ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 28 : ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೊ.ಜಿ.ಪರಮೇಶ್ವರಪ್ಪ ಅವರು ಮಿತಬಾಷಿ, ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಶ್ರಮಿಸಿದ ವ್ಯಕ್ತಿ ಎಂದು ಸಾಹಿತಿ ಟೀಕಾ ಸುರೇಶ ಗುಪ್ತ ಅಭಿಪ್ರಾಯಪಟ್ಟಿದ್ದಾರೆ.
ಸ್ನೇಹಮಯಿ ಪರಮೇಶ್ವರಪ್ಪ ಅವರು ನನ್ನ ಸಹೋದ್ಯೋಗಿಗಳಲ್ಲಿ ಒಬ್ಬರು. ಇತ್ತೀಚಿನ ದಿನಗಳಲ್ಲಿ ಛಂದೋಬದ್ಧ ರಚನೆಗಳತ್ತ ಕವಿಮನಸ್ಸುಗಳು ದೂರವಾಗುತ್ತಿರುವಾಗ ಇವರು ತಮ್ಮೆಲ್ಲ ಪರಿಶ್ರಮದ ಫಲವನ್ನು ಷಟ್ಪದಿ ಕಾವ್ಯಗಳಲ್ಲಿ ಸೃಜನಾತ್ಮಕ ನೆಲೆಯಲ್ಲಿ ರಚಿಸುತ್ತಾ ನಿರಂತರವಾದ ಆಸ್ಥೆ ವಹಿಸಿರುವರು. ಈಗಾಗಲೇ ಹಲವು ಕೃತಿಗಳು ಬೆಳಕು ಕಂಡು ಪಾರಮಾರ್ಥಿಕ ಹಾಗೂ ಲೌಕಿಕದ ಬೆಸೆಗಂಟಿನAತೆ ಅವುಗಳು ಜನಾದರಣೆ ಗಳಿಸಿವೆ ಎಂದು ತಿಳಿಸಿದ್ದಾರೆ.

ನಾನು ರಚಿಸುವ ಪ್ರತಿಯೊಂದು ಮುಕ್ತ ಕವನವನ್ನು ಓದಿ ತಮ್ಮ ಅಭಿಪ್ರಾಯ ಹಾಗೂ ಕೆಲವು ಪರಿಷ್ಕರಣೆಯ ಸೂಚನೆಗಳನ್ನು ನನ್ನೊಡನೆ ಹಂಚಿಕೊಂಡಿರುವರು. ನನ್ನ ಏಳುನೂರ ಎಂಬತ್ತು ಮುಕ್ತಕಗಳನ್ನು ಸಂವಾದದ ಮನಸಿನಲ್ಲಿ ಅವರು ಅನಿಸಿಕೆ ವ್ಯಕ್ತಪಡಿಸಿರುವುದಲ್ಲದೆ ನನ್ನ ಮುಕ್ತಕ ಮಂದಾರ ಹಾಗೂ ಪಾರಾವಾರ ಕೃತಿಗಳಿಗೆ ಮುನ್ನುಡಿಯನ್ನು ಬರೆದುಕೊಟ್ಟಿರುವರು. ಅವರನ್ನು ಚಿತ್ರದುರ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಮಂಜಸ ಜತೆಗೆ ವೈಯಕ್ತಿಕವಾಗಿ ಸಂತಸ ತಂದಿದೆ ಎಂದು ಹೇಳಿದ್ದಾರೆ.


















