ಸುದ್ದಿಒನ್,ಕೊಪ್ಪಳ,ಮೇ.16: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಮಹತ್ವದ ಹೇಳಿಕೆ ನೀಡಿದ್ದಾರೆ. 2028ರ ವಿಧಾನಸಭಾ ಚುನಾವಣೆಯವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ರಾಯರೆಡ್ಡಿ, ನನಗೆ ತಿಳಿದಿರುವ ಮಟ್ಟಿಗೆ ಇನ್ನೂ ಎರಡು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂಬ ನಂಬಿಕೆ ನನಗಿದೆ. ಹೈಕಮಾಂಡ್ ನಾಯಕತ್ವ ಬದಲಾವಣೆ ಮಾಡಬೇಕು ಎಂದರೆ ಮೊದಲು ಶಾಸಕರ ಹಾಗೂ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು. ಆದರೆ ಸದ್ಯಕ್ಕೆ ರಾಜ್ಯದಲ್ಲಿ ಅಂತಹ ಯಾವುದೇ ಪರಿಸ್ಥಿತಿ ಉದ್ಭವಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಕೇರಳ ಮುಖ್ಯಮಂತ್ರಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ರಾಹುಲ್ ಗಾಂಧಿ ಅವರು ಬರುವ ಸಾಧ್ಯತೆಯಿದ್ದು, ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರೊಂದಿಗೆ ಈ ಕುರಿತು ಚರ್ಚೆ ನಡೆಸಬಹುದು ಎಂದೂ ಅವರು ತಿಳಿಸಿದರು.
ಸಂಪುಟ ವಿಸ್ತರಣೆಯ ಕುರಿತು ಮಾತನಾಡಿದ ಮೇ 30ರೊಳಗೆ ಸಚಿವ ಸಂಪುಟ ಪುನರಚನೆ ಅಥವಾ ವಿಸ್ತರಣೆ ನಡೆಯುವ ಸಾಧ್ಯತೆಯಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷಗಳಾಗುತ್ತಿರುವುದರಿಂದ, ಸಂಪುಟದಲ್ಲಿ ಹೊಸಬರಿಗೆ ಅವಕಾಶ ನೀಡಬೇಕಾಗಿದೆ. ಜನಪರ ಆಡಳಿತ ನೀಡಿದರೆ ಮುಂದಿನ ಅವಧಿಗೂ ಅಧಿಕಾರಕ್ಕೆ ಬರಲು ಸಹಕಾರಿಯಾಗುತ್ತದೆ ಎಂದರು.
ಅಲ್ಲದೆ, 2028ರ ಚುನಾವಣೆಯಲ್ಲಿಯೂ ಸಿದ್ದರಾಮಯ್ಯ ಅವರ ನಾಯಕತ್ವ ಹಾಗೂ ಡಿ.ಕೆ. ಶಿವಕುಮಾರ್ ಅವರ ಕೆಪಿಸಿಸಿ ಅಧ್ಯಕ್ಷತೆಯಲ್ಲಿಯೇ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರಲು ಹಾದಿ ಸುಗಮವಾಗಲಿದೆ ಎಂದು ರಾಯರೆಡ್ಡಿ ಅಭಿಪ್ರಾಯಪಟ್ಟರು. ಮುಂದುವರಿದು, “ನನ್ನ ಪ್ರಕಾರ ಸದ್ಯಕ್ಕೆ ಯಾವುದೇ ನಾಯಕತ್ವ ಬದಲಾವಣೆ ಆಗುವುದಿಲ್ಲ,” ಎಂದು ಅವರು ಮತ್ತೊಮ್ಮೆ ಒತ್ತಿ ಹೇಳಿದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









