ಧಾರವಾಡ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಶಿಕ್ಷೆ ವಿಧಿಸಲ್ಪಟ್ಟಿರುವ ಹಿನ್ನೆಲೆ, ಅವರ ಶಾಸಕ ಸ್ಥಾನ ತಾಂತ್ರಿಕವಾಗಿ ಈಗಾಗಲೇ ರದ್ದಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಎದ್ದಿರುವ ಗೊಂದಲಗಳಿಗೆ ತೆರೆ ಎಳೆದರು.

“ನ್ಯಾಯಾಲಯದಿಂದ ಶಿಕ್ಷೆ ವಿಧಿಸಲ್ಪಟ್ಟ ಕ್ಷಣದಿಂದಲೇ ನಿಯಮಾನುಸಾರ ಜನಪ್ರತಿನಿಧಿಯ ಸ್ಥಾನ ಸ್ವಯಂಚಾಲಿತವಾಗಿ ರದ್ದಾಗುತ್ತದೆ. ಇದರಲ್ಲಿ ಸಭಾಧ್ಯಕ್ಷರಿಗೆ ಪ್ರತ್ಯೇಕವಾಗಿ ರದ್ದುಪಡಿಸುವ ಅಧಿಕಾರ ಇರುವುದಿಲ್ಲ. ಆದರೆ, ನ್ಯಾಯಾಲಯವು ಶಿಕ್ಷೆಗೆ ತಡೆಯಾಜ್ಞೆ ನೀಡಿದರೆ ಮಾತ್ರ ಸದಸ್ಯತ್ವ ಮರುಸ್ಥಾಪನೆ ಸಾಧ್ಯ,” ಎಂದು ಖಾದರ್ ವಿವರಿಸಿದರು.ಶಾಸಕರ ಅನರ್ಹತೆ ವಿಚಾರದಲ್ಲಿ ಪಕ್ಷಪಾತ ಮಾಡಲಾಗುತ್ತಿದೆ ಎಂಬ ಆರೋಪವನ್ನು ಅವರು ತಳ್ಳಿಹಾಕಿದರು.
“ಈ ಪ್ರಕ್ರಿಯೆಯಲ್ಲಿ ತಾರತಮ್ಯದ ಪ್ರಶ್ನೆಯೇ ಇಲ್ಲ. ಸ್ಥಾನ ರದ್ದಾದ ಬಳಿಕ ಸದನಕ್ಕೆ ಹಾಜರಾಗಲು ಸಾಧ್ಯವಿಲ್ಲ. ಕಾನೂನು ಬಗ್ಗೆ ಅರಿವಿಲ್ಲದವರಿಗೆ ಸ್ಪಷ್ಟನೆ ನೀಡುತ್ತಿದ್ದೇನೆ,” ಎಂದು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದರು.ಈ ಪ್ರಕರಣದಲ್ಲಿ ಸಭಾಧ್ಯಕ್ಷರ ಕರ್ತವ್ಯವು ಸದನಕ್ಕೆ ಮಾಹಿತಿ ನೀಡುವುದಷ್ಟೇ ಎಂದು ತಿಳಿಸಿದ ಅವರು, ಪ್ರಕರಣದ ಕಾನೂನು ಅಂಶಗಳನ್ನು ಪರಿಶೀಲಿಸಲು ವಿಧಾನಸಭಾ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ ಎಂದರು.
ನಿಯಮಾವಳಿಗಳ ಪ್ರಕಾರವೇ ಕ್ರಮ ಕೈಗೊಳ್ಳಲಾಗುತ್ತಿದ್ದು, ಯಾವುದೇ ವಿಳಂಬವಾಗಿಲ್ಲ ಎಂದೂ ಸ್ಪಷ್ಟಪಡಿಸಿದರು.ಜನಪ್ರತಿನಿಧಿಗಳ ನ್ಯಾಯಾಲಯದಿಂದ ಶಿಕ್ಷೆ ವಿಧಿಸಿರುವ ಹಿನ್ನೆಲೆ, ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.



















