Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಖೈದಿಗಳಿಗೆ ನೀಡುವಷ್ಟು ಹಣ ಎಸ್‌ಸಿ-ಎಸ್‌ಟಿ ಹಾಸ್ಟೆಲ್ ಮಕ್ಕಳಿಗೆ ನೀಡುತ್ತಿಲ್ಲ: ಟಿ.ಡಿ. ರಾಜಗಿರಿ ಆಕ್ರೋಶ

---Advertisement---

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 17 :  ಜೈಲುಗಳಲ್ಲಿ ಖೈದಿಗಳಿಗೆ ನೀಡುವಷ್ಟು ಹಣವನ್ನು ಪರಿಶಿಷ್ಟ ಜಾತಿ.ವರ್ಗದ ಹಾಸ್ಟಲ್ ಮಕ್ಕಳಿಗೆ ನೀಡಲಾಗುತ್ತಿಲ್ಲವೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರಾದ ಟಿ.ಡಿ ರಾಜಗಿರಿ ಅಸಮಾಧಾನ ವ್ಯಕ್ತಪಡಿಸಿದರು.

ಹೊಳಲ್ಕೆರೆ ತಾಲ್ಲೂಕು, ಚಿತ್ರಹಳ್ಳಿಯ ಮೊರಾರ್ಜಿ ದೇಸಾಯಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಮತ್ತು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ವಿಚಾರಧಾರೆಗಳ ಕುರಿತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರಗಳು ಪರಿಶಿಷ್ಟ ಜಾತಿ,ಜನಾಂಗದವರಿಗೆ ಬಾರಿ ನೆರವು ನೀಡಲಾಗುತ್ತಿದೆ ಎಂಬ ಅರ್ಥದಲ್ಲಿ ಬಿಂಬಿಸಲಾಗುತ್ತಿದೆ ಆದರೆ ಸರ್ಕಾರಿ ಮತ್ತು ಮುರಾರ್ಜಿ ಹಾಸ್ಟಲ್‍ಗಳಲ್ಲಿ ನೋಡಿದರೆ ಸಾಮಾನ್ಯರಂತೆ ಮಕ್ಕಳು ಕೂಡ ಊಟ ಮಾಡಿ ಶಿಕ್ಷಣ ಪಡೆದುಕೊಳ್ಳಬೇಕಾದ ಪರಿಸ್ಥಿತಿಯಲ್ಲಿದ್ದಾರೆಂದು ಹೇಳಿದರು.

ಭಾರತದ ಸಂವಿಧಾನದ ಪಾವಿತ್ರತೆ ಮತ್ತು ಆಶಯವನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ ಎಂದು ಬೌದ್ಧ ವಿಹಾರ ಕೋಟೆ ನಾಡು ಟ್ರಸ್ಟ್‍ನ ಅಧ್ಯಕ್ಷರು ಹಾಗೂ ದಲಿತ ಸಂಘರ್ಷ ಸಮಿತಿ ರಾಜ್ಯ ಅಧ್ಯಕ್ಷರಾದ ಟಿ.ಡಿ.ರಾಜಗಿರಿ ರವರು ಹೇಳಿದರು.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಭಾರತದ ಸಂವಿಧಾನವನ್ನು ರಚಿಸಿ ದೇಶಕ್ಕೆ ಅರ್ಪಣೆ ಮಾಡುವ ಸಂದರ್ಭದಲ್ಲಿ ಈ ದೇಶದಲ್ಲಿ ಜಾತಿಯತೆಯನ್ನು ತೊಡೆದು ಸಮಾನತೆಯನ್ನು ಸಾರುವಂತ ಪ್ರಯತ್ನವನ್ನು ಮಾಡಿದ್ದಾರೆ ಎಂದು ಹೇಳಿದರು.

ಜಾತಿ ವ್ಯವಸ್ಥೆಯಲ್ಲಿ ಶ್ರೇಣಿಕೃತ ಸಮಾಜವನ್ನು ನಿರ್ಮೂಲನೆ ಮಾಡಿ ಸಮಸಮಾಜ ನಿರ್ಮಾಣದ ಕನಸು ಕಂಡವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಆದರೂ ಕೂಡ ಇನ್ನೂ ಕೂಡ ಸಮಾಜದಲ್ಲಿ ಅಸಮಾನತೆ, ಜಾತಿವ್ಯವಸ್ಥೆ ತಾಂಡವಾಡುತ್ತಿದ್ದು, ಇವುಗಳ ನಿರ್ಮೂಲನೆಗಾಗಿ ಸಂವಿಧಾನ ಆಶಯಗಳನ್ನು ಎತ್ತಿ ಹಿಡಿಯಬೇಕಾದ ಅನಿವಾರ್ಯತೆ ಇದೆ ಎಂದರು.

ಮೊರಾರ್ಜಿ ಶಾಲೆ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸಲಾಗುತ್ತಿರುವ ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳಿಗೆ ಮಾಸಿಕವಾಗಿ ರೂ. 1,500/-ಗಳನ್ನು ನೀಡಲಾಗುತ್ತಿದೆ. ಆದರೆ ಜೈಲುಗಳಲ್ಲಿ ಖೈದಿಗಳಾಗಿರುವಂತವರಿಗೆ ದಿನಕ್ಕೆ 250 ರಂತೆ ವೆಚ್ಚ ಮಾಡಲಾಗುತ್ತಿದೆ. ಇಲ್ಲೂ ಕೂಡ ಶೋಷಿತರಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಕೀಲರು ಹಾಗೂ ಸಂಸ್ಕøತಿ ಚಿಂತಕರಾದ ಪರಮೇಶ್ ಮೌರ್ಯ ರವರು ಮಾತನಾಡಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಭಾರತದ ಸಂವಿಧಾನದ ಮೂಲಕ ದೇಶದಲ್ಲಿ ಸಮಾನತೆಯನ್ನು ತರುವ ಜೊತೆಗೆ ಆಸ್ತಿ ಹಂಚಿಕೆಯಲ್ಲೂ ಕೂಡ ಸಮಾನತೆ ಬರಬೇಕೆಂದು ಕನಸು ಕಂಡಿದ್ದರು. ಆದರೆ ಈ ದೇಶದಲ್ಲಿ ಆಡಳಿತ ನಡೆಸಿದಂತಹ ಸರ್ಕಾರಗಳು ತಾರತಮ್ಯ ನೀತಿಯನ್ನು ಅನುಸರಿಸಿಕೊಂಡು ಬರುವ ಮೂಲಕ ಇಂದಿಗೂ ಕೂಡ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಎಂದು ಭೇದ ಭಾವವನ್ನು ಸೃಷ್ಟಿಸುವ ಮೂಲಕ ಸಮಾಜದಲ್ಲಿ ಅಸಮಾನತೆಯನ್ನು ಸೃಷ್ಟಿ ಮಾಡಲಾಗುತ್ತದೆ ಎಂದು ಹೇಳಿದರು.

ದೇಶದಲ್ಲಿ ಪ್ರಮುಖವಾಗಿ ಮೂರು ವಲಯಗಳನ್ನು ಗುರುತಿಸಲಾಗಿದೆ. ಕೃಷಿ, ಕೈಗಾರಿಕೆ, ಸೇವಾ ವಲಯ ಎಂದು ಗುರುತಿಸಲಾಗಿದೆ. ಆದರೆ ಈ ಮೂರು ವಲಯಗಳಲ್ಲೂ ಪರಿಶಿಷ್ಟ ಜಾತಿ ವರ್ಗ, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಇಂದಿಗೂ ಸಹ ಸಮಾನತೆಯನ್ನು ಕಲ್ಪಿಸಲಾಗಿಲ್ಲ. ಹಾಗಾಗೀ ಬಡತನ, ಅನಕ್ಷರತೆ, ಅಸ್ಪøಶ್ಯತೆಯಂತಹ ಸಾಮಾಜಿಕ ಪಿಡುಗುಗಳು ಜೀವಂತವಾಗಿದೆ ಎಂದು ಹೇಳಿದರು.

ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಹರ್ಷ ರವರು ಮಾತನಾಡಿ ಭಾರತ ಸಂವಿಧಾನ ಮತ್ತು ಅಂಬೇಡ್ಕರ್ ರವರ ಆಶಯಗಳ ಕುರಿತು ನಡೆದಂತಹ ವಿಚಾರಗೋಷ್ಠಿಯು ನಿಜಕ್ಕೂ ಕೂಡ ಅರ್ಥಪೂರ್ಣವಾಗಿದ್ದು, ಇಂದಿನ ಯುವಪೀಳಿಗೆಗೆ ಸಂವಿಧಾನದ ವಿಚಾರಗಳನ್ನು ಪ್ರಚಾರಪಡಿಸುವಂತಹ ಕಾರ್ಯ ಮತ್ತಷ್ಟು ತ್ವರಿತವಾಗಬೇಕೆಂದು ಹೇಳಿದರು.

ಭಾರತ ಸಂವಿಧಾನ ಮತ್ತು ಡಾ.ಅಂಬೇಡ್ಕರ್ ರವರ ಆಶಯಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲಾಮಟ್ಟದ ದೌರ್ಜನ್ಯ ತಡೆ ಕಾಯ್ದೆ ಸಮಿತಿಯ ಸದಸ್ಯರಾದ ನರೇನಹಳ್ಳಿ ಅರುಣಕುಮಾರ್ ರವರು ಸಮಾನತೆಯ ಆಶಯದೊಂದಿಗೆ ದೇಶಕ್ಕೆ ಪ್ರಬುದ್ಧವಾದ ಸಂವಿಧಾನವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ರವರು ನೀಡಿದ್ದು, ಬಹುಜನರು ಬಾಬಾ ಸಾಹೇಬ್ ರವರ ಆಶಯಗಳನ್ನು ಅರ್ಥೈಸಿಕೊಂಡು ಸಮಾನತೆಯ ಬದುಕು ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತಿಪ್ಪೇಸ್ವಾಮಿ ಹೆಗಡೆ, ನಿವೃತ್ತ ಪ್ರಾಚಾರ್ಯರಾದ ಡಾ.ನಾಗಪ್ಪ ಮುಂತಾದವರು ಉಪಸ್ಥಿತರಿದ್ದರು.

 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now