅವರ ಬಳಿಯೂ ಮಾತಾಡ್ತೀವಿ. ನಮಗೀರೋ ವಿಶ್ವಾಸದಲ್ಲಿ ಬಹುಶಃ ಅವರೇ ಇದನ್ನ ಬೇಡ ಅಂತ ಹೇಳುವ ಪರಿಸ್ಥಿತಿ ಬರುತ್ತದೆ. ಜೆಪಿ ನಗರದಲ್ಲಿ ಅವರ ಹೆಸರಲ್ಲಿ ಒಂದು ಉದ್ಯಾನವನ ಇದೆ ಎಂದಿದ್ದಾರೆ.

