ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಚಳ್ಳಕೆರೆ : ಕಳೆದ ವರ್ಷ ಮಳೆ-ಬೆಳೆ ಕೊರತೆಯಿಂದ ಜಿಲ್ಲೆಯ ಪುಣ್ಯಕೋಟಿ ಸರ್ಕಾರಿ ಗೋಶಾಲೆಯಲ್ಲಿ ನೀರು, ಮೇವು ಹಾಗೂ ನೆರಳಿನ ಸಮಸ್ಯೆ ಕಾಣಿಸಿಕೊಂಡಿದ್ದು, ಸಮಸ್ಯೆ ಗಂಭೀರವಾಗುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ರಾಜ್ಯ ಸರ್ಕಾರವು 2022ರಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದ ನಂತರ ಜಾನುವಾರುಗಳ ಸಂರಕ್ಷಣೆಗಾಗಿ ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ಸ್ಥಾಪಿಸುವ ಯೋಜನೆಯಡಿ ಚಳ್ಳಕೆರೆ-ಚಿತ್ರದುರ್ಗ ಹೆದ್ದಾರಿಯ ಕುರುಡಿಹಳ್ಳಿ ಸಮೀಪ ಜಿಲ್ಲಾಡಳಿತದಿಂದ 10 ಎಕರೆ ಪ್ರದೇಶದಲ್ಲಿ ಸುಮಾರು 82 ಲಕ್ಷ ರೂ. ವೆಚ್ಚದಲ್ಲಿ ಪುಣ್ಯಕೋಟಿ ಸರ್ಕಾರಿ ಗೋಶಾಲೆ ನಿರ್ಮಿಸಲಾಗಿದೆ. ಪ್ರಸ್ತುತ ಈ ಗೋಶಾಲೆಯಲ್ಲಿ 90ಕ್ಕೂ ಹೆಚ್ಚು ಜಾನುವಾರುಗಳನ್ನು ಸಾಕಲಾಗುತ್ತಿದೆ.
ಆದರೆ ಬೇಸಿಗೆ ಬಿಸಿಲು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೇವು ಹಾಗೂ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮೇವು ಖರೀದಿಗೆ ಇನ್ನೂ ಟೆಂಡರ್ ಕರೆಯದಿರುವುದರಿಂದ ಮೇವು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ ಎಂದು ತಿಳಿದುಬಂದಿದೆ. ಗೋಶಾಲೆಯ ಗೋದಾಮಿನಲ್ಲಿ ಉಳಿದಿರುವ ಮೇವು ಇನ್ನೂ ಒಂದೆರಡು ದಿನಗಳಿಗೆ ಮಾತ್ರ ಸಾಕಾಗುವಷ್ಟು ಇದೆ ಎನ್ನಲಾಗಿದೆ.
ಕಳೆದ ವರ್ಷವೂ ಗೋಶಾಲೆಯಲ್ಲಿ ನೀರಿನ ಸಮಸ್ಯೆ ಎದುರಾಗಿತ್ತು. ಈಗಿರುವ ಕೊಳವೆಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಮತ್ತೊಂದು ಕೊಳವೆಬಾವಿ ತೋಡಿಸುವ ಅಗತ್ಯವಿದೆ ಎಂದು ಗೋಶಾಲೆಯ ಗೋರಕ್ಷಕರು ತಿಳಿಸಿದ್ದಾರೆ.
ಈಗಾಗಲೇ ಗೋಶಾಲೆಯಲ್ಲಿ 90ಕ್ಕೂ ಹೆಚ್ಚು ಜಾನುವಾರುಗಳಿದ್ದು, ಇನ್ನಷ್ಟು ಜಾನುವಾರುಗಳು ಬಂದರೆ ಅವುಗಳನ್ನು ಮರಗಳ ನೆರಳಿನಲ್ಲಿ ಕಟ್ಟಬೇಕಾದ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನಹರಿಸಿ ಜಾನುವಾರುಗಳಿಗೆ ಮೇವು, ನೀರು ಹಾಗೂ ನೆರಳಿನ ವ್ಯವಸ್ಥೆ ಮಾಡಬೇಕು ಎಂಬುದು ಸ್ಥಳೀಯರ ಮನವಿಯಾಗಿದೆ.













