ಶಿವಾಜಿ ಮಹಾರಾಜರ ಶೌರ್ಯ ಮತ್ತು ಸಾಹಸ ಪರಾಕ್ರಮಗಳನ್ನು ಮುಂದಿನ ಪೀಳಿಗೆಗೆ  ತಿಳಿಸಬೇಕಾಗಿದೆ : ಕೆ.ಎಸ್. ನವೀನ್

suddionenews
1 Min Read

ಚಿತ್ರದುರ್ಗ: ಮೊಘಲರು, ಪರಕೀಯರನ್ನು ಮೆಟ್ಟಿನಿಂತ ವೀರಪುರುಷ ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ಮತ್ತು ಪರಾಕ್ರಮವನ್ನು ಪ್ರತಿ ಮನೆ ಮನೆಗೆ ತಿಳಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಕರೆ ನೀಡಿದರು.

ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಜಿಲ್ಲಾ ಘಟಕದ ವತಿಯಿಂದ ತರಾಸು ರಂಗಮಂದಿರದಲ್ಲಿ ಭಾನುವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.

ಶೌರ್ಯ ಮತ್ತು ಸಾಹಸ ಪರಾಕ್ರಮಕ್ಕೆ ಹೆಸರುವಾಸಿಯಾಗಿದ್ದ ಶಿವಾಜಿ ಮಹಾರಾಜರ ವಿಚಾರಗಳನ್ನು ಮುಂದಿನ ಪೀಳಿಗೆಗೆ  ತಿಳಿಸಬೇಕಾಗಿದೆ. ಪ್ರತಿ ಮನೆ ಮನೆಯಲ್ಲೂ ಶಿವಾಜಿಯಂತವರು ಹಾಗೂ ಜೀಜಾಬಾಯಿ ಮಾತೆ ಜನಿಸಬೇಕಿದೆ. ದೀಮಂತ ಪರಾಕ್ರಮಿಯಾಗಿದ್ದ ಶಿವಾಜಿಮಹಾರಾಜರಲ್ಲಿ ಯುದ್ಧದ ಚಾಣಾಕ್ಷತೆ ಇತ್ತು. ಅದಕ್ಕಾಗಿ ಅವರ ಇತಿಹಾಸವನ್ನು ಜಗತ್ತಿಗೆ ಪರಿಚಯಿಸುವಂತಹ ಕೆಲಸವನ್ನು ದೇಶದ ಪ್ರಧಾನಿ ನರೇಂದ್ರ ಮೋದಿರವರು ಮಾಡುತ್ತಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.

ಕೆಳಗೋಟೆಯಲ್ಲಿರುವ ಅಂಬಾಭವಾನಿ ದೇವಸ್ಥಾನದ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಮುದಾಯ ಭವನ ಅರ್ಧಕ್ಕೆ ನಿಂತಿರುವುದರಿಂದ ಸರ್ಕಾರದಿಂದ ಅನುದಾನ ತಂದು ಸಮುದಾಯಭವನವನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.

ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ರಾಜ್ಯ ಖಜಾಂಚಿ ಹಾಗೂ ಪ್ರಭಾರ ಪ್ರಧಾನ ಕಾರ್ಯದರ್ಶಿ ಟಿ.ಆರ್. ವೆಂಕಟರಾವ್ ಚವಾಣ್, ವ್ಯವಸ್ಥಾಪಕ ಶ್ರೀನಿವಾಸ್ ರಾವ್ ಮಗರ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯೆ ಶ್ರೀಮತಿ ಉಷಾಬಾಯಿ ಗೋಪಾಲ್ ರಾವ್ ಜಾದವ್, ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ್‍ರಾವ್ ಜಾದವ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಜಾದವ್ ವೇದಿಕೆಯಲ್ಲಿದ್ದರು.

ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿವೇತನ ಅಂಗವಿಕಲರಿಗೆ ಹಾಗೂ ವೃದ್ದರಿಗೆ ಸಹಾಯಧನ ವಿತರಿಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *